ಹೆಬ್ಬೂರು – ಗೂಳೂರು ಏತ ನೀರಾವರಿ ಯೋಜನೆ : ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಬಿ. ಸುರೇಶಗೌಡ ಚಾಲನೆ
ತುಮಕೂರು : ಹೆಬ್ಬುರು ಗೂಳೂರು ಏತ ನೀರಾವರಿ ಯೋಜನೆಯಡಿ ಕರಡಿಗೆರೆ ಕಾವಲ್ ನಲ್ಲಿ ನಿರ್ಮಾಣವಾಗಿರುವ ಪಂಪ್ ಹೌಸ್ ನಲ್ಲಿ ಬಟನ್ ಒತ್ತುವುದರ ಮೂಲಕ ಬಾಣಾವರ ಮತ್ತು ನರುಗನಹಳ್ಳಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶಗೌಡ ಇಂದು ಚಾಲನೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಕನಸಿನ ಕೂಸು ಇದು ಇದನ್ನು ನನಸು ಮಾಡಿಕೊಟ್ಟ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ನಮ್ಮ ಕ್ಷೇತ್ರದ ಹೆಬ್ಬುರು ಗೂಳೂರು ಹೋಬಳಿ ಜನ ಕೃತಜ್ಞರು ಎಂದು ಸುರೇಶಗೌಡ ಹೇಳಿದರು.
ಇಲ್ಲಿಂದ ಪಂಪ್ ಆದ ನೀರು 52 ಕೆರೆಗಳಿಗೆ ಹರಿಯಲಿದೆ ಮೊದಲ ಹಂತದ 10 ದಿನಗಳಲ್ಲಿ ಬಾಣಾವರ ಹಾಗೂ ನರಗುನಹಳ್ಳಿ ಕೆರೆಗಳು ತುಂಬುತ್ತವೆ ಎಂದು ಸುರೇಶಗೌಡ ತಿಳಿಸಿದರು.
ಕರ್ನಾಟಕದಲ್ಲಿ ಏತ ನೀರಾವರಿ ಯೋಜನೆ ಇದು ಈ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮಕ್ಕೆ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಹಾಗೂ ಅದಿ ಚುಂಚನಗಿರಿಯ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಾಕ್ಷೀಕರಿಸಿದ್ದರು. ಈ ಯೋಜನೆಯ ಉದ್ಘಾಟನೆಗೂ ಈ ಇಬ್ಬರೂ ಬಂದಿದ್ದರು ಎಂದು ಸುರೇಶಗೌಡ ತಿಳಿಸಿದರು.
ನಿಗದಿತ ಕಾಲಮಿತಿಯಲ್ಲಿ ಹೆಬ್ಬೂರು ಗುಳೂರು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ ಲೋಕಾರ್ಪಣೆಗೊಳಿಸಿರುವಂತ ಇತಿಹಾಸ ನನ್ನದು ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ಒಂದು ಕಾಮಗಾರಿಯನ್ನು ಹಿಡಿದುಕೊಂಡರೆ ಅದು ತಾತ್ವಿಕ ಅಂತ್ಯ ಕಾಣುವವರಿಗೆ ನಾನು ವಿರಮಿಸುತ್ತಿರಲಿಲ್ಲ ಈ ಯೋಜನೆ ಸಾಕಾರಗೊಳ್ಳಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡಿದ್ದರ ಪರಿಣಾಮವಾಗಿ ಇಂದು ಕ್ಷೇತ್ರದ 52 ಕೆರೆಗಳಿಗೆ ನೀರು ಹರಿಯುವಂತಾಗಿದೆ.
ಇದು ನನ್ನ ಜೀವಮಾನದ ಕನಸಾಗಿತ್ತು ಈ ಕನಸನ್ನು ನನಸು ಮಾಡಿಸಿದಂತ ಕೀರ್ತಿ ನಮ್ಮ ಭಾರತೀಯ ಜನತಾ ಪಾರ್ಟಿಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಈ ಯೋಜನೆಯ ಬಗ್ಗೆ ಅನೇಕರು ಅನೇಕ ರೀತಿಯ ವ್ಯಾಖ್ಯಾನಗಳನ್ನು ಮಾಡಿದ್ದನ್ನು ಕೂಡ ಕಂಡಿದ್ದೇನೆ.
ಪೈಪ್ ಮೂಲಕ ನೀರು ತುಂಬಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದಂತವರಿಗೆ ತಾಲ್ಲೂಕಿನಲ್ಲೇ ಅತೀ ದೊಡ್ಡ ನಾಗವಲ್ಲಿ ಕೆರೆಯನ್ನು ತುಂಬಿಸಿ ಅವರಿಗೆ ಉತ್ತರಿಸಿದ್ದೇನೆ.
ಇದೇ ರೀತಿಯಲ್ಲಿ 52 ಕೆರೆಗಳಿಗೆ ನೀರು ತುಂಬಿಸುವ ಮುಖೇನ ಸದರಿ ಕೆರೆಗಳಿಂದ 250 ಗ್ರಾಮಗಳಿಗೆ ಬೆಂಗಳೂರು ಮಾದರಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಜಾರಿಗೊಳಿಸಿ ಅನುಷ್ಠಾನ ಮಾಡಿ ತೋರಿಸಿದ್ದೇನೆ ಎಂದು ಸುರೇಶ ಗೌಡ ತಿಳಿಸಿದರು.
ಬೃಹತ್ ಗಾತ್ರದ ಮೋಟಾರ್ ಗಳು ಚಾಲನೆಯಲ್ಲಿ ಇರುವುದರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮುನ್ನ ಸಂಬಂಧಪಟ್ಟ ಹೇಮಾವತಿ ನಾಲೆಯ ಪಂಪ್ ಆಪರೇಟರ್ ಗಳಿಗೆ ತಿಳಿಸುವಂತೆ ಬೆಸ್ಕಾಓ ಅಧಿಕಾರಿಗಳಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಕುಮಾರ್ ರಾಮಚಂದ್ರಯ್ಯ ಮುಖಂಡರಾದ ನರಸಿಂಹಮೂರ್ತಿ ಪರಮೇಶ್ವರಪ್ಪ ಈಶ್ವರಯ್ಯ. ವೀರಪ್ಪನ್.ಮಹದೇವಣ್ಣ, ಕೆ.ಆರ್ ಪಿ ಕಾರ್ಯಪಾಲಕ ಅಭಿಯಂತರರಾದ ವೀರೇಂದ್ರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಂಜನ್ ಉಪಸ್ಥಿತರಿದ್ದರು.