ಗುಬ್ಬಿ : ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸುಧಾರಣೆ ಸಾಧ್ಯವಾಗಿಲ್ಲ.ಈ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ ಸರ್ಕಾರ ಮೊದಲ ಹಂತದಲ್ಲಿ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಆದ್ಯ ಫೌಂಡೇಶನ್ ಟ್ರಸ್ಟ್ ಹಾಗೂ ಎಸ್.ಜಿ.ಗ್ರೂಪ್ ಇನ್ ಶ್ಯೂರೆನ್ಸ್ ಸರ್ವಿಸ್ ಲಿ.ಕಂಪನಿ ಪ್ರಾರಂಭೋತ್ಸವ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಂಚಾಯಿತ್ ರಾಜ್ ಯೋಜನೆಯಲ್ಲಿ ಮಹಿಳೆಯರ ಪಾತ್ರ ಶೇಕಡಾ 50 ರಷ್ಟು ಪ್ರಸ್ತುತ ಕಂಡಿದೆ.ಈ ಹಿನ್ನಲೆ ಮಹಿಳಾ ಸಬಲೀಕರಣಕ್ಕೆ ನಮ್ಮ ಸರ್ಕಾರ ಕೂಡ ಗ್ಯಾರಂಟಿ ಯೋಜನೆ ಮೂಲಕ ಸಾಥ್ ನೀಡುವ ಕೆಲಸ ಮಾಡಿದ್ದೇವೆ ಎಂದರು.
ಹದಿನಾಲ್ಕು ವರ್ಷಗಳ ಒಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಸರ್ಕಾರವೇ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಜೊತೆಗೆ ಸಾಕ್ಷರ ದೇಶವಾಗಿ ಭಾರತ ಗುರುತಿಸಿಕೊಂಡಿದೆ.ನಂತರದಲ್ಲಿ ಮಹಿಳೆಯ ಪಾತ್ರ ಅರಿತು ಪುರುಷರ ಸಮಾನವಾಗಿ ಅವರಿಗೂ ಅವಕಾಶ ನೀಡುತ್ತಿದ್ದೇವೆ.ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿ ಎಂದು ನಾವು ಎರಡು ಸಾವಿರ ಹಣ ನೀಡಿದರೆ ಟೀಕೆ ಟಿಪ್ಪಣಿ ಸಾಕಷ್ಟು ಬಂದಿದೆ. ಆದರೂ ನಮ್ಮ ನಿಲುವು ಸಾಕಾರ ಗೊಳ್ಳಲಿದೆ ಎಂದ ಅವರು ಸಾರ್ವಜನಿಕ ಬದುಕಿನಲ್ಲಿ ಜನ ಮನ್ನಣೆ ಗಳಿಸಿರುವ ಕೆಲಸ ಮಾಡಿದ ಎಚ್.ಎಸ್.ಗಿರೀಶ್ ತನ್ನ ಮಗಳ ಹೆಸರಿನಲ್ಲಿ ಆರಂಭಿಸಿದ ಎರಡೂ ಸಂಸ್ಥೆ ಸಮಾಜಮುಖಿ ಎನಿಸಿದೆ. ಹುಟ್ಟುಹಬ್ಬವನ್ನು ಆರೋಗ್ಯ ಶಿಕ್ಷಣ ಸೇವಾ ಕಾರ್ಯದ ಮೂಲಕ ತೋರಿಸಿದ ಕಾರ್ಯಕ್ರಮ ಅರ್ಥಪೂರ್ಣ ಎಂದರು.
ಬೆಳ್ಳಾವಿ ಮಠದ ಶ್ರೀ ಕಾರದ ವೀರ ಬಸವ ಸ್ವಾಮೀಜಿ ಮಾತನಾಡಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಶಿಕ್ಷಣ ನೀಡುವುದು ಉತ್ತಮ. ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆ ಮಾಡುವ ಗುಣ ಎಲ್ಲರಲ್ಲೂ ಕಾಣುವುದಿಲ್ಲ. ಗಿರೀಶ್ ಅವರು ತಮ್ಮ ದುಡಿಮೆಯ ಒಂದಂಶವನ್ನು ಸಮಾಜ ಸೇವೆಗೆ ವಿನಿಯೋಗ ಮಾಡಿರುವುದು ಸಾರ್ಥಕ ಕೆಲಸ ಎಂದರು.
ಶ್ರೀ ಆದ್ಯ ಫೌಂಡೇಶನ್ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಎಚ್.ಎಸ್.ಗಿರೀಶ್ ಮಾತನಾಡಿ ಸಮಾಜ ಸೇವಾ ಕಾಳಜಿ ಹೊಂದಿದ ಕೆಲ ಸ್ನೇಹಿತರ ಜೊತೆ ಸೇವಾ ಕಾರ್ಯ ಮಾಡುವ ಒಂದು ಟ್ರಸ್ಟ್ ರಚಿಸಿಕೊಂಡು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಡವರಿಗೆ ಸಹಕಾರ ಯೋಜನೆ ರೂಪಿಸಲಾಯಿತು. ಈ ಹಿನ್ನಲೆ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ ನಡೆಸಿ ತಾಲ್ಲೂಕಿನ ಸರ್ಕಾರಿ ಶಾಲಾ 2500 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಬ್ಯಾಗ್, ಇಂಗ್ಲಿಷ್ ಪುಸ್ತಕ ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಿದ್ದಾರ್ಥ ಆಸ್ಪತ್ರೆ, ಸಿದ್ದಗಂಗಾ ಆಸ್ಪತ್ರೆ, ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಎಸ್ ಎಲ್ ಆರ್ ಆಸ್ಪತ್ರೆ ಸಹಯೋಗದಲ್ಲಿ ನಡೆದ ಆರೋಗ್ಯ ಶಿಬಿರಕ್ಕೆ ಸಾವಿರಾರು ಮಂದಿ ಆಗಮಿಸಿ ತಪಾಸಣೆ ಮಾಡಿಸಿಕೊಂಡರು. ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಿ ಸಿದ್ದಾರ್ಥ ಸಂಸ್ಥೆಯ ಶಿಕ್ಷಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಅಧ್ಯಕ್ಷತೆಯನ್ನು ಹೊಸಹಳ್ಳಿ ಸಂಸ್ಥಾನದ ಮುತ್ತಿನ ಮುಮ್ಮಡಿ ಏಳು ನಾಡ ಪ್ರಭುಗಳ ವಂಶಸ್ಥ ಹುಚ್ಚಿರಪ್ಪಾಜಿ ಅರಸ್ ವಹಿಸಿದ್ದರು. ಡಾ.ಜಿ.ಪರಮೇಶ್ವರ್ ಅವರ ಧರ್ಮಪತ್ನಿ ಕನ್ನಿಕಾ ಪರಮೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ, ತಹಶೀಲ್ದಾರ್ ಬಿ.ಆರತಿ, ಉದ್ಯಮಿ ಎಸ್.ಡಿ.ದಿಲೀಪ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ, ವಿದ್ಯಾವಾಹಿನಿ ಸಂಸ್ಥೆಯ ಪ್ರದೀಪ್ ಕುಮಾರ್, ನಿವೃತ್ತ ಶಿಕ್ಷಕಿ ಇಂದ್ರಮ್ಮ ಇತರರು ಇದ್ದರು.