ಕೊರಟಗೆರೆ : ತಮ್ಮ ಕ್ಷೇತ್ರದಲ್ಲಿ ತಾವೂ ಗೆಲ್ಲುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್ ಅವರು ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಉನ್ನತ ಮಟ್ಟದ ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಗೆಲುವಿಗೆ ಶುಭ ಸೂಚನೆಯಾಗಿದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಅವರು ಹೇಳಿದರು.
ದಲಿತ ಮುಖ್ಯಮಂತ್ರಿ ಕೂಗಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನಾನು ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಏಕೈಕ ಗುರಿಯಾಗಿದೆ. ಪಕ್ಷ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೆ ಬರಲಿದೆ ಎಂದರು.
ಸಿಎಂಗೆ ತಿರುಗೇಟು
ಕಾಂಗ್ರೆಸ್ ಮುಳುಗುವ ಹಡಗು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೇ 13 ರಂದು ಯಾವ ಪಕ್ಷ ಮುಳುಗುವ ಹಡಗು ಎಂಬುದು ತಿಳಿಯುತ್ತದೆ, ಕಾದುನೋಡಿ ಎಂದು ತಿರುಗೇಟು ನೀಡಿದರು.
ಈ ಹಿಂದೆ ಲಕ್ಷ್ಮಣ ಸವದಿಯವರು ಸದನದಲ್ಲಿ ಬ್ಲೂ ಫಿಲಂ ನೋಡಿದಂತಹ ಸಂದರ್ಭದಲ್ಲಿ ನೀವೇ ಅವರ ವಿರುದ್ಧ ಟೀಕೆ ಮಾಡಿದ್ರಿ. ಆದರೆ ಈಗ ಅವರ ಮನೆಗೆ ಹೋಗಿ ಅವರನ್ನೆ ಸ್ವಾಗತ ಮಾಡಿರುವುದು ಸರಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪಕ್ಷವೇ ಅವರನ್ನು ಮನ್ನಿಸಿ ಉನ್ನತ ಹುದ್ದೆಗಳನ್ನು ನೀಡಿತ್ತು. ಅವರಿಗೂ ಸಾರ್ವಜನಿಕ ಜೀವನದಲ್ಲಿ ಇಂತಹ ತಪ್ಪುಗಳ ಅರಿವಾಗಿರುವುದರಿಂದ ಮನ್ನಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.