ತುಮಕೂರು : ದಲಿತರಿಗೆ ಸಂಬಂಧಿಸಿದ ಪಿಟಿಸಿಎಲ್, ಭೂ ಒತ್ತುವರಿ, ಭೂ ಪರಿಹಾರ, ಸರ್ವೇ ಕಾರ್ಯ, ಬಗರ್ ಹುಕುಂ ಜಮೀನು, ದಲಿತ ಕಾಲೋನಿಯಲ್ಲಿ ರಸ್ತೆ/ಚರಂಡಿ ನಿರ್ಮಾಣ, ಸ್ಮಶಾನ ಭೂಮಿಗೆ ತಂತಿ ಬೇಲಿ ಹಾಕುವುದು, ನಿವೇಶನ ಮಂಜೂರು, ಭೂವ್ಯಾಜ್ಯ, ಸಮುದಾಯ ಭವನಗಳ ನವೀಕರಣ, ಮತ್ತಿತರ ಸಮಸ್ಯೆಗಳ ಕುರಿತಂತೆ ಇಂದು ನಡೆದ ತುಮಕೂರು ಉಪ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತರಕ್ಷಣಾ ಸಭೆಯಲ್ಲಿ ಚರ್ಚಿಸಲಾಯಿತು.
ನಗರದ ಜಿಲ್ಲಾ ಬಾಲ ಭವನದಲ್ಲಿಂದು ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲ್ಲೂಕಿನ ದಲಿತ ಮುಖಂಡರು ಭಾಗವಹಿಸಿ, ದಲಿತ ಸಮುದಾಯದವರು ಮರಣ ಹೊಂದಿದಾಗ ಅಂತ್ಯ ಸಂಸ್ಕಾರ ನಡೆಸಲು ಪ್ರತ್ಯೇಕವಾದ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಉಚ್ಛ ನ್ಯಾಯಾಲಯದ ಆದೇಶದನ್ವಯ ಸಾರ್ವಜನಿಕರ ರುದ್ರಭೂಮಿ ಗುರುತಿಸಿ ಮಂಜೂರು ಮಾಡುತ್ತಿರುವುದು ಸರಿಯಷ್ಟೆ. ಆದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಸವರ್ಣೀಯರು ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳೂ ಸಹ ದಲಿತರಿಗೆ ಸೌಲಭ್ಯ ದೊರಕಿಸುವಲ್ಲಿ ತಾರತಮ್ಯ ಎಸಗುತ್ತಿದ್ದಾರೆಂದು ದಲಿತ ಮುಖಂಡರು ದೂರಿದಾಗ ಉಪವಿಭಾಗಾಧಿಕಾರಿ ಗೌರವ್ ಅವರು ಪ್ರತಿಕ್ರಿಯಿಸುತ್ತಾ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಿತ ಕಾಯುವ ಸಲುವಾಗಿಯೇ ಈ ಸಭೆಯನ್ನು ನಡೆಸಲಾಗುತ್ತಿದ್ದು, ಯಾವುದೇ ಸಮಸ್ಯೆಯಿದ್ದರೂ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ತುಮಕೂರು, ಗುಬ್ಬಿ ಹಾಗೂ ಕುಣಿಗಲ್ ತಾಲ್ಲೂಕಿಗೆ ಸಂಬಂಧಪಟ್ಟಂತೆ ದಲಿತರಿಗೆ ಪ್ರತ್ಯೇಕ ಸ್ಮಶಾನ ಭೂಮಿಯನ್ನು ಮೀಸಲಿಡಲು ಕ್ರಮವಹಿಸಲಾಗುವುದು. ಕೂಡಲೇ ಸಂಬಂಧಿಸಿದ ತಹಶೀಲ್ದಾರರು ಪ್ರತ್ಯೇಕ ಸ್ಮಶಾನ ಭೂಮಿಗಾಗಿ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.
ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತರು ಅಂತ್ಯಸಂಸ್ಕಾರ ಮಾಡಲು ಸಂವಿಧಾನದ ಅನುಚ್ಛೇದ 15ರಲ್ಲಿ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ರುದ್ರಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಂವಿಧಾನದ ಅನುಚ್ಛೇದದ ನಿಯಮಗಳು ಉಲ್ಲಂಘನೆಯಾಗದಂತೆ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶ ದೊರೆಯಬೇಕು. ನಿಯಮ ಉಲ್ಲಂಘನೆಯಾದ ಬಗ್ಗೆ ಅಧಿಕಾರಿಗಳ ವಿರುದ್ಧ ದೂರು ಬಂದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದಲಿತ ಮುಖಂಡರು ಒಬ್ಬೊಬ್ಬರಾಗಿ ಸಭೆಯಲ್ಲಿ ಅಹವಾಲುಗಳನ್ನು ಸಲ್ಲಿಸುತ್ತಾ, ದಲಿತರಿಗಾಗಿ ಪ್ರತ್ಯೇಕ ಸ್ಮಶಾನ ಭೂಮಿ ಮಂಜೂರು ಮಾಡುವಲ್ಲಿ ಅಧಿಕಾರಿಗಳಿಗೆ ಕಾನೂನಿನ ಅರಿವಿನ ಕೊರತೆ ಇದೆ. ಕೆಲವು ಅಧಿಕಾರಿ/ಸಿಬ್ಬಂದಿಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಇದರಿಂದ ಸಭೆಗಳು ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಅರ್ಹರಿಗೆ ಪರಿಹಾರ ದೊರೆಯುತ್ತಿಲ್ಲ. ಪರಿಶಿಷ್ಟ ಜಾತಿ/ಪಂಗಡದ ಹಿತರಕ್ಷಣಾ ಸಭೆ ನಡೆದು ವರ್ಷ ಕಳೆದರೂ ಹಿಂದಿನ ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಪರಿಹಾರ ದೊರೆತಿಲ್ಲ ಎಂದು ಸಭೆಯ ಗಮನಕ್ಕೆ ತಂದರಲ್ಲದೆ, ಸಾವಿರಾರು ವರ್ಷಗಳ ಹಿಂದಿನಿಂದ ದಲಿತರು ಶವ ಸಂಸ್ಕಾರ ಮಾಡಲಾಗುತ್ತಿದ್ದ ಜಾಗವು ಒತ್ತುವರಿಯಾಗಿದ್ದು, ಅದನ್ನು ಕೂಡಲೇ ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು. ದಲಿತರು ಉಳುಮೆ ಮಾಡುತ್ತಿರುವ ಜಮೀನನ್ನು ಸ್ಮಶಾನ ಭೂಮಿಯನ್ನಾಗಿ ಗುರುತಿಸಬಾರದು. ದಲಿತರ ಏಳಿಗೆಗಾಗಿ ಬಿಡುಗಡೆಯಾಗುವ ಅನುದಾನವನ್ನು ಸರ್ಕಾರಕ್ಕೆ ವಾಪಾಸಾಗದಂತೆ ನಿಗಧಿತ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುಮಕೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್, ತಹಶೀಲ್ದಾರರಾದ ಸಿದ್ದೇಶ್ ಹಾಗೂ ಮಹಾಬಲೇಶ್ವರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಯಪಾಲ್ ಹಾಗೂ ಪರಮೇಶ್, ಗುಬ್ಬಿ ತಾಲ್ಲೂಕು ಗ್ರೇಡ್-2 ತಹಶೀಲ್ದಾರ್ ಶಶಿಕಲಾ, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.