ಜಿಲ್ಲೆತುಮಕೂರುಮಧುಗಿರಿರಾಜಕೀಯ

ಸೆ.6 ರಂದು ಮಧುಗಿರಿಯಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಮಧುಗಿರಿ : ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಸೆ.6 ರಂದು ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಧುಗಿರಿ ಯ ಇತಿಹಾಸದಲ್ಲೇ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.

ಪಟ್ಟಣದ ರಾಜೀವ್ ಗಾಂಧೀ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಕ್ಕಳ ಪೌಷ್ಟಿಕತೆಗೆ ಸಹಾಯಕವಾಗುವ ಉದ್ದೇಶದಿಂದ 2013 ರಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು
ಜಾರಿಗೆ ತಂದಿದ್ದರು. ಇದರಿಂದ ಅಂಗನವಾಡಿ ಸೇರಿದಂತೆ 1 ರಿಂದ 10 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ 65 ಲಕ್ಷ ಮಕ್ಕಳಿಗೆ ಪ್ರಯೋಜನವಾಗಿದೆ. ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದು 10 ವರ್ಷಗಳಾಗಿದ್ದು, ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ಜಿಲ್ಲೆಗೆ ಬಂದ ಕಾರ್ಯಕ್ರಮವನ್ನು ಮಧುಗಿರಿಗೆ ಹೊಡೆದುಕೊಂಡು ಬಂದಿದ್ದಾರೆ ಅವರಿಗೂ ಧನ್ಯವಾದ ಎಂದ ಅವರು,
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮಗಳ ಅಗತ್ಯತೆಗಳ ಕೆಲಸ ಭರದಿಂದ ಸಾಗಿದೆ ಎಂದರು.

 

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಭವನ ಲೋಕಾರ್ಪಣೆ ಮಾಡುವರು. ಬಳಿಕ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ದಶಮಾನೋತ್ಸವ ಕಾರ್ಯಕ್ರಮಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಿಗೆ ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡಿದರು. ಆದರೆ ಇಂದು ನಮ್ಮ ಸರ್ಕಾರ ಟೀಕೆಗಳನ್ನು ಸುಳ್ಳು ಮಾಡಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿದ್ದೇವೆ. ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯಕ್ಕೆ ಸಂದೇಶ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸುಮಾರು 156 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 13 ಸರ್ಕಾರಿ ಮಳಿಗೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲವಾಗುವ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆಯ ಕಾರ್ಯಕ್ರಮ ಯಶಸ್ವಿಯಾಗಿದೆ. 2 ಕೋಟಿ 19 ಲಕ್ಷ ಗ್ರಾಹಕರಿಗೆ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ಸುಮಾರು 13910 ಕೋಟಿಯಷ್ಟು ವಿದ್ಯುತ್ ಗ್ರಾಹಕರಿಗೆ ಸೇರಿದೆ ಎಂದು ಅವರು ಹೇಳಿದರು.
ಗೃಹಲಕ್ಷ್ಮಿ ಯೋಜನೆ 1.28 ಕೋಟಿ ಮಹಿಳೆಯರಿಗೆ ಸಹಕಾರವಾಗಿದೆ. 33 ಸಾವಿರ ಕೋಟಿ ಒಂದು ವರ್ಷಕ್ಕೆ ಮೀಸಲಿರಿಸಲಾಗಿದೆ. ಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ 1.5 ಕೋಟಿ ಜನ ತುಮಕೂರು ಜಿಲ್ಲೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆಗೆ ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದರೂ ಕೊಡುತ್ತಿಲ್ಲ. ನಾವು ಕೊಟ್ಟ ಮಾತು ಉಳಿಸಿಕೊಳ್ಳುವುದಕ್ಕೆ ಅಕ್ಕಿ ಸಿಗುವವರೆಗೆ 5 ಕೆ.ಜಿ. ಅಕ್ಕಿಗೆ ಹಣ ಕೊಡುತ್ತಿದ್ದೇವೆ ಎಂದ ಅವರು, ರಾಜ್ಯದಲ್ಲಿ. 1.28 ಕೋಟಿ ಪಡಿತರ ಚೀಟಿದಾರರಿದ್ದು, ಅವರಿಗೆ ಅನುಕೂಲವಾಗುತ್ತಿದೆ ಎಂದರು.

