ಪಾವಗಡ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪಾರದರ್ಶಕವಾದ ಆಡಳಿತಕ್ಕೆ ಜನತೆ ಮನಸೋತಿದ್ದು ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ತರುವ ಹಂಬಲದಲ್ಲಿ ದೇಶದ ಜನರಿದ್ದಾರೆ ಎಂದು ಶಾಸಕ ಹೆಚ್.ವಿ.ವೆಂಕಟೇಶ್ ತಿಳಿಸಿದರು.
ಬುಧವಾರ ಪಟ್ಟಣದ ಎಸ್‌ಎಸ್‌ಕೆ ರಂಗಮಂದಿರದಲ್ಲಿ ಏರ್ಪಡಿಸಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷ ರಾಜ್ಯದ ಸಮಗ್ರ ಅಭಿವೃದ್ದಿಯೊಂದಿಗೆ ಕೊಟ್ಟ ಮಾತಿನಂತೆ ಮಹಿಳೆಯರ ಸಬಲೀಕರಣಕ್ಕೂ ಶ್ರಮಿಸುತ್ತಿದೆ, ರಾಜ್ಯದ ಪ್ರತಿ ಕುಟುಂಬದ ಯಜಮಾನಿ ಮಹಿಳೆಯ ಖಾತೆಗೆ ಎರಡು ಸಾವಿರ ಹಣ ನೀಡುವ ಗೃಹಲಕ್ಷ್ಮೀ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಜೆ, ರಾಹುಲ್ ಗಾಂಧಿ ರವರುಗಳು ಮೈಸೂರಿನಲ್ಲಿ ಚಾಲನೆ ನೀಡುತ್ತಿದ್ದು ಕ್ಷೇತ್ರದ 34 ಗ್ರಾ.ಪಂಗಳಲ್ಲಿ ನೇರ ವೀಕ್ಷಣೆಗೆ ಅವಕಾಶ ಮಾಡಿರುವುದು ಸಂತಸ ತಂದಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ತಾಂಡವಾಡುತ್ತಿತ್ತು, ಇಡಿ ಸೇರಿದಂತೆ ಸರ್ಕಾರದ ಉನ್ನತ ಇಲಾಖೆಗಳ ಅಧಿಕಾರ ಬಳಸಿ ದ್ವೇಷದ ರಾಜಕಾರಣ ಮಾಡುತ್ತಿದ್ದ ಬಿಜೆಪಿಯನ್ನು ರಾಜ್ಯದ 135 ಕ್ಷೇತ್ರದ ಜನತೆ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದ್ದರ ಸಲುವಾಗಿ ಜನಪರ ಯೋಜನೆಗಳು ಸಮರ್ಥವಾಗಿ ಅನುಷ್ಠಾನವಾಗುತ್ತಿವೆ ಎಂದು ಪ್ರಶಂಶೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಜನಪರ ಆಡಳಿತ ವೈಖರಿ ಸಹಿಸದ ಬಿಜೆಪಿ ನಾಯಕರು ರಾಜ್ಯದ ದಿವಾಳಿ ಕುರಿತು ಮಾತನಾಡುತ್ತಾರೆ, ಆದರೆ ಬಿಜೆಪಿಯ 40% ಕಮಿಷನ್, ಕಾರ್ಪೊರೇರ‍್ಸ್ ಪರ ಯೋಜನೆಗಳ ಮೂಲಕ ಲೂಟಿ ಮಾಡಿದ್ದರ ಬಗ್ಗೆ ಏಕೆ ತಿಳಿದಿಲ್ಲ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹೀನಾಯ ಫಲಿತಾಂಶ ಕಂಡಿರುವ ಕುಮಾರಸ್ವಾಮಿ ರವರಿಗೆ ಮತಿಭ್ರಮಣೆಯಾಗಿದ್ದು ಯಾವಾಗ ಏನು ಮಾತನಾಡಬೇಕು?, ಏನು ಮಾತನಾಡಬಾರದು ಎಂಬುದರ ಅರಿವಿಲ್ಲದೆ ವರ್ತಿಸುತ್ತಿರುವುದು ರಾಜ್ಯದ ಜನತೆ ಮನಗಂಡಿದ್ದಾರೆ ಎಂದರು.
ಜನಪರ ಮತ್ತು ಪಾರದರ್ಶಕ ಆಡಳಿತ ಹಾಗೂ ಕೊಟ್ಟ ಮಾತಿನಂತೆ ನಡೆದ ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಕ್ಷ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ, ರಾಜ್ಯ ಮತ್ತು ದೇಶದ ಜನತೆ ಎಂದಿಗೂ ಕುತಂತ್ರ ರಾಜಕಾರಣ ಸಹಿಸುವುದಿಲ್ಲ ಎಂದು ಟಾಂಗ್ ನೀಡಿದರು.
ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ಸ್ವಾತಂತ್ರ ನಂತರ ಭಾರತದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ದಿ ಕಾರ್ಯಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವರದರಾಜು, ಇಒ ಜಾನಕಿರಾಮ್, ಪುರಸಭೆ ಮುಖ್ಯಾಧಿಕಾರಿ ಷಂಷುದ್ದೀನ್, ಪುರಸಭೆ ಮಾಜಿ ಅದ್ಯಕ್ಷರಾದ ರಾಮಾಂಜಿನಪ್ಪ, ಗರ‍್ರಪ್ಪ, ವೇಲುರಾಜು, ಗಂಗಮ್ಮ, ಧನಲಕ್ಷ್ಮೀ ಸದಸ್ಯರಾದ ಸುದೇಶ್ ಬಾಬು, ರಾಜೇಶ್, ರವಿ, ಮಹಮ್ಮದ್ ಇಮ್ರಾನ್, ಮಣಿ, ಮಾಲಿನ್ ತಾಜ್, ಸುಧಾಲಕ್ಷ್ಮೀ ಅನ್ನಪೂರ್ಣ, ಸಿಡಿಪಿಒ ನಾರಾಯಣ, ಎಸಿಡಿಪಿಒ ರಕೀಬುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.