ತುಮಕೂರು : ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ/ಪ್ರವಾಹದಿಂದ ಉಂಟಾಗಬಹುದಾದ ಹಾನಿಯನ್ನು ಸಮರ್ಪಕವಾಗಿ ನಿಭಾಯಿಸಲು ತಾಲ್ಲೂಕು ಹಾಗೂ ಹೋಬಳಿವಾರು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರಾದ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಜಂಟಿಯಾಗಿ ಆದೇಶಿಸಿದ್ದಾರೆ.
ತಾಲ್ಲೂಕುವಾರು ನೋಡಲ್ ಅಧಿಕಾರಿಗಳ ವಿವರ :-
ತುಮಕೂರು ತಾಲ್ಲೂಕಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರು, ಗುಬ್ಬಿ ತಾಲ್ಲೂಕು-ಪಶು ಪಾಲನಾ ಇಲಾಖೆ ಉಪನಿರ್ದೇಶಕರು, ಶಿರಾ-ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಕೊರಟಗೆರೆ-ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತಿಪಟೂರು-ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ತುರುವೇಕೆರೆ-ರೇಷ್ಮೆ ಇಲಾಖೆ ಉಪನಿರ್ದೇಶಕರು, ಮಧುಗಿರಿ-ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು, ಚಿಕ್ಕನಾಯಕನಹಳ್ಳಿ-ಉಪ ಅರಣ್ಯ ಸಂರಕ್ಷಣಾಧಿಕಾರಿ(ಸಾಮಾಜಿಕ ಅರಣ್ಯ), ಕುಣಿಗಲ್-ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪಾವಗಡ-ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ತಾಲ್ಲೂಕುವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಸಬಾ ಸೇರಿದಂತೆ ಒಟ್ಟು 50 ಹೋಬಳಿಗಳಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಶಿಶು ಅಭಿವೃದ್ದಿ ಯೋಜನಾ ಇಲಾಖೆ, ಪಶುಪಾಲನಾ ಇಲಾಖೆ, ಪಿ.ಆರ್.ಇ.ಡಿ ಉಪವಿಭಾಗ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಅಕ್ಷರದಾಸೋಹ, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೋಬಳಿವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ತಾಲ್ಲೂಕುವಾರು/ಹೋಬಳಿವಾರು ನೇಮಕ ಮಾಡಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ತಾಲ್ಲೂಕು/ಹೋಬಳಿಗಳಲ್ಲಿ ಪ್ರವಾಸ ಕೈಗೊಂಡು ಮಳೆ ಮತ್ತು ಪ್ರವಾಹದಿಂದ ಉಂಟಾಗುವ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸತಕ್ಕದ್ದು.
ಪ್ರತಿ ತಾಲ್ಲೂಕಿನಲ್ಲಿ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳೊಂದಿಗೆ ಆಗಿಂದಾಗ್ಗೆ ಸಭೆ ನಡೆಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಕೈಗೊಳ್ಳಲಾದ ಪರಿಹಾರ ಕಾರ್ಯಗಳ ಕುರಿತು ನಿಖರವಾದ ವರದಿಯನ್ನು ಸಲ್ಲಿಸತಕ್ಕದ್ದು.
ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಖುದ್ದಾಗಿ ಸ್ಥಳ ಪರಿಶೀಲಿಸಿ, ಸಮಗ್ರವಾದ ವರದಿಯನ್ನು ಪ್ರತಿ ಶುಕ್ರವಾರ ಸಂಜೆ 4 ಗಂಟೆಯೊಳಗೆ ಸಹಿ ಮಾಡಿದ ಲಿಖಿತ ವರದಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಬೇಕು.
ಮಳೆ ಹಾನಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ತಾಲ್ಲೂಕು ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳನ್ನು ಸಂಪರ್ಕಿಸಿ ತಾಲ್ಲೂಕು ಆಡಳಿತದೊಂದಿಗೆ ಸಮನ್ವಯವನ್ನು ಮಾಡತಕ್ಕದ್ದು.
ಪ್ರತಿವಾರ ತಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮಳೆ ಪರಿಸ್ಥಿತಿ ಬಗ್ಗೆ ಲಿಖಿತವಾಗಿ ವರದಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸತಕ್ಕದ್ದು. ಹೋಬಳಿ/ಗ್ರಾಮ ಪಂಚಾಯಿತಿಗೆ ಭೇಟಿ ಮಾಡಿ ಕನಿಷ್ಠ ವಾರಕ್ಕೆ ಒಂದು ಸಾರಿ ವಾಸ್ತವ ಸ್ಥಿತಿಯನ್ನು ಅವಲೋಕಿಸತಕ್ಕದ್ದು. ಈ ಕೆಲಸದಲ್ಲಿ ನಿರ್ಲಕ್ಷöತೆ ತೋರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಜಂಟಿಯಾಗಿ ತಿಳಿಸಿದ್ದಾರೆ.