ಗುಬ್ಬಿ: ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಎಲ್ಲಾ ಶಾಖೆಯ ಸಿಬ್ಬಂದಿಯೊಂದಿಗೆ ಮಾತನಾಡಿ ಸಾರ್ವಜನಿಕರ ಕೆಲಸವನ್ನು ನಿಯಮಾನುಸಾರ ತುರ್ತಾಗಿ ಮಾಡಲು ಸಲಹೆ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲನೆ ಸೇರಿದಂತೆ ನೂತನ ಇ-ಕಚೇರಿ ಬಗ್ಗೆ ಸಿಬ್ಬಂದಿಗಳೊಂದಿಗೆ ಚರ್ಚೆ ಮಾಡಿದರು.
ಬೆಳಿಗ್ಗೆ ಅನಿರೀಕ್ಷಿತ ಭೇಟಿ ನೀಡಿದ ಸಚಿವರು ನೇರ ತಾಲ್ಲೂಕು ಶಿರಸ್ತೇದಾರ್ ಅವರ ಕೊಠಡಿಗೆ ಎಂಟ್ರಿ ಕೊಟ್ಟು ಅಲ್ಲಿನ ಸಿಬ್ಬಂದಿಗಳ ಜೊತೆ ಮಾತನಾಡಿದರು. ಇ-ಕಚೇರಿ ಅಳವಡಿಕೆ ಮಾಡಿರುವ ಬಗ್ಗೆ ಪ್ರಶ್ನಿಸಿದ ಅವರು ಮ್ಯಾಪಿಂಗ್ ಮಾಡಿದ ಬಳಿಕ ಉಪ ವಿಭಾಗಾಧಿಕಾರಿಗಳ ಬಳಿಗೆ ಹೊತ್ತು ಹಾಕುವ ಬಗ್ಗೆ ತಹಶೀಲ್ದಾರ್ ಅವರನ್ನು ಪ್ರಶ್ನಿಸಿದರು.
ಕಂಪ್ಯೂಟರ್ ಬಳಕೆ ಬಗ್ಗೆ ಸಿಬ್ಬಂದಿಗಳಿಗೆ ಆಗುವ ಕುಂದು ಕೊರತೆಗಳ ಬಗ್ಗೆ ತಿಳಿದು ಅಲ್ಲಿನ ನೂನ್ಯತೆ ಸರಿ ಪಡಿಸಿಕೊಂಡು ಶೀಘ್ರದಲ್ಲಿ ಸಾರ್ವಜನಿಕರ ಅರ್ಜಿ ಇ ಕಚೇರಿ ಮೂಲಕ ಅಪ್ಲೋಡ್ ಆಗಬೇಕು. ಅರ್ಜಿಯ ವಿಚಾರ ಪಾರದರ್ಶಕವಾಗಿ ನಿರ್ವಹಣೆ ಆಗಬೇಕು. ಜೊತೆಗೆ ಗ್ರಾಮೀಣ ಜನರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಭೂಮಿ ಶಾಖೆಗೆ ತೆರಳಿ ಅಲ್ಲಿನ ಸಿಬ್ಬಂದಿಗಳ ಜೊತೆ ಆನ್ಲೈನ್ ಸಮಸ್ಯೆ ಬಗ್ಗೆ ಚರ್ಚಿಸಿದರು ಉಪ ನೋಂದಣಿ ಕಚೇರಿಯಿಂದ ವಿಭಾಗ ಪತ್ರ ಕಾವೇರಿ 1 ಸಾಫ್ಟ್ವೇರ್ ಮೂಲಕ ಇಲ್ಲಿಗೆ ಬರುತ್ತಿಲ್ಲ.ಈ ಸಮಸ್ಯೆ ಬಗೆಹರಿಸಲು ಜಿಲ್ಲಾ ನೋಂದಣಾಧಿಕಾರಿಗಳಿಗೆ ಸೂಚಿಸಿ ನಂತರ ಅಭಿಲೇಖಾಲಯ ಭೂ ಮಾಪನ ಇಲಾಖೆ ಭೇಟಿ ನೀಡಿ ಸರ್ವೇ ಕಾರ್ಯ ವಿಳಂಬದ ಬಗ್ಗೆ ಸಾರ್ವಜನಿಕ ದೂರು ಇರುವ ಬಗ್ಗೆ ಪ್ರಶ್ನಿಸಿದರು.
ಟಿಪ್ಪಣಿ,ಸ್ಕ್ಯಾನ್ ಬಗ್ಗೆ ಮಾಹಿತಿ ಹಾಗೂ ನಕ್ಷೆ ರೆಕಾರ್ಡ್ ರೂಂ ವೀಕ್ಷಣೆ ಮಾಡಿದರು.ಮುಜರಾಯಿ ಇಲಾಖೆ ವ್ಯವಸ್ಥೆ ಬಗ್ಗೆ ದಾಖಲೆ ಪರಿಶೀಲನೆ ಮಾಡಿದರು.ನಂತರ ಸಾರ್ವಜನಿಕರ ಅಹವಾಲು ಆಲಿಸಿದರು ನಂತರ ನಾಡ ಕಚೇರಿಗಳ ವ್ಯವಸ್ಥೆ ವೀಕ್ಷಿಸಲು ದಿಢೀರ್ ನಿಟ್ಟೂರು ನಾಡ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್, ಕಂದಾಯ ಆಯುಕ್ತ ಸುನಿಲ್ ಕುಮಾರ್, ಪ್ರಕೃತಿ ವಿಕೋಪ ನಿರ್ವಹಣೆ ಕಾರ್ಯದರ್ಶಿ ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಆರತಿ, ಗ್ರೇಡ್ 2 ತಹಶೀಲ್ದಾರ್ ಶಶಿಕಲಾ,ತಾಪಂ ಇಓ ಪರಮೇಶ್ ಕುಮಾರ್ ಇತರರು ಇದ್ದರು.