ಮಧುಗಿರಿ : ನಾನು ಶಾಸಕನಾಗುವ ಅನಿವಾರ್ಯತೆಯಿಲ್ಲ. ಅಗತ್ಯತೆಯಿಲ್ಲ. ಆದರೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚುನಾವಣಾ ಅಖಾಡಕ್ಕೆ ದುಮುಕಿದ್ದೇನೆ. ಕ್ಷೇತ್ರವನ್ನು ವಲಸಿಗರ ಆಡಳಿತದಿಂದ ಮುಕ್ತಗೊಳಿಸಬೇಕು, ನಿಷ್ಕ್ರಿಯಗೊಂಡಿರುವ ಆಡಳಿತ ಸಕ್ರಿಯಗೊಳಿಸಬೇಕು ಎಂಬುದೇ ನಮ್ಮ ದ್ಯೇಯ ಎಂದು ಜನ ಮುಖಿ ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಲ್ ಸಿ ನಾಗರಾಜು ತಿಳಿಸಿದರು.
ಪಟ್ಟಣದ ಮಂಡಲ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳಿಂದ ಭಾಜಪ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಈ ಮಣ್ಣಿನ ಮಗ ,ಈ ತಾಲೂಕಿನ ಜನತೆಯ ಆಸ್ಮಿತೆ ಕಾಪಾಡಲು ರಾಜಕಾರಣಕ್ಕೆ ಬಂದಿದ್ದೇನೆ. ನಾನು ಜಾತಿ ರಾಜಕಾರಣ ಮಾಡುವುದಿಲ್ಲ, ಪ್ರೀತಿ ರಾಜಕಾರಣ ಮಾಡುತ್ತೇನೆ ಹಾಗೂ ತಾಲೂಕಿನ ಆಡಳಿತ ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಹೊರತು ವಲಸಿಗರಿಗೆ ಸಿಗಬಾರದು ಎಂಬುದೇ ನಮ್ಮ ಬಹುಮುಖ್ಯ ಗುರಿ.
2023 ರ ಕುರುಕ್ಷೇತ್ರದಲ್ಲಿ ಸ್ಥಳೀಯರು ಗೆಲ್ಲಬೇಕಾ ಅಥವಾ ಬೇರೆಯವರು ಗೆಲ್ಲಬೇಕಾ ಎಂಬುದನ್ನು ಮತದಾರರು ತೀರ್ಮಾನಿಸಬೇಕು. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ದೃಡ ಹುಮ್ಮಸ್ಸಿನೊಂದಿಗೆ ವ್ಯವಸ್ಥಿತವಾಗಿ ಚುನಾವಣೆ ಮಾಡುತ್ತೇವೆ ಎಂದರು.
ಮಧುಗಿರಿ ವಿಧಾನಸಭಾ ಕ್ಷೇತ್ರದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕಾವಣದಾಲ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿ ಎಸ್ ಎಸ್ ಎನ್ ನಿರ್ದೇಶಕರಗಳು ಇಂದು ಭಾಜಪ ಪಕ್ಷಕ್ಕೆ ಸೇರಿದ್ದಾರೆ ಭಾರತೀಯ ಜನತಾ ಪಕ್ಷ ಸ್ಥಳೀಯ ಅಭ್ಯರ್ಥಿಗೆ ಅವಕಾಶ ಮಾಡಿಕೊಟ್ಟಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿ ಆಯ್ಕೆ ಆಗಬೇಕಾಗಿದೆ 2023ರ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿಯ ಭೂಮಿ ಹಕ್ಕು ಮಧುಗಿರಿಯವರಿಗೆ ಮಾತ್ರ ಸೇರಬೇಕು ಎಂದರು.
ತಾಲೂಕಿನ ಬಹುತೇಕ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಸ್ಥಳೀಯರಿಗೆ ಅವಕಾಶ ನೀಡುವುದಾದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದಿದ್ದೆ ,ಆದರೆ ಯಾರೂ ಮುಂದೆ ಬರದ ಕಾರಣ ನಾನು ಈ ಬಾರಿ ಸ್ಥಳೀಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ನಾನು ಬದುಕಿರುವರೆಗೂ ಸ್ಥಳೀಯರ ಧ್ವನಿಯಾಗಿ ಅವರ ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ಸ್ಪಂದಿಸುತ್ತೇನೆ. 2028 ಕ್ಕೆ ಕ್ಷೇತ್ರದಲ್ಲಿ 10 ಜನ ಸ್ಥಳೀಯರು ಗೆಲ್ಲುವ ರೀತಿಯಲ್ಲಿ ಅಭ್ಯರ್ಥಿಗಳನ್ನು ತಯಾರು ಮಾಡುತ್ತೇನೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ ಈ ಬಾರಿ ಯುವಕ ಪಡೆಯು ಬಿಜೆಪಿಗೆ ಬೆಂಬಲವಾಗಿ ನಿಂತಿದ್ದು, ಇತರ ಪಕ್ಷಗಳ ಮತ ಪೆಟ್ಟಿಗೆಯು ಖಾಲಿ ಡಬ್ಬಗಳಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ಈ ಬಾರಿ ಬಿಜೆಪಿಯು ಈ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ ಎಂದರು.
ಈ ವೇಳೆ ದೊಡ್ಡೇರಿಯ ಮುಖಂಡರಾದ ಶ್ರೀರಂಗನಾಥ, ಪದ್ಮಣ್ಣ, ಲಕ್ಷ್ಮಿಕಾಂತ ಲಕ್ಷ್ಮೀನಾರಾಯಣ, ಕಾವಣದಾಲ ಗ್ರಾ. ಪಂ ಅಧ್ಯಕ್ಷ ರಂಗನಾಥ್ ಇನ್ನಿತರರು ಬಿಜೆಪಿ ಸೇರ್ಪಡೆಯಾದರು. ಮುಖಂಡರಾದ ನಾಗೇಂದ್ರ, ಶಿವಕುಮಾರ್ ನವೀನ್, ರಂಗನಾಥ್ ಇನ್ನಿತರರು ಹಾಜರಿದ್ದರು.