ತುಮಕೂರು : ಗ್ರೇಟರ್ ತುಮಕೂರು ನಿರ್ಮಾಣ ಮಾಡಬೇಕು ಎಂಬ ಕನಸಿದೆ. ಬೆಂಗಳೂರಿನಂತೆ ನಗರವನ್ನು ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೆಂಗಳೂರು– ತುಮಕೂರಿಗೆ ಯಾವುದೇ ವ್ಯತ್ಯಾಸ ಇರಬಾರದು. ಇಲ್ಲಿದ್ದರೆ ರಾಜಧಾನಿಯಲ್ಲಿ ಇದ್ದಂತೆ ಭಾಸವಾಗಬೇಕು. ನಗರದ ಸಮಗ್ರ ಪ್ರಗತಿಗೆ ಸರ್ವ ಪ್ರಯತ್ನ ಮಾಡಲಾಗುವುದು. ನಗರದ ಹೊರವಲಯದ ವಸಂತ ನರಸಾಪುರದ ವರೆಗೆ ಮೆಟ್ರೋ ರೈಲು ತರುವ ಕುರಿತು ಪ್ರಣಾಳಿಕೆಯಲ್ಲಿ ಸೇರಿದ್ದು, ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗಲಿದೆ ಎಂದರು.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ನೂತನ ಸಂಪುಟ ದರ್ಜೆ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸೋಮವಾರ ಸಂಜೆ ಭೇಟಿ ನೀಡಿ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಬಿಜೆಪಿ ಅವಧಿಯ ನಾಲ್ಕು ವರ್ಷ ಜಿಲ್ಲೆಯ ಬಗ್ಗೆ ಯೋಚಿಸಿದ್ದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಬಹುದಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲಿ ತನಿಖೆ ನಡೆಸಲಾಗುವುದು. ಎತ್ತಿನ ಹೊಳೆ ಯೋಜನೆಗೆ ಸರ್ಕಾರದಿಂದ ಹಣ ತಂದು ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿಗೆ ಸಂಪುಟ ದರ್ಜೆ ಸಚಿವರಾಗಿ ಆಗಮಿಸಿದ ಡಾ.ಜಿ.ಪರಮೇಶ್ವರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನ ಮಂತ್ರಿಗಳನ್ನಾಗಿ ಮಾಡಬೇಕು. ಚುನಾವಣೆಗೆ ಇನ್ನು 10 ತಿಂಗಳು ಮಾತ್ರ ಬಾಕಿ ಇದ್ದು, ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಬಿಜೆಪಿ ನಾಯಕರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಅಹಂಕಾರದ ಮಾತುಗಳನ್ನಾಡಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡು ತಿರುಗಾಡಿದರು. ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಶಾ ರಾಜ್ಯದ ಜನರನ್ನು ಖರೀದಿಸಿದ್ದೇವೆ ಎಂಬಂತೆ ಮಾತನಾಡಿದರು. ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಡಳಿತ ಹೇಗೆ ನಡೆಸಬೇಕು ಎಂಬುದನ್ನು ನಾವು ಅವರಿಗೆ ಹೇಳಿ ಕೊಡುತ್ತೇವೆ ಎಂದರು.
ಬಿಜೆಪಿಯವರು ಸಮಾಜದ ಶಾಂತಿ, ಕೋಮು ಸೌಹಾರ್ದತೆ ಹಾಳು ಮಾಡಿದ್ದಾರೆ. ಅದೆಲ್ಲವನ್ನೂ ನಾವು ಸರಿ ಮಾಡುತ್ತೇವೆ. ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ತಿಳಿಸಿದರು.
ಶಾಸಕ ಎಚ್.ವಿ.ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮುಖಂಡರಾದ ಇಕ್ಬಾಲ್ ಅಹ್ಮದ್, ಮುರಳೀಧರ್ ಹಾಲಪ್ಪ, ರೆಡ್ಡಿ ಚಿನ್ನಯಲ್ಲಪ್ಪ, ಎಚ್.ನಿಂಗಪ್ಪ, ಗೀತಾ ರಾಜಣ್ಣ, ನಿಕೇತ್‌ರಾಜ್ ಮೌರ್ಯ, ರಾಮಕೃಷ್ಣ, ರಾಯಸಂದ್ರ ರವಿಕುಮಾರ್, ಷಣ್ಮುಖಪ್ಪ,ಎಸ್.ಸಿ ಸೆಲ್ ಅಧ್ಯಕ್ಷ ನಿಂಗರಾಜು ಸೇರಿದಂತೆ ಮುಖಂಡರು,ಅಭಿಮಾನಿಗಳು ಹಾಗೂ ಇತರರು ಇದ್ದರು.