 

ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಿಲ್ಲಾಡಳಿತ, ತಾಲೂಕು ಆಡಳಿತ ಕಾರ್ಯಕ್ರಮದ ಯಶಸ್ಸಿಗೆ ಶ್ರಮ ವಹಿಸಿದ್ದು, ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಕೆಲಸ ನಡೆಯುತ್ತಿದೆ. ಹೈನುಗಾರಿಕೆ ಗ್ರಾಮೀಣ ಭಾಗದಲ್ಲಿ ಪೂರಕವಾಗಿದ್ದು, ರಾಜ್ಯದಲ್ಲಿ ಇನ್ನೂ ಹೆಚ್ಚು ಹಾಲು ಉತ್ಪಾದನೆಯಾಗಬೇಕು. ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಬೇಕು. ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಕೆಗೆ ಹಾಲು ಒಕ್ಕೂಟ ಶ್ರಮ ವಹಿಸಬೇಕು ಎಂಬ ಉದ್ದೇಶದಿಂದ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕೆಎಂಎಫ್ ಅಧ್ಯಕ್ಷ ಬೀಮಾ ನಾಯಕ್ ಮಾತನಾಡಿ ರೈತರು ಬಹಳಷ್ಟು ಸಂಕಷ್ಟದಲ್ಲಿದ್ದು, ರೈತರಿಗೆ ಹಾಲಿನ ಧರ ಹೆಚ್ಚು ಮಾಡಬೇಕು ಎಂದು ಸಹಕಾರ ಸಚಿವರು ಸಿಎಂ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ 3 ರೂಗಳನ್ನು ಹೆಚ್ಚಿಸಿ ನೇರವಾಗಿ ರೈತರಿಗೇ ಜಮಾ ಮಾಡಲಾಗಿದೆ.
ಆಗಸ್ಟ್ 1 ರಿಂದ ಈ ಯೋಜನೆ ಜಾರಿಮಾಡಿದ್ದು, ಇದು ಕಾಂಗ್ರೆಸ್ ಸರ್ಕಾರದ 6 ನೇ ಗ್ಯಾರಂಟಿ. ಕ್ಷೀರಭಾಗ್ಯ ಯೋಜನೆಗೆ 10 ವರ್ಷ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ತುಮಕೂರಿನಲ್ಲಿ ಕಾರ್ಯಕ್ರಮ ಮಾಡಲು ಸಹಕಾರ ಸಚಿವರು ಹೇಳಿದ್ದರು. ಆದರೆ ರೈತರಿಗೆ 3 ರೂಗಳ ಸಹಾಯ ಧನ ಹೆಚ್ಚಿಸಿದ ಹಿನ್ನೆಲೆಯಲ್ಲಿ ಸಹಕಾರ ಸಚಿವರ ಸ್ವಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದ ಅವರು ಕೆಎಂಎಫ್ ಸೇರಿದಂತೆ 14 ಒಕ್ಕೂಟಗಳು ಲಾಭದಲ್ಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ. ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ,ಶಾಸಕ ಹೆಚ್ ವಿ ವೆಂಕಟೇಶ್,
ಮಾಜಿ ಸದಸ್ಯರಾದ ಎಂ.ಸಿ. ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿ.ಪಂ ಸಿಇಒ ಜೆ. ಪ್ರಭು, ಉಪವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ ವುಲ್ಲಾ, ತಾ. ಪಂ ಇಓ ಲಕ್ಷ್ಮಣ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ, ಡಿಸಿಸಿ ಬ್ಯಾಂಕ್ ನಿರ್ದೇಶಕರಗಳಾದ ಬಿ. ನಾಗೇಶ್ ಬಾಬು, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ ಕೆ ನಂಜುಂಡಯ್ಯ, ಎನ್ ಗಂಗಣ್ಣ, ಮುಖಂಡರಾದ ಕಲ್ಲಹಳ್ಳಿ ದೇವರಾಜ್, ತುಂಗೋಟಿ ರಾಮಣ್ಣ, ನಿಖಿತ್ ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು..

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker