ಮಧುಗಿರಿ : ಕೆ.ಎನ್. ರಾಜಣ್ಣ ಮತ್ತು ಎಂ.ವಿ. ವೀರಭದ್ರಯ್ಯ ಇಬ್ಬರೂ ನನಗೆ ಸಮಾನ ಎದುರಾಳಿಗಳು ಎಂದು ಬಿಜೆಪಿ ಅಭ್ಯರ್ಥಿ ಎಲ್.ಸಿ. ನಾಗರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು ಇಲ್ಲಿ ನಮಗೆ ಪ್ರಬಲ ಎದುರಾಳಿ ಎಂಬ ಪ್ರಶ್ನೆ ಬರುವುದಿಲ್ಲ. ರಾಜಣ್ಣ, ವೀರಭದ್ರಯ್ಯ ಇಬ್ಬರೂ ನಮಗೆ ಸಮಾನ ಸ್ನೇಹಿತರು, ಸಮಾನ ಎದುರಾಳಿಗಳು ಇವರ ವಿರುದ್ದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ನಮಗೆ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ನಾನು ಯಾರ ವಿರುದ್ದವೂ ಸೇಡು ತೀರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕ್ಷೇತ್ರಕ್ಕೆ ಬಂದಿಲ್ಲ. ನಾನು ಈ ಹಿಂದೆ ಒಬ್ಬ ಸರ್ಕಾರಿ ಅಧಿಕಾರಿಯಾಗಿದ್ದೆ ಸ್ಥಳೀಯರಿಗೆ ಅಧಿಕಾರ ದೊರೆಯಬೇಕು ಎಂಬ ಉದ್ದೇಶದಿಂದ ರಾಜೀನಾಮೆ ಕೊಟ್ಟು ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಬಂದಿದ್ದೇನೆ. ಕ್ಷೇತ್ರದ ಅಬಿವೃದ್ದಿಯ ಬಗ್ಗೆ ನನಗೆ ನನ್ನದೇ ಆದ ಕನಸುಗಳಿದ್ದು, ಈ ಬಾರಿ ಜನತೆ ಸ್ಥಳೀಯನಾದ ನನನ್ನು ಆಶೀರ್ವದಿಸುವ ವಿಶ್ವಾಸವಿದೆ ಎಂದರು.
ಕಾರ್ಯಕರ್ತರ ಬೃಹತ್ ರೋಡ್ ಶೋ : ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ
ತಾಲೂಕಿನ ವಿವಿಧ ಬಾಗಗಳಿಂದ ಆಗಮಿಸಿದ್ದ ಕಮಲ ಪಡೆಯ ಸಹಸ್ರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಎಲ್. ಸಿ. ನಾಗರಾಜು ಬೃಹತ್ ರೋಡ್ ಶೋ ನಡೆಸಿದರು. ಪಟ್ಟಣದ ದಂಡಿನ ಮಾರಮ್ಮನ ದೇವಸ್ಥಾನದಿಂದ ಸಹಸ್ರಾರು ಕಾರ್ಯಕರ್ತರೊಂದಿಗೆ ಆರಂಭಗೊಂಡ ರೋಡ್ ಶೋ ತುಮಕೂರು ಗೇಟ್, ಪೆಟ್ರೋಲ್ ಬಂಕ್ ಸರ್ಕಲ್, ಡೂಂಲೈಟ್ ವೃತ್ತ, ದಂಡೂರು ಬಾಗಿಲ ರಸ್ತೆ ಮೂಲಕ ಸಾಗಿ ಪಾವಗಡ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ತಾಲೂಕು ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹರಿಯಾಣ ಮೇಯರ್ ಗೌತಮ್ ಸದರನ್, ಚುನಾವಣಾ ಉಸ್ತುವಾರಿ ಹೆಚ್.ಎಂ. ರವೀಶ್, ಬಿಜೆಪಿ ಉಪಾಧ್ಯಕ್ಷ ಬಿ ಎನ್ ಲಕ್ಷ್ಮಿಪತಿ, ಮಂಡಲ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ನಾಗೇಂದ್ರ, ಪ್ರಕಾಶ್, ಸುರೇಶ್, ಉಪ್ಪಾರಹಳ್ಳಿ ಶಿವಕುಮಾರ್, ಟಿ ಗೋವಿಂದರಾಜು, ಬಡವನಹಳ್ಳಿ ನಾಗರಾಜಪ್ಪ, ಚಿಕ್ಕ ಓಬಳರೆಡ್ಡಿ, ಹಾಜರಿದ್ದರು.