ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿರುವ ಮಾಧ್ಯಮ ಹಬ್ಬಕ್ಕೆ ಕೋಮುವಾದಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಕರೆಸುತ್ತಿರುವುದಕ್ಕೆ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆಗಳು, ಪ್ರಗತಿಪರ ವಿದ್ಯಾರ್ಥಿ-ಯುವಜನರ ವೇದಿಕೆ ಹಾಗೂ ವಿವಿ ಹಳೆಯ ವಿದ್ಯಾರ್ಥಿ ವೇದಿಕೆಗಳಿಂದ ವ್ಯಾಪಕ ಖಂಡನೆ ಮತ್ತು ವಿರೋಧ ವ್ಯಕ್ತವಾಗಿದೆ.
ತುಮಕೂರು ವಿಶ್ವವಿದ್ಯಾಲಯ ಜಾತ್ಯತೀತ ಪರಂಪರೆಯನ್ನು ಹೊಂದಿದೆ. ಸಾಮರಸ್ಯತೆಗೆ ಹೆಸರಾಗಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇಂತಹ ಮಹತ್ವದ ಪರಂಪರೆಯನ್ನು ಸಾರುತ್ತಿರುವ ವಿಶ್ವವಿದ್ಯಾಲಯದಲ್ಲಿ ಮತೀಯ ಭಾವನೆಗಳನ್ನು ಕೆರಳಿಸುವ, ವಿಛಿದ್ರಕಾರಿ ಸಂಗತಿಗಳನ್ನು ಪ್ರತಿಪಾದಿಸುವ ಪತ್ರಕರ್ತ ಅಜಿತ್ ಹನುಮಕ್ಕನವ್ ಅವರನ್ನು ಯಾವುದೇ ಕಾರಣಕ್ಕೂ ವಿವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕರೆಸುವುದು ಬೇಡ. ಒಂದೊಮ್ಮೆ ಅವರನ್ನು ಕರೆಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ವಿವಿಧ ಸಂಘಟಗಳನ್ನು ಎಚ್ಚರಿಕೆ ನೀಡಿವೆ.
ಇಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೆಂಕಟೇಶ್ವರಲು ಅವರನ್ನು ಭೇಟಿ ಮಾಡಿದ ಪ್ರಗತಿಪರ ವಿದ್ಯಾರ್ಥಿ-ಯುವಜನರ ಸಂಘಟನೆಗಳ ಒಕ್ಕೂಟ, ಹಳೆಯ ವಿದ್ಯಾರ್ಥಿಗಳ ವೇದಿಕೆ ಮತ್ತು ಜಿಲ್ಲಾ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಸಮಾಜದಲ್ಲಿ ದ್ವೇಷ ಹರಡುವ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರನ್ನು ಕರೆಸುವುದನ್ನು ನಿಲ್ಲಿಸಬೇಕು ಸಂಘಟನೆಗಳು ಒತ್ತಾಯಿಸಿವೆ.
ತುಮಕೂರು ವಿವಿಯಲ್ಲಿ ರಾಜ್ಯಮಟ್ಟದ ಮಾಧ್ಯಮ ಹಬ್ಬ ನಡೆಯುತ್ತಿದೆ. ಇಂತಹ ಹಬ್ಬಕ್ಕೆ ಅಜಿತ್ ಹನುಮಕ್ಕನವರ್ ಅವರಿಂದ ಕೋಮುವಾದಿ ಭಾಷಣ ಮಾಡಿಸಲು ಹೊರಟಿರುವ ವಿವಿಯ ಕ್ರಮ ಪ್ರಶ್ನಾರ್ಹವಾಗಿದೆ. ಅಲ್ಲದೆ ವಿವಿಯ ಪರಂಪರೆಯನ್ನು ನಾಶ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಶಾಂತಿ-ಸುವ್ಯವಸ್ಥೆಯನ್ನು ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ವಿವಿಯ ಕ್ರಮವನ್ನು ಖಂಡಿಸಿ ಮತ್ತು ವಿವಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಬದಲಾಗಿ ಕೋಮುವಾದಿ ಚಟುವಟಿಕೆಗಳು ಹೆಚ್ಚಳವಾಗಿದ್ದು, ಇದನ್ನು ಖಂಡಿಸಿ ಜುಲೈ 20ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ನಾಡಿನ ಹೆಸರಾಂತ ಸಾಹಿತಿಗಳು, ಪ್ರಗತಿ ಪರ ಹೋರಾಟಗಾರರು, ಕಲಾವಿದರು, ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘಟನೆಗಳು, ವಿವಿಯ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಶುಕ್ರವಾರ ಕುಲಪತಿಗಳು ಮತ್ತು ಕುಲಸಚಿವರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಅಜಿತ್ ಹನುಮಕ್ಕನವರ್ ಅವರ ಆಹ್ವಾನಿಸಿರುವುದನ್ನು ಕೈಬಿಡುವಂತೆ ಮಾತುಕತೆ ನಡೆಸಲಾಯಿತು ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ದ ಶಿಸ್ಸುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಸಿಂಡಿಕೇಟ್ ಮಾಜಿ ಸದಸ್ಯ ಕೊಟ್ಟಶಂಕರ್, ಪ್ರಗತಿಪರ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಗೋಪಿನಾಥ್, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಅರುಣ್, ವಕೀಲ ರಂಗಧಾಮಯ್ಯ, ಉಪನ್ಯಾಸಕ ಮೂರ್ತಿ, ವಕೀಲ ಹಾಗೂ ಎಸ್ಎಫ್ಐ ಜಿಲ್ಲಾಧ್ಯಕ್ಷ ಈ ಶಿವಣ್ಣ, ಹಳೆಯ ವಿದ್ಯಾರ್ಥಿ ಒಕ್ಕೂಟದ ಮುಖಂಡ ಎಚ್.ವಿ.ರಮೇಶ್, ಬಂಡೆಕುಮಾರ, ಮೂರ್ತಿ ಕೆಸ್ತೂರು, ವಾಸುದೇವ್ ಎನ್ ನಾದೂರ್, ಛಲವಾದಿ ಮಹಾಸಭಾದ ಶೇಖರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಇದ್ದರು.