ಪಾವಗಡ : ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ತಾಲೂಕಿನ ತುಮಕುಂಟೆ ಗ್ರಾಮದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಹನುಮಂತಪ್ಪ ತಿಳಿಸಿದ್ದಾರೆ.
ತಾಲೂಕಿನ ಅರಸೀಕೆರೆ ಗ್ರಾ.ಪಂ ವ್ಯಾಪ್ತಿಯ ತುಮಕುಂಟೆ ಗ್ರಾಮದ ಸುಮಾರು ಒಂಬತ್ತಕ್ಕೂ ಹೆಚ್ಚು ರೈತರ ಕುಟುಂಬಗಳು ಸಾಲ ಸೂಲ ಮಾಡಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು ಬೋರ್ ವೆಲ್‌ಗಳಿಗೆ ಅವಡಿಸಿದ್ದ ಟ್ರಾನ್ಸ್ಫರ‍್ಮರ್ ಸುಟ್ಟು ಸುಮಾರು 45 ದಿನಗಳು ಆಗಿದೆ, ರೈತರು ಅನೇಕ ಬಾರಿ ಜೆಇ ಮತ್ತು ಎಇಇ ರವರಿಗೆ ತಮ್ಮ ಕಷ್ಟ ಹೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ರೈತ ಸುಮಂತ್ ಆರೋಪಿಸಿದ್ದಾರೆ.
ಸರ್ವೆ ನಂ 108, 44, 44/1, 45/1, 46/2, 46/6, 45/2 ಗೆ ಸೇರಿದ ಒಟ್ಟು 35 ಎಕರೆ ಪ್ರದೇಶಕ್ಕೆ ನೀರು ಹರಿಸಲು ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್ಫರ‍್ಮರ್ ಸುಟ್ಟು ಹೋಗಿ ತೋಟಗಾರಿಕೆ ಬೆಳೆಗಳು ಒಣಗಿ ಹೋಗುತ್ತಿದ್ದು ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ರೈತರ ನೆರೆವಿಗೆ ಬರಬೇಕೆಂದು ರೈತ ಕೆಂಚಪ್ಪ ಮನವಿ ಮಾಡಿದ್ದಾರೆ.
ಅಧಿಕಾರಿಗಳು ತಿಳಿಸಿರುವ ಹಣವನ್ನು ಪಾವತಿಸಿದ್ದೇವೆ, ಅನೇಕ ಬಾರಿ ಬೆಸ್ಕಾಂ ಇಲಾಖೆಗೂ ತಿರುಗಾಡಿದ್ದೇವೆ, ಬೆಳೆಗಳು ಒಣಗುತ್ತಿರುವುದರಿಂದ ಊಟ ನಿದ್ರೆ ಸೇರದೆ ಮನೆ ಮಕ್ಕಳೆಲ್ಲಾ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮಹಿಳೆ ವೀಣಾ ತಿಳಿಸಿದ್ದಾರೆ.
ತಾಲೂಕು ಸೇರಿದಂತೆ ರಾಜ್ಯಾದ್ಯಂತ ಚುನಾವಣೆ ಕಾವು ರಂಗೇರಿದೆ, ಗೆಲುವಿಗಾಗಿ ಕಸರತ್ತು ಮಾಡುತ್ತಿರುವ ರಾಜಕಾರಣಿಗಳು ಹಾಗೂ ರಾಜಕಾರಣಿಗಳ ಕೈಬೊಂಬೆಯಂತೆ ಕೆಲಸ ಮಾಡುವ ಅಧಿಕಾರಿಗಳು ಬಡ ರೈತರ ಸಂಕಷ್ಟಗಳಿಗೆ ಸಕಾಲದಲ್ಲಿ ಸ್ಫಂದಿಸಿದ್ದರೆ ಅದೆಷ್ಟೋ ರೈತರ ಆತ್ಮ ಹತ್ಯೆಗಳು ಆಗುತ್ತಿರಲಿಲ್ಲ.
-ಹನುಮಂತರಾಯಪ್ಪ, ರೈತ, ತುಮಕುಂಟೆ ಗ್ರಾಮ.
ರೂತರು ನೀಡಿದ ದೂರಿನ ಮೇರೆಗೆ ಟ್ರಾನ್ಸ್ಫರ‍್ಮರ್ ಬದಲಾವಣೆಗೆ ಎಲ್ಲಾ ಏರ್ಪಾಟು ಮಾಡಲಾಗಿತ್ತು ಆದರೆ ರೈತರು 3ಸ್ಟಾರ್ ರೇಟಿಂಗ್ ಇರುವ ಟ್ರಾನ್ಸ್ಫರ‍್ಮರ್ ಕೇಳಿದ್ದರಿಂದ ತಡವಾಗಿದೆ, ಎರಡು ದಿನಗಳಲ್ಲಿ ಟ್ರಾನ್ಸ್ಫರ‍್ಮರ್ ವಿತರಿಸಿ ರೈತರ ಸಮಸ್ಯೆ ಬಗೆಹರಿಸಲಾಗುವುದು. –ಚೌಡಪ್ಪ. ಜೆ.ಇ. ಮಂಗಳವಾಡ ಬೆಸ್ಕಾಂ ಇಲಾಖೆ.
ಈ ವೇಳೆ ತುಮಕುಂಟೆ ಗ್ರಾಮದ ರೈತರಾದ ಹನುಮಂತರಾಯಪ್ಪ, ಕೆಂಚಪ್ಪ, ಶ್ರೀನಿವಾಸ, ಮಂಜುನಾಥ್, ಅನಿಲ್ ಕುಮಾರ್, ವೀಣಾ ಇದ್ದರು.