ಸಮಾಜ ಸೇವಕ ಹೆಬ್ಬೂರಿನ ಹೆಚ್.ವಿ.ಪಾಂಡುರಂಗ ಶೆಟ್ಟರ್ ನಿಧನ : ಮೃತದೇಹ ಶ್ರೀದೇವಿ ಆಸ್ಪತ್ರೆಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಶೆಟ್ಟರ್
ತುಮಕೂರು : ಸಮಾಜ ಸೇವಕ, ನಿವೃತ್ತ ಉಪ ಪ್ರಾಂಶುಪಾಲರು,ಶ್ರೀ ಗಣಪತಿ ಪೌಡಶಾಲೆಯ ಆಡಳಿತಾಧಿಕಾರಿಗಳು ಹಾಗೂ ಹಿರಿಯ ರಂಗಭೂಮಿ ಕಲಾವಿದರು,ರಂಗಭೂಮಿ ಕಲಾವಿದರ ಸಂಘದ ಗೌರವ ಸಲಹಾ ಸಮಿತಿ ಸದಸ್ಯರು ಆದ ಹೆಚ್.ವಿ. ಪಾಂಡುರಂಗಶೆಟ್ಟರ್ (80) ಅವರು ತಾಲ್ಲೂಕಿನ ಹೆಬ್ಬೂರಿನಲ್ಲಿ ನಿಧನರಾದರು.
ಕಳೆದ 4 ದಿನಗಳ ಹಿಂದೆಯಷ್ಟೇ ಅನಾರೋಗ್ಯಕ್ಕೆ ತುತ್ತಾಗಿದ್ದ ಇವರು ಇಂದು ಮುಂಜಾನೆ 4.45ರಲ್ಲಿ ಇಹಲೋಕ ತ್ಯಜಿಸಿರುವ ಶ್ರೀಯುತರು ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶ್ರೀಯುತರು ಹೆಬ್ಬೂರಿನಲ್ಲಿ ಶಿಕ್ಷಣ ಸಂಸ್ಥೆಯೊಂದರ ಆಡಳಿತಾಧಿಕಾರಿಗಳಾಗಿ, ಶಿಕ್ಷಕರಾಗಿ, ಸಮಾಜ ಸೇವಕರಾಗಿ, ಕಲಾವಿದರಾಗಿ ಅಪಾರ ಸೇವೆ ಸಲ್ಲಿಸಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಶಿಕ್ಷಕ ಪ್ರಶಸ್ತಿ ಹಾಗೂ ಬೆಳ್ಳಿ ಕಿರೀಟ ಪ್ರಶಸ್ತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಗೌರವ ಪುರಸ್ಕರಕ್ಕೆ ಭಾಜನರಾಗಿದ್ದರು.
ಶ್ರೀಯುತರ ಪಾರ್ಥೀವ ಶರೀರವನ್ನು ಹೆಬ್ಬೂರಿನ ಶ್ರೀ ಗಣಪತಿ ಪೌಡಶಾಲೆಯ ಆವರಣ ಹಾಗೂ ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು.
ರಂಗಭೂಮಿಯ ಹಿರಿಯ ಕಲಾವಿದರಾದ ಡಾ.ಲಕ್ಷ್ಮಣ್‌ದಾಸ್,ಪತ್ರಕರ್ತರಾದ ಎಸ್.ನಾಗಣ್ಣ,ಹೆಚ್.ಎಸ್.ಪರಮೇಶ್,ಸಿ.ಜಯಣ್ಣ
ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ ಸಂಘದ ಪದಾಧಿಕಾರಿಗಳಾದ ಹೆಚ್.ಬಿ.ಪುಟ್ಟಬೋರಯ್ಯ,ಎಸ್.ರಾಜಣ್ಣ,ಹೆಚ್.ಆರ್.ರಂಗಪ್ಪ,ಎಂ.ವಿ.ನಾಗಣ್,ಚಿಕ್ಕಹನುಮಂತಯ್ಯ,ಮಂಜುಳಮ್ಮ,ಕೆ.ರಂಗರಾಜು,ರಾಮಣ್ಣ ಸೇರಿದಂತೆ ಅನೇಕ ಕಲಾವಿದರುಗಳು,ಶಿಕ್ಷಕರುಗಳು,ಅಭಿಮಾನಿಗಳು ಪಾಂಡರಂಗಶೆಟ್ಟರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಪಾಂಡುರಂಗಶೆಟ್ಟರು ತಮ್ಮ ದೇಹವನ್ನು ದಾನ ಮಾಡಿರುವ ಹಿನ್ನೆಲೆಯಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜಿಗೆ ಇವರ ಮೃತ ದೇಹವನ್ನು ಕುಟುಂದವರು ಹಸ್ತಾಂತರಿಸಿದರು.