ತಿಪಟೂರು : ಕ್ವಿಂಟಾಲ್ ಕೊಬ್ಬರಿಗೆ 20ಸಾವಿರ ರೂ ಬೆಂಬಲಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಧರಣಿಯನ್ನು ಪ್ರಾರಂಭಿಸಲಾಯಿತು.
ಸಮಿತಿ ಕಾರ್ಯದರ್ಶಿ ಎಸ್.ಎನ್.ಸ್ವಾಮಿ ಮಾತನಾಡಿ, ರೈತ ಸಂಘಟನೆಗಳು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಏರಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬರುತ್ತಿವೆ. ಕೇಂದ್ರ ಸರಕಾರ ಕೇವಲ 11750 ಬೆಂಬಲಬೆಲೆ ನಿಗಧಿಪಡಿಸಿದೆ. ರಾಜ್ಯ ಸರಕಾರ ರೈತರಿಗೆ ಪ್ರೋತ್ಸಾಹಧನ ಘೋಷಿಸದೆ ತನ್ನ ರೈತ ವಿರೋಧಿ ಧೋರಣೆ ಮುಂದುವರೆಸಿ ಕೊಬ್ಬರಿ ಬೆಲೆ ಬಗ್ಗೆ ಏನೂ ಮಾತನಾಡುತ್ತಿಲ್ಲ. ಸರ್ಕಾರ ರೈತರಿಗಾಗಿ ಭೂಸಿರಿ, ಫಸಲ್ ಭೀಮಾ ಹೀಗೆ ಹಲವು ಯೋಜನೆಗಳನ್ನು ತಂದಿದ್ದರೂ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲದೆ ಕೇವಲ ವಿಮಾ ಕಂಪನಿಗಳು ಉದ್ದಾರವಾಗಿದೆ ಎಂದು ಆಪಾದಿಸಿದರು.
ಜನಪ್ರತಿನಿಧಿಗಳು ಕೊಬ್ಬರಿ ಬೆಲೆ ದಿನೇ ದಿನೇ ಇಳಿಕೆಯಾಗುತ್ತಿದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಮಯದಲ್ಲಿ ಮಾತ್ರ ರೈತರನ್ನು ಬಳಸಿಕೊಳ್ಳುತ್ತಿದೆ. ರೈತರ ಜೀವನಾಡಿಯಾಗಿರುವ ತೆಂಗು ಮತ್ತು ಕೊಬ್ಬರಿಯ ಮೇಲೆ ರೈತರ ಬದುಕು ಅವಲಂಬಿತವಾಗಿದೆ. ಕೊಬ್ಬರಿಗೆ ಕನಿಷ್ಠ 20ಸಾವಿರ ಬೆಂಬಲ ಬೆಲೆ ನಿಗಧಿ ಮಾಡಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಸಮಿತಿ ಗೌರವಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ ಮಾತನಾಡಿ, ತುಮಕೂರಿಗೆ ಪ್ರಧಾನಿ ಮೋದಿ ಬಂದರೂ ತೆಂಗು ಬೆಳೆಗಾರರ ಬಗ್ಗೆ ಮಾತನಾಡಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ತಿಪಟೂರಿಗೆ ಬಂದರೂ ಕೊಬ್ಬರಿ ಬೆಲೆ ಬಗ್ಗೆ ಚಕಾರವೆತ್ತಲಿಲ್ಲ. ರಾಜಕಾರಣಿಗಳಿಗೆ ರೈತರ ಕಷ್ಟಗಳು ಅರ್ಥಮಾಡಿಕೊಳ್ಳದೆ ಮನಸ್ಸಿಗೆ ಬಂದಂತೆ ಅಧಿಕಾರ ಮಾಡುತ್ತಾ ದೇಶ ಸಾಕುವ ರೈತನಿಗೆ ಮೋಸ ಮಾಡುತ್ತಿದ್ದಾರೆ. ಕೂಡಲೆ ಸರಕಾರ ಕೊಬ್ಬರಿಗೆ ವೈಜ್ಞಾನಿಕ ಬೆಲೆ ಕೊಟ್ಟು ರೈತನ ಬದುಕನ್ನು ಹಸನು ಮಾಡಬೇಕೆಂದರು.
ರೈತ ಮುಖಂಡ ಗಂಗಾಧರಯ್ಯ ತಿಮ್ಲಾಪುರ ಮಾತನಾಡಿ, ದೇಶದಲ್ಲಿ ಶೇ.80ರಷ್ಟು ರೈತರಿದ್ದು ನಷ್ಟಮಾಡಿಕೊಂಡು ಬೆಳೆದ ಬೆಳೆಯಿಂದ ಇಡೀ ದೇಶವನ್ನೆ ಸಾಕುತಿದ್ದಾನೆ. ಆದರೆ ಸರ್ಕಾರಗಳು ಇದಾವುದನ್ನು ಅರ್ಥಮಾಡಿಕೊಳ್ಳದೆ ಬೆಳೆದ ಬೆಳೆಗಳಿಗೆ ನಿಗಧಿತ ಬೆಲೆ ಕೊಡದೆ ಬದುಕನ್ನು ಮೂರಾಬಟ್ಟೆ ಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕು ಎಂದರು.
ಪ್ರತಿಭಟನಾ ಧರಣಿಯಲ್ಲಿ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ತಾ. ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಮನೋಹರ ಪಟೇಲ್, ರೇಣುಕಾರಾಧ್ಯ, ಜಯಾನಂದಯ್ಯ, ಅರಸೀಕೆರೆ ಉಪಾಧ್ಯಕ್ಷ ಮಧುಸೂದನ್, ಸಹ ಕಾರ್ಯದರ್ಶಿ ಸಿದ್ದಯ್ಯ, ಚಿದಾನಂದ್, ದೇವರಾಜು ತಿಮ್ಲಾಪುರ, ಮತ್ತಿತರರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್.ಪವನ್‌ಕುಮಾರ್ ಆಗಮಿಸಿ ರೈತರು ಸನೆಸುತ್ತಿರುವ ಪ್ರತಿಭಟನೆ ಬಗ್ಗೆ ಉಪವಿಭಾಗಾಧಿಕಾರಿಯವರ ಗಮನಕ್ಕೆ ತಂದು ರೈತರ ಬೇಡಿಕೆಗಳ ಬಗ್ಗೆ ಚರ್ಚಿಸುತ್ತೇವೆಂದು ಭರವಸೆ ನೀಡಿದರು. ಆದರೆ ಅದಕ್ಕೊಪ್ಪರ ರೈತರು ನಾವು ಪ್ರತಿಭಟಿಸುತ್ತಿರುವ ವಿಷಯವನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತರಬೇಕು. ಕೊಬ್ಬರಿ ಬೆಂಬಲಬೆಲೆ ಹೆಚ್ಚು ಮಾಡುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದರು.