ಅಂತರಾಷ್ಟ್ರೀಯಜಿಲ್ಲೆತುಮಕೂರುಸುದ್ದಿ

ಛಾಯಾಚಿತ್ರಗಳು ಇತಿಹಾಸದ ಘಟನೆಗಳ ಬಗ್ಗೆ ಸೂಚ್ಯ ಹಾಗೂ ಸ್ಪಷ್ಟ ಸಂದೇಶ ತಲುಪಿಸುವ ಶಕ್ತಿ ಹೊಂದಿದೆ : ಜಿ. ಪ್ರಭು

ವಿಶ್ವ ಛಾಯಾಗ್ರಹಣ ದಿನಾಚರಣೆ

ತುಮಕೂರು : ಛಾಯಾಚಿತ್ರಗಳು ಇತಿಹಾಸದ ಅನೇಕ ಘಟನೆಗಳ ಬಗ್ಗೆ ಸೂಚ್ಯ ಹಾಗೂ ಸ್ಪಷ್ಟವಾದ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಯನ್ನು ಇಂದಿಗೂ ಹೊಂದಿದೆ. ಅನೇಕ ಐತಿಹಾಸಿಕ ಘಟನೆಗಳನ್ನು ಸಾಕ್ಷಿಕರಿಸುವುದಕ್ಕಾಗಿ ಛಾಯಾಗ್ರಾಹಕರು ಕೆಲಸ ಮಾಡಿರುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ. ಪ್ರಭು ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿಂದು ಏರ್ಪಡಿಸಲಾಗಿದ್ದ “ವಿಶ್ವ ಛಾಯಾಗ್ರಹಣ ದಿನ” ಹಾಗೂ ಆರು ಮಂದಿ ಅರ್ಹ ಛಾಯಾಗ್ರಾಹಕರುಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಧ್ಯಮರಂಗವೂ ವಿಶಿಷ್ಟವಾದ ಬರವಣಿಗೆಯ ಮೂಲಕ ಜ್ಞಾನವನ್ನು ರೂಪಿಸುವಲ್ಲಿ, ದೃಶ್ಯ ಮಾಧ್ಯಮ ಹಾಗೂ ಛಾಯಾಗ್ರಹಣ ಮಾಧ್ಯಮಗಳು ಜನರಿಗೆ ಸ್ಪಷ್ಟವಾದ ಸಂದೇಶವನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.
ಯಾವುದೇ ಒಂದು ದೇಶವು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುವಾಗ ಆ ದೇಶದ ಶಕ್ತಿಯನ್ನು ತುಂಬುವುದು ಮಾನವ ಸಂಪನ್ಮೂಲವಾಗಿದೆ. ಶಿಕ್ಷಣ ವ್ಯವಸ್ಥೆಯ ಮೂಲಕ ಜನರಿಗೆ ಹಂತ ಹಂತವಾಗಿ ವಿಜ್ಞಾನವನ್ನು ತಿಳಿಸಲಾಗುತ್ತದೆ. ಯಾವ ದೇಶದಲ್ಲಿ ವಿಜ್ಞಾನದ ಜೊತೆಗೆ ಜ್ಞಾನವು ದೊರೆಯುತ್ತದೆಯೋ ಅಂತಹ ದೇಶ ದುಡಿಮೆಯಾಗಲಿ, ಸಂಸ್ಕಾರದಲ್ಲಾಗಲಿ, ಸಂಸ್ಕೃತಿಯಲ್ಲಾಗಲಿ ಸದೃಢವಾಗಿರುತ್ತದೆ ಎಂದು ತಿಳಿಸಿದರು.
ಭಾರತದ ಸ್ವಾತಂತ್ರ‍್ಯದ ನಂತರ ಶಿಕ್ಷಣದ ಕ್ಷೇತ್ರವನ್ನು ಒಮ್ಮೆ ಅವಲೋಕನೆ ಮಾಡಿ ನೋಡಿದಾಗ ಜ್ಞಾನ ಮತ್ತು ವಿಜ್ಞಾನ ಎರಡಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಕಳೆದ ನಾಲ್ಕು ದಶಕಗಳಿಂದ ವಿಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎಂದು ತಿಳಿಸಿದರು.
ವಿಜ್ಞಾನದಿಂದ ಎಷ್ಟೇ ದುಡಿದರು ಕೂಡ ಜೀವನಕ್ಕೆ ಮೌಲ್ಯ ಬರುವುದು ಜ್ಞಾನ ಮತ್ತು ಸಂಸ್ಕಾರದಿಂದ ಮಾತ್ರ. ಶಿಕ್ಷಣ ಮುಗಿದ ನಂತರ ಜ್ಞಾನ ಪಡೆಯಬೇಕಾದರೆ ಶೇಕಡಾ 95ರಷ್ಟು ಜನ ಮಾಧ್ಯಮವನ್ನು ಆಶ್ರಯಿಸುತ್ತಾರೆ. ಈ ಮಾಧ್ಯಮಗಳು ಜನಸಾಮಾನ್ಯರ ಸಂಸ್ಕಾರ ಸಂಸ್ಕೃತಿ ದೇಶದ ಅಭಿವೃದ್ಧಿ ದೇಶಕ್ಕೆ ಮಾನವ ಸಂಪನ್ಮೂಲವನ್ನು ಶಕ್ತಿದಾಯಕ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಕೆಲಸವನ್ನು ಮಾಧ್ಯಮ ಮಾಡುತ್ತದೆ ಎಂದು ಹೇಳಿದರು.
ಪ್ರಸ್ತುತ ಕ್ಲಿಷ್ಟ ಸನ್ನಿವೇಶಗಳ ದಿನಗಳಲ್ಲಿ ಜನರು ದುಡಿಮೆಯ ಹಿಂದೆ ಬಿದ್ದಿರುವ ಸಂದರ್ಭದಲ್ಲಿ ಅವರಿಗೆ ಸಂಸ್ಕಾರವನ್ನು ಕಲಿಸುವ ಶಕ್ತಿ ಇರುವುದು ಮಾಧ್ಯಮ ಕ್ಷೇತ್ರಕ್ಕೆ ಮಾತ್ರ ಎಂದರು.

ಪ್ರಜಾಪ್ರಭುತ್ವದ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿ ಪತ್ರಿಕಾರಂಗವು ಗುರುತಿಸಿಕೊಂಡಿದೆ. ಈ ಮೂರು ಅಂಗಗಳಿಗಿಂತ ಹೆಚ್ಚಿನ ಜವಾಬ್ದಾರಿ ಪತ್ರಿಕಾ ರಂಗಕ್ಕಿದೆ. ಆದ್ದರಿಂದ ಜನಸಾಮಾನ್ಯರಿಗೆ ಸಮಾಜದ ಎಲ್ಲಾ ಆಗು ಹೋಗುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವುದು ಪತ್ರಕರ್ತ ಕರ್ತವ್ಯವಾಗಿದೆ. ಇದನ್ನು ಅರಿತು ತಮ್ಮ ವೃತ್ತಿಪರತೆಯನ್ನು ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜ್ಯೋತಿ ಗಣೇಶ್ ಅವರು, ಪತ್ರಕರ್ತರು, ಛಾಯಾಗ್ರಾಹಕರ ಕುಟುಂಬ ಮತ್ತು ಮಕ್ಕಳಿಗೆ ಶಿಕ್ಷಣ, ಆರೋಗ್ಯವಿಮೆ, ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಮಂಡಳಿಯ ಜವಬ್ದಾರಿಯಾಗಿದೆ ಎಂದರು.
ಹಲವಾರು ಸಂದರ್ಭಗಳಲ್ಲಿ ಛಾಯಾಗ್ರಾಹಕರು, ಪೊಲೀಸ್ ಛಾಯಾಗ್ರಾಹಕರು ದಂಗೆಗೆಳು ಸಂಭವಿಸಿದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ ಅವರು, ಹವ್ಯಾಸಿ ಛಾಯಾಗ್ರಾಹಕರು ತಮ್ಮ ಹವ್ಯಾಸಕ್ಕಾಗಿ ತಮ್ಮ ಬಳಿ ಇರುವ ಕ್ಯಾಮರಗಳನ್ನು ಬಳಸಿ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಾರೆ. ಆದರೆ ವೃತ್ತಿಪರ ಛಾಯಾಗ್ರಾಹಕರು ವಿವಿಧ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ತೆಗೆದು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದರು.
ಕಳೆದ 20 ವರ್ಷಗಳ ಹಿಂದೆ ಛಾಯಾಗ್ರಾಹಕರಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತುಂಬಾ ಮಹತ್ವವಿತ್ತು. ಆಗ ಛಾಯಾಚಿತ್ರ ತೆಗೆಯಲು ಫಿಲಂ ರೀಲ್‌ನ್ನು ಬಳಸಿಕೊಂಡು ಛಾಯಾಗ್ರಹಣ ಮಾಡುವಾಗ ಫಿಲಂ ರೀಲ್‌ನ 36 ಪೋಟೋಗಳು ಸರಿಯಾಗಿ ಬರುವಂತೆ ಯೋಚಿಸಿ ಫೋಟೋ ತೆಗೆಯುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಫಿಲಂ ರೀಲ್ ಹೋಗಿ ಡಿಜಿಟಲ್ ಯುಗ ಬಂದ ನಂತರ ಛಾಯಾಚಿತ್ರದ ಮೇಲೆ ಆಸಕ್ತಿ ಕಡಿಮೆಯಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ವೃತ್ತಿಪರ ಛಾಯಾಗ್ರಾಹಕರು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಅವರು, ವಿಶ್ವ ಛಾಯಾಗ್ರಹಣ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಜಿಲ್ಲೆಯ ಪತ್ರಕರ್ತರ ಏಳಿಗಾಗಿ ಸಂಘವು ಶ್ರಮಿಸುತ್ತಿದ್ದು, ಪತ್ರಿಕಾ ಭವನದ ನವೀಕರಣ, ಪ್ರರ್ತಕರ್ತರಿಗೆ ಆರೋಗ್ಯ ವಿಮೆ ಮುಂತಾದ ಸೌಲಭ್ಯಗಳನ್ನು ಕಲ್ಪಸಿಕೊಡಲಾಗಿದೆ. ಜಿಲ್ಲೆಯ ಎಲ್ಲಾ ಪತ್ರಕರ್ತರು ಒಗ್ಗೂಡಿ ಮುನ್ನಡೆಯಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆರು ಜನ ಅರ್ಹ ಛಾಯಾಗ್ರಾಹಕರುಗಳಾದ ಶೇಷ, ಚಂದ್ರಶೇಖರ್, ಟಿ.ಎನ್. ರಾಮದಾಸ್, ವಿಜಯಲಕ್ಷಿö್ಮ, ಟಿ.ಜಿ.ಲೋಕೇಶ್, ಎಸ್ ಎನ್ ಮುರಳಿ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್.ಮಮತ, ಕೆ.ಯು.ಡಬ್ಲೂö್ಯ.ಜೆ. ಪ್ರಧಾನ ಕಾರ್ಯದರ್ಶಿಯಾದ ಟಿ ರಘುರಾಮ್, ಪ್ರಜಾಪ್ರಗತಿ ದಿನ ಪತ್ರಿಕೆಯ ಸಂಪಾದಕರಾದ ಎಸ್ ನಾಗಣ್ಣ, ಅನು ಛಾಯಾಗ್ರಹಣದ ಮಾಲೀಕರಾದ ಶಾಂತರಾಜು ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker