ವೃತ್ತಿ ರಂಗಭೂಮಿಯ ಹಿರಿಯ ಕಲಾವಿದ,ಅಮೋಘ ಅಭಿನಯ,ಭಾವ ಭಂಗಿಯಿಂದಲೇ ಪ್ರಚಂಡ ರಾವಣ, ಛಲದಂತಮಲ್ಲ ದುರ್ಯೋಧನ,ಬಲಭೀಮನಾಗಿ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಕಲಾಭಿಮಾನಿಗಳ, ಕಲಾ ರಸಿಕರ ಪ್ರೀತಿಯ ಜಗಣ್ಣನಾಗಿ ರಾರಾಜಿಸಿದ್ದ ಇರಕಸಂದ್ರ ಜಗನ್ನಾಥ್ ಅವರ ಕಲಾ ಪಯಣ ಸಂಶೋಧನೆ ಅರ್ಹವಾದ ವಿಷಯವೇ ಸರಿ.
ತಮ್ಮ 18ನೇ ವಯಸ್ಸಿನಲ್ಲಿ ಅಂದರೆ 1992ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾರ್ಮೋನಿಯಂ ಮಾಸ್ಟರ್ ಐ.ಎಲ್.ರಂಗಸ್ವಾಮಯ್ಯ ರವರ ನಿರ್ದೇಶನದಲ್ಲಿ ಮೂಡಿಬಂದ ದಾನುಶೂರ ಕರ್ಣ ನಾಟಕದಲ್ಲಿ ಮೊದಲ ಬಾರಿ ಭೀಮನ ಪಾತ್ರಕ್ಕೆ ಬಣ್ಣ ಹಂಚಿದ ಜಗನ್ನಾಥ್ ಮುಂದೆ ಅಭಿನಯಿಸಿದ್ದೆಲ್ಲವು ಇತಿಹಾಸ.25 ವರ್ಷಗಳ ಸುದೀರ್ಘ ರಂಗಭೂಮಿ ಸೇವೆಯಲ್ಲಿ ಹತ್ತು ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಿದ ಇವರು ನೂರಾರು ನವ ಕಲವಿದರನ್ನು ರಂಗಭೂಮಿ ಕ್ಷೇತ್ರಕ್ಕೆ ನಿಸ್ವಾರ್ಥವಾಗಿ ಪರಿಚಯಿಸಿದ್ದಾರೆ.
ಖಾತ್ಯ ಸಂಗೀತ ಹಾಗೂ ಹಾರ್ನೋಮಿಯಂ ಮಾಸ್ಟರ್ಗಳಾದ ಐ.ಎಲ್ .ರಂಗಸ್ವಾಮಯ್ಯ, ಎಸ್.ಸಿ.ಚಿಕ್ಕಣ್ಣ, ಬಿ.ಕೆ.ಸೀಬಿ ರಂಗಯ್ಯ,ನಾದಪ್ರಿಯ ಎಸ್.ಗಂಗಪ್ಪ,ಚಂದ್ರಶೇಖರ್ ಆಚಾರ್,ನಾಗರಾಜ್ ಆಚಾರ್,ಕಲ್ಕೆರೆ ನರಸಿಂಹಮೂರ್ತಿ, ಐ.ಆರ್. ವಿಶ್ವನಾಥ್ ಅವರುಗಳ ಗರಡಿಯಲ್ಲಿ ಪಳಗಿದ್ದ ಜಗನ್ನಾಥ್ ಹಾರ್ಮೋನಿಯಂ ನುಡಿಸುತ್ತಿರಲ್ಲವಷ್ಟೆ.ಇಡೀ ನಾಟಕವನ್ನು ಹೊರಗೆ ನಿಂತು ನಿರ್ದೇಶಿಸಿ,ಮಾರ್ಗದರ್ಶನ ಮಾಡಿ ಉತ್ತಮವಾಗಿ ಮೂಡಿಬರುವಂತೆ ನೋಡಿಕೊಳ್ಳುತ್ತಿದ್ದರು.
ಸದಾ ಹಸನ್ಮುಖಿಯಾಗಿ ಎಲ್ಲರೊಟ್ಟಿಗೂ ಸ್ನೇಹ ಮತ್ತು ವಿಶ್ವಾಸದಿಂದ ನಡೆದುಕೊಳ್ಳುವ ಗುಣಗಳಿಂದಲೇ ಎಲ್ಲರ ಬಾಯಲ್ಲಿಯೂ ಜಗಣ್ಣ ಎಂದೇ ಹೆಸರಾಗಿದ್ದರು.ಯಾರೊಂದಿಗೂ ದ್ವೇಷವಾಗಲಿ, ಅಸೂಯೆಯಾಗಲಿ ಮೂಡದಂತೆ ಪ್ರೀತಿಯಿಂದಲೇ ಗೆಲ್ಲುವ ಜಾಯಾಮಾನದ ಜಗನ್ನಾಥ್ ನಮ್ಮೊಂದಿಗೆ ಇದ್ದರು ಎನ್ನುವುದು ನಮ್ಮ ಹೆಮ್ಮೆ ಎನ್ನುವುದು ಹಲವು ಹಿರಿಯ-ಕಿರಿಯ ಕಲಾವಿದರ ಅಭಿಮತ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಇರಕಸಂದ್ರ ಗ್ರಾಮದ ತಂದೆ ನರಸಿಂಹಯ್ಯ,ತಾಯಿ ಚಂದ್ರಮ್ಮ ದಂಪತಿಯ ಹಿರಿಯ ಪುತ್ರರಾಗಿ 20/07/1974 ರಂದು ಜನಿಸಿದರು. ಇವರಿಗೆ ಮೂರು ಜನ ಸಹೋದರರು ಹಾಗೂ ಒರ್ವ ಸಹೋದರಿ ಇದ್ದು, ಇವರೇ ಹಿರಿಯ ಮಗ.25 ವರ್ಷದ ಸುದೀರ್ಘ ರಂಗಭೂಮಿ ಪಯಣದಲ್ಲಿ ಲಭ್ಯ ಮಾಹಿತಿಯಂತೆ ಹಲವು ಪ್ರಮುಖ ಪಾತ್ರಗಳಿಗೆ ಬಣ್ಣ ಹಂಚಿ ಪಾತ್ರಕ್ಕೆ ಮೆರುಗು ತಂದಿದ್ದಾರೆ.
ದುರ್ಯೋಧನನಾಗಿ-25 ಬಾರಿ,ಭೀಮ-16,ರಾವಣ-13,ಲಕ್ಷಣ-1,ಗುಹರಾಜ-1, ಯಮ-2, ದುಷ್ಟದುಮ್ಮ-1, ಶಿಶುಪಾಲ—1 ಶಕುನಿ-1, ಕೌಂಡ್ಲಿಕ-4, ಹಿರಣ್ಯಕಶ್ಯಪ್-3, ಮಾಯಾರಾವಣ-5, ಅಭಿಮಾನ್ಯು-1 ಸೇರಿದಂತೆ ನೂರಾರು ಪಾತ್ರಗಳಿಗೆ ಜೀವ ತುಂಬಿದ ಹೃದಯವಂತ ಕಲಾವಿದ ಜಗನ್ನಾಥ್.
ಲಾಭ-ನಷ್ಟದ ಲೆಕ್ಕಚಾರಗಳಿಂದ ಹೊರತಾಗಿ ವೃತ್ತಿ ರಂಗಭೂಮಿಯ ಬೆಳವಣಿಗೆ ಮತು ಉಳಿವಿಗಾಗಿ ಅವಿರತ ಪ್ರಯತ್ನದ ಮೂಲಕ ಶ್ರಮಿಸುತ್ತಿದ್ದ ಅವರು, ಇತ್ತೀಚಿಗೆ ಮೈಸೂರು ದಸರಾದಲ್ಲೂ ತಮ್ಮ ಕಲಾ ತಂಡದೊಂದಿಗೆ ನಾಟಕ ಪ್ರದರ್ಶನ ನೀಡಿ ಕಲಾ ರಸಿಕರ ಮನ ಗೆದ್ದಿದ್ದರು.
ರಾಜಧಾನಿ ಬೆಂಗಳೂರಿನ ರಂಗಮಂದಿರದಲ್ಲಿ ಪ್ರಾಯೋಜಿತ ನಾಟಕಗಳಲ್ಲಿ ಹಲವು ಪ್ರದರ್ಶನ ನೀಡಿದ್ದಾರೆ ಹಾಗೆಯೇ ಮಂಡ್ಯ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ನಾನಾ ಭಾಗಗಳಲ್ಲಿ ತಮ್ಮ ತಂಡದೊಂದಿಗೆ ಹಲವಾರು ಪ್ರದರ್ಶನ ನೀಡಿ ಜಿಲ್ಲೆಯ ರಂಗಭೂಮಿ ಕ್ಷೇತ್ರಕ್ಕೆ ಹೆಸರು ತಂದವರಾಗಿದ್ದಾರೆ.
2008ರಲ್ಲಿ ತಮ್ಮದೇ ಆದಾ ಶ್ರೀಸೀಬಿ ನರಸಿಂಹಸ್ವಾಮಿ ಕಲಾ ಸಂಘ ಇರಕಸಂದ್ರದ ಹೆಸರಿನಲ್ಲಿ ಕಲಾತಂಡ ಕಟ್ಟಿಕೊಂಡು ನಿರಂತರವಾಗಿ ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.ಭೈರವ ಕಲಾ ಸಂಘದ ಮೂಲಕ ತುಮಕೂರು ಜಿಲ್ಲಾ ರಂಗಭೂಮಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಜಗನ್ನಾಥ್ ನಂತರ ತಮ್ಮದೇ ಕಲಾಸಂಘದ ಮೂಲಕ ಕಳೆದ 15 ವರ್ಷಗಳಿಂದ ಕಲಾ ಸೇವೆ ಸಲ್ಲಿಸಿದ್ದಾರೆ.ಇವರ ಕಲಾ ಅಭಿಯನದಿಂದಾಗಿ ಹಲವು ಗೌರವ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ರಾಜ್ಯ ನೆಹರು ಯುವ ಕಲಾವಿದ ಪ್ರಶಸ್ತಿ,ಸೇರಿದಂತೆ ಜಿಲ್ಲೆಯ ವಿವಿಧ ಕಲಾ ಸಂಘ,ಸಂಸ್ಥೆಗಳ ಪ್ರಶಸ್ತಿ,ಗೌರವಗಳಿಗೆ ಭಾಜನರಾಗಿದ್ದಾರೆ.
ಕನಸಾಗಿಯೇ ಉಳಿಯಿತು ನಲ್ಲತಂಗಿ: ಕಳೆದ 6 ವರ್ಷಗಳಿಂದಲೂ ಇದೊಂದು ನಾಟಕವನ್ನು ಪ್ರದರ್ಶನ ನೀಡಲೇ ಬೇಕು ಎಂದುಕೊಂಡು ಹಲವು ಭಾರಿ ಚರ್ಚೆ ಮಾಡಿ ಇನ್ನೇನು ಆರಂಭಿಸಬೇಕು ತರಬೇತಿಯನ್ನು ಎನ್ನುವಷ್ಟರಲ್ಲಿ ಅಲ್ಲಿಗೆ ನಿಂತಿದ್ದ ನಲ್ಲತಂಗಿ ಕೊನೆಗೂ ಈ ಅಣ್ಣನಿಗೆ ಸಿಗಲೇ ಇಲ್ಲ.ಬಹುಮುಖ ಪತ್ರಿಭೆಯ ಜಗನ್ನಾಥ್,ಜಿಲ್ಲಾ ಕಲಾವಿದ ಸಂಘ, ಛಲವಾದಿ ಮಹಾಸಭಾ, ಶ್ರೀ ಸೀಬಿ ನರಸಿಂಹಸ್ವಾಮಿ ಕಲಾ ಸಂಘಗಳಲ್ಲಿ ಸಕ್ರಿಯವಾಗಿ ಸಂಘಟನಾತ್ಮವಾಗಿ ತೊಡಗಿಸಿಕೊಂಡಿದ್ದ ಅವರು
2 ಬಾರಿ ಗ್ರಾಂ ಪಂಚಾಯಿತಿ ಸದಸ್ಯರಾಗಿ ಗ್ರಾಮ ಅಭಿವೃದ್ದಿಗೂ ಒತ್ತು ನೀಡಿದ್ದರು.ಅಲ್ಲದೆ ಕೃಷಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಜಗನ್ನಾಥ್, ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಪಾಲಿಹೌಸ್ ಮಾಡಿ, ವಿವಿಧ ತರಕಾರಿ, ಹೂವಿನ ಬೆಳೆಗಳನ್ನು ಬೆಳೆದು ಪ್ರಗತಿಪರ ರೈತ ಎನಿಸಿಕೊಂಡಿದ್ದರು.ಸಮುದಾಯದ ಸಂಘಟನೆಯಲ್ಲಿಯೂ ಹೆಸರು ಮಾಡಿದ್ದ ಜಗನ್ನಾಥ್,ಗುಬ್ಬಿ ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದರು.
ಹಿರಿಯರಲ್ಲಿ ಹಿರಿಯರಾಗಿ,ಕಿರಿಯರಲ್ಲಿ ಕಿರಿಯರಾಗಿ ಸದಾ ಕಲಾ ಸೇವೆಗೆ ಸಿದ್ಧವಾಗಿದ್ದ ಒಂದು ರೀತಿಯಲ್ಲಿ ಹಿರಿಯಣ್ಣನಂತೆ ಯುವಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದ ಜಗನ್ನಾಥ್ ಇನಿಲ್ಲ ಎನ್ನುವುದು ಊಹಿಸಲು ಸಾಧ್ಯವಾಗುತ್ತಿಲ್ಲ, ಅವರ ನೆನಪಿನ ಬುತ್ತಿಯಿಂದ ಹೊರಬರಲು ಸಾಧ್ಯಕ್ಕಂತೂ ಸಾಧ್ಯವೇ ಇಲ್ಲ,ಇಂತಹ ಹೃದಯವಂತ ಕಲಾವಿದನನ್ನು ನಮ್ಮಿಂದ ದೂರಮಾಡಿದ ಏ ವಿಧಿಯೇ ನಿನೇಷ್ಟು ಕ್ರೂರ..?
2021 ರಲ್ಲಿ ರಾಜ್ಯದಲ್ಲಿಯೇ ಪ್ರಪಥವಾಗಿ ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ತುಮಕೂರಿನಲ್ಲಿ ಆಚರಣೆ ಮಾಡಿದ ಪ್ರಮುಖರಲ್ಲಿ ಇವರು ಒಬ್ಬರು.ಒನಕೆ ಓಬವ್ವ ಜಯಂತಿ ಆಚರಣೆಗಾಗಿಯೇ ಸಮುದಾಯದ ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ಕಟ್ಟಿ ,ಎರಡು ಬಾರಿ ತುಮಕೂರಿನ ಕಲಾ ಕ್ಷೇತ್ರದಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡಿ ಅಲ್ಲೂ ಸಹ ನಾಟಕ ಪ್ರದರ್ಶನ ನೀಡುವ ಮೂಲಕ ಜನ ಮಾನಸದ ಕಲಾವಿದರಾಗಿದ್ದರು.
-ಹೆಚ್.ಎಸ್.ಪರಮೇಶ್ ಸುವರ್ಣ ಪ್ರಗತಿ ಹೆಬ್ಬೂರು.