ಶಿರಾ : ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಮೀಸಲಾತಿ ಪ್ರಮಾಣವನ್ನು ಶೇಕಡ 75ರಷ್ಟು ಏರಿಕೆ ಮಾಡುತ್ತೀವಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರು.
ಈ ಭರವಸೆಯಂತೆ ಒಟ್ಟು ಮೀಸಲಾತಿ ಪ್ರಮಾಣವನ್ನು 75ಕ್ಕೆಏರಿಕೆ ಮಾಡಿ, ಒಕ್ಕಲಿಗ ಸಮುದಾಯಕ್ಕೆ ಶೇಕಡ 12 ರಿಂದ 16ರ ವರೆಗೆ ಮೀಸಲಾತಿ ಕಲ್ಪಿಸುವಂತಹ ಇಚ್ಛಾಶಕ್ತಿಯನ್ನು ಸರ್ಕಾರ ಹೊಂದಬೇಕಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವದೂತ ಸ್ವಾಮೀಜಿ ಆಗ್ರಹಿಸಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನೇಜಂತಿ ಗ್ರಾಮದ ಹಿರೇ ಗುಂಟನೂರು ಜಾನಕಲ್ಲರ ನೇಜಂತಿ ಅಮಾವಾಸ್ಯೆ ಬುಡಕಟ್ಟಿನ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಸ್ಥಾನದ ನೂತನ ದ್ವಜಸ್ತಂಬ ಹಾಗೂ ಕಳಸ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದರು. ಈ ಹಿಂದೆ ಬಿಜೆಪಿ ಸರ್ಕಾರ ಒಕ್ಕಲಿಗ ಮೀಸಲಾತಿ ಹೆಚ್ಚಿಸಬೇಕೆಂಬ ದೃಷ್ಟಿಯಿಂದ ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿ ಒಕ್ಕಲಿಗ ಸಮುದಾಯಕ್ಕೆ ನೀಡಿತ್ತು. ದೇಶಕ್ಕೆ ಅನ್ನ ನೀಡುವ ಒಕ್ಕಲು ಮಕ್ಕಳು ಇತರರ ಅನ್ನವನ್ನು ಕಿತ್ತುಕೊಳ್ಳುವುದಿಲ್ಲ ಎಂಬ ಸ್ಪಷ್ಟತೆಯನ್ನು ಹೊಂದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವಂತಹ ಹಾಗೂ ಇತರ ಸಮುದಾಯಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನ್ಯಾಯಯುತವಾಗಿ ಮೀಸಲಾತಿಯನ್ನು ಪುನರ್ ಪರಿಶೀಲನೆ ಮಾಡಿ ಎಲ್ಲಾ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡುವಂತಹ ನಿಟ್ಟಿನಲ್ಲಿ ಹೆಚ್ಚು ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಮುಖಂಡರಾದ ರಂಗಸ್ವಾಮಿ ಗೌಡ ,ಎನ್.ಟಿ .ಭೀಮಣ್ಣ ,ಬಾಲೆಗೌಡ ,ಅಭಿಷೇಕ್ ಗೌಡ, ಶಿಕ್ಷಕ ರಾಮಣ್ಣ ,ಲಕ್ಷ್ಮೀ ರಂಗಪ್ಪ ,ರಾಜಣ್ಣ, ರಂಗಸ್ವಾಮಿ ,ಉಪನ್ಯಾಸಕ ರಂಗನಾಥ್, ಗ್ರಾಪಂ ಅಧ್ಯಕ್ಷ ಮೀನಾಕ್ಷಿ ರಾಮಕೃಷ್ಣ, ಹೇಮಂತರಾಜು, ಗ್ರಾಮ ಪಂಚಾಯಿತಿ ಸದಸ್ಯ ಶ್ರೀರಂಗಪ್ಪ, ಟಿ.ಪ್ರಸನ್ನ , ವೆಂಕಟೇಶ್, ಟಿ .ತಿಮ್ಮಣ್ಣ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.