ಗುಬ್ಬಿ: ಸುಖಾಸುಮ್ಮನೆ ಕಾಂಗ್ರೆಸ್ ಸರ್ಕಾರವನ್ನು ದೂರುತ್ತಾ ಒಕ್ಕಲಿಗ ಸಮುದಾಯದ ಮುಖಂಡನಾಗಿ ನಾನು ಒಬ್ಬನೇ ಇರಬೇಕು ಎಂಬ ಮನೋಭಾವದಲ್ಲಿ ಡಿಕೆಶಿ ಹಾಗೂ ಚೆಲುವರಾಯಸ್ವಾಮಿ ಅವರ ವಿರುದ್ದ ಸಲ್ಲದ ಆರೋಪ ಮಾಡುತ್ತಾ ದ್ವೇಷ ಅಸೂಯೆಯಿಂದ ಚಿತಾವಣೆ ಮಾಡುವ ಏಕೈಕ ಅಸೂಯೆ ಮನುಷ್ಯ ಮಾಜಿ ಸಿಎಂ ಕುಮಾರಸ್ವಾಮಿ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.
ತಾಲ್ಲೂಕಿನ ಕೆಜಿ ಟೆಂಪಲ್ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಅನುದಾನ 1.40 ಕೋಟಿ ರೂಗಳ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ನಾನೇ ಮತ್ತೊಮ್ಮೆ ಸಿಎಂ ಆಗುತ್ತೇನೆ. ನನ್ನನ್ನು ಹುಡುಕಿಕೊಂಡು ಬರಲಿ ಎಂದು ಸಿಂಗಾಪುರದಲ್ಲಿದ್ದ ಕುಮಾರಸ್ವಾಮಿ ಅವರಿಗೆ ಈಗ ಭ್ರಮನಿರಸನವಾಗಿ ಸಣ್ಣ ಮಕ್ಕಳಂತೆ ಆಡುತ್ತಾ ತಮ್ಮ ಎರಡು ಅವಧಿಯ ಮುಖ್ಯಮಂತ್ರಿಯಾಗಿದ್ದ ಘನತೆ ಗೌರವಕ್ಕೆ ದಕ್ಕೆ ತಂದುಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.
ಕಳೆದ ಮೂರು ವರ್ಷಗಳ ಹಿಂದೆ ಮಾಡಿದ ಕೆಲಸಗಳ ಶೇಕಡಾ 40 ಕಮಿಷನ್ ಬಗ್ಗೆ ನಮ್ಮ ಕಾಂಗ್ರೆಸ್ ನಾಯಕರು ನೇರ ಆರೋಪ ಮಾಡಿ ನಮ್ಮ ಸರ್ಕಾರ ಬಂದರೆ ತನಿಖೆ ಮಾಡುವ ಮಾತು ಹೇಳಿದ್ದು ಈಗ ಬಿಲ್ ತಡೆದು ಕಮಿಷನ್ ಆರೋಪದ ತನಿಖೆ ನಡೆಸಲಿದ್ದಾರೆ. ತನಿಖೆಯ ಬಳಿಕ ಹಣ ಸಂದಾಯವಾಗುತ್ತದೆ. ಸ್ವಲ್ಪ ಕಾಲಾವಕಾಶ ಅಗತ್ಯವಿದೆ ಅಷ್ಟೇ ಎಂದ ಅವರು ಯಾವುದೇ ಸರ್ಕಾರ ಬದಲಾದರೆ ಅಭಿವೃದ್ದಿ ಕೆಲಸಗಳಿಗೆ ಸ್ವಲ್ಪ ಸಮಯ ಅಗತ್ಯವಿದೆ. ಈ ಬಗ್ಗೆ ತಿಳಿದೂ ಸಹ ಹತಾಶೆಯಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ವಿನಾಕಾರಣ ಆರೋಪ ಮಾಡುತ್ತಿದೆ. ಮುಂದುವರೆದು ಫೇಕ್ ಪತ್ರ ಬರೆಸಿ ಒದ್ದಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನಮನ್ನಣೆ ಪಡೆದ ಕಾರ್ಯಕ್ರಮ ಕಂಡು ಅಸೂಯೆ ಪಡುವ ಬಿಜೆಪಿ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಲೋಪ ಹುಡುಕುವ ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸ ಆಗಿಲ್ಲ ಅನ್ನುವ ಮಂದಿಗೆ ಆದಾಯ ತರುವ ಬಗ್ಗೆ ತಿಳಿದಿಲ್ಲ. ಆದರೆ ವಾಣಿಜ್ಯ ತೆರಿಗೆ ಒಂದರಲ್ಲೇ ನಾಲ್ಕು ತಿಂಗಳಿಗೆ 8 ಸಾವಿರ ಕೋಟಿ ಹಣ ಸಂಗ್ರಹ ಮಾಡಿದ್ದಾರೆ. ಕೆಲವೇ ದಿನದಲ್ಲಿ ಎಲ್ಲಾ ಅಭಿವೃದ್ದಿ ಕೆಲಸಗಳು ಚಾಲ್ತಿ ಆಗಲಿದೆ ಎಂದ ಅವರು ಚುನಾವಣೆಗೆ ಒಮ್ಮತದ ಅಭ್ಯರ್ಥಿ ಹೈಕಮಾಂಡ್ ನಿರ್ಧರಿಸಲಿದೆ. ಕೆ.ಎನ್.ರಾಜಣ್ಣ ಅವರು ಲೋಕಸಭೆ ಅಭ್ಯರ್ಥಿ ಆಗುತ್ತಾರೆ. ನನಗೆ ಸಚಿವ ಸ್ಥಾನ ನೀಡುತ್ತಾರೆ ಇವೆಲ್ಲವೂ ಊಹಾಪೋಹ ಹಾಗೂ ಮಾಧ್ಯಮ ಸೃಷ್ಟಿ ಎಂದು ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಎಸ್. ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ದಿವಾಕರ್, ಕುನ್ನಾಲ ಗ್ರಾಪಂ ಅಧ್ಯಕ್ಷೆ ಅಶಾಮಣಿ, ಮುಖಂಡರಾದ ಸರ್ಫದ್ದಿನ್, ಅಸ್ಲಂಪಾಷ, ಶಿವಣ್ಣ, ರೆಹಮತ್ ವುಲ್ಲಾ, ಸಾಲಿಯಾ, ಕಾಜಾಸಾಬ್, ಬಸವರಾಜು, ಸೋನಿ, ಪ್ರಸನ್ನ, ಸೈಯದ್ ಅಲಿ, ಶಬ್ಬೀರ್, ಚೇತನ್ ಕುಮಾರ್, ರಾಜಣ್ಣ, ರೈತ ಸಂಘದ ವೆಂಕಟೇಗೌಡ, ಗುತ್ತಿಗೆದಾರರಾದ ರಾಮಲಿಂಗೇಗೌಡ, ದೇವರಾಜ್ ಇತರರು ಇದ್ದರು.