ಜಿಲ್ಲೆತುಮಕೂರುತುಮಕೂರು ನಗರಸುದ್ದಿ

ಎರಡು ತಿಂಗಳೊಳಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಯೋಜನೆ ಪೂರ್ಣಗೊಳಿಸಲು ಗೃಹ ಸಚಿವ ಡಾ: ಜಿ. ಪರಮೇಶ್ವರ್ ತಾಕೀತು

ಗೃಹ ಸಚಿವರಿಂದ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿ ವೀಕ್ಷಣೆ

ತುಮಕೂರು : ತುಮಕೂರು ನಗರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಸರ್ಕಾರಿ ಬಸ್ ನಿಲ್ದಾಣ, ಗ್ರಂಥಾಲಯ ಜೂನಿಯರ್ ಕಾಲೇಜ್ ಮೈದಾನ ಹಾಗೂ ಮಹಾತ್ಮ ಗಾಂಧಿ ಕ್ರೀಡಾಂಗಣದ ಕಾಮಗಾರಿಗಳ ಕುರಿತು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಜಿ. ಪರಮೇಶ್ವರ್ ಇಂದು ಪರಿಶೀಲಿಸಿದರು.
ಮೊದಲಿಗೆ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣವಾಗುತ್ತಿರುವ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಇನ್ನು ಎರಡು ಮೂರು ತಿಂಗಳೊಳಗೆ ನೂತನ ಸ್ಮಾರ್ಟ್ ಬಸ್‌ನಿಲ್ದಾಣ ಯೋಜನೆಯನ್ನು ಪೂರ್ಣಗೊಳಿಸುವಂತೆ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಅವರಿಗೆ ತಾಕೀತು ಮಾಡಿದರು.
ನಂತರ ನಗರದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯದಲ್ಲಿರುವ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು. ರಿಜಿಸ್ಟರ್ ನೋಂದಣಿಯಲ್ಲಿ ಪುಸ್ತಕಗಳ ಬಗ್ಗೆ ಸರಿಯಾಗಿ ದಾಖಲಾತಿ ಮಾಡಿಲ್ಲವೆಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಪುಸ್ತಕಗಳು ಲಭ್ಯವಿರುವ ಬಗ್ಗೆ ಎಲ್‌ಇಡಿ ಮೂಲಕ ಪುಸ್ತಕಗಳ ವಿವರವನ್ನು ಪ್ರದರ್ಶಿಸಬೇಕು, ಎರಡು ಲಕ್ಷ ಪುಸ್ತಕಗಳು ಕಂಪ್ಯೂಟರ್‌ನಲ್ಲಿ ಗಣಕೀರಣವಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬೆಳಿಗ್ಗೆ 8 ರಾತ್ರಿ 8 ಗಂಟೆಯವರೆಗೆ ಗ್ರಂಥಾಲಯವನ್ನು ತೆರೆದಿರಬೇಕೆಂದು ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು.
ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿಂಥೆಟಿಕ್ ಟ್ರಾö್ಯಕ್ ಮತ್ತಿತರ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿದ ಸಚಿವರು, ತದ ನಂತರ ಅಲ್ಲೇ ನೆರೆದಿದ್ದ ಕ್ರೀಡಾಪಟುಗಳ ಜೊತೆ ಸಮಾಲೋಚನೆ ನಡೆಸಿದರು. ನಂತರ ಶೂಟಿಂಗ್ ಸ್ಪರ್ಧೆಯಲ್ಲಿ ತುಮಕೂರು ನಗರದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಟೀ-ಶರ್ಟ್ ವಿತರಿಸಿ ಅಭಿನಂದಿಸಿದರು.

 

ತುಮಕೂರು ಜಿಲ್ಲೆಯು ಖೋಖೋ, ಕಬಡ್ಡಿ ಕ್ರೀಡೆಗೆ ಹೆಸರುವಾಸಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಕ್ರೀಡಾಂಗಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜೂನಿಯರ್ ಕಾಲೇಜ್ ಮೈದಾನವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. 1927ರಲ್ಲಿ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ್ದರು. ನೆಹರು ಅವರು ಕೂಡ ಈ ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಕುರಿತು ಭಾಷಣ ಮಾಡಿದ್ದಾರೆ. ನಗರದಲ್ಲಿದ್ದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಈ ಹಿಂದೆ ಕ್ರೀಡೆಗಳನ್ನು ನಡೆಸುವ ಬದಲು ರಾಜಕೀಯ ಗಣ್ಯರಿಗೆ ಹೆಲಿಕ್ಯಾಪ್ಟರ್ ಲ್ಯಾಂಡಿAಗ್ ಮಾಡಲು ಈ ಕ್ರೀಡಾಂಗಣವನ್ನು ಬಳಸಲಾಗುತ್ತಿತ್ತು. ತದನಂತರ ನಗರ ಬೆಳೆಯುವ ಹಾಗೆ ಕ್ರೀಡಾಂಗಣವನ್ನು ಉನ್ನತೀಕರಿಸುವುದಕ್ಕಾಗಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಅಮಾನಿಕೆರೆಯ ನೀರನ್ನು ಸಂಸ್ಕರಿಸಿ ಬುಗುಡನಹಳ್ಳಿ ನೀರಿನ ಜೊತೆಗೆ ನಗರದ ಕುಡಿಯುವ ನೀರನ್ನು ಶೇಖರಣೆ ಮಾಡಲು ಬಳಸಿಕೊಳ್ಳಲಾಗುತ್ತದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರ ನಡೆದಿದೆ ಎಂದು ದೂರುಗಳು ಬಂದಿರುತ್ತಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಬಜೆಟ್‌ನಲ್ಲಿ ಹೊಸ ಕಾಮಗಾರಿಗಳಿಗೆ ಹಣವನ್ನು ನೀಡಲು ಸಾಧ್ಯವಾಗಿಲ್ಲ. ಹಳೆ ಕಾಮಗಾರಿಗಳಿಗೆ ಹಣವನ್ನು ಅಧಿವೇಶನ ಮುಗಿದ ನಂತರ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಅನ್ನ ಭಾಗ್ಯ ಯೋಜನೆ ಅಡಿ 5,91,000 ಪಡಿತರ ಚೀಟಿ ಕುಟುಂಬದ 22,74,000 ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ. ಅಕ್ಕಿಗೆ ಸಮನಾದ ಹಣವನ್ನು ಕುಟುಂಬದ ಯಜಮಾನಿಯ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ತದನಂತರ ಸಚಿವರು ಕ್ರೀಡಾಂಗಣದಲ್ಲಿರುವ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು.
ಈ ಸಂದರ್ಭ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker