ರಾಜ್ಯದಲ್ಲಿ 150 ಕ್ರೈಸ್ತ ಸಮುದಾಯ ಭವನ ನಿರ್ಮಾಣ : ಜೆ.ಕೆನಡಿ
ತುಮಕೂರು : ಕ್ರೈಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ 2011 ರಿಂದ ಈವರೆಗೂ ಸುಮಾರು 150 ಹೊಸ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ದಿ ಸಮಿತಿ(ಕೆಸಿಡಿಸಿ) ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲೇ ಸುಮಾರು 85 ಸಮುದಾಯ ಭವನ ಸೇರಿದಂತೆ ರಾಜ್ಯದಲ್ಲಿ 150 ಭವನಗಳನ್ನು ನಿರ್ಮಾಣ ಮಾಡಲಾಗಿದೆ.ಕ್ರೈಸ್ತ ಸಮುದಾಯದ ಬಡವರ್ಗದವರಿಗೆ ಕಡಿಮೆ ಬಾಡಿಗೆ ದರವನ್ನು ನಿಗಧಿಪಡಿಸಿ ಸಮುದಾಯ ಭವನವನ್ನು ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರಲ್ಲದೆ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರ ಪ್ರದೇಶದಲ್ಲಿ 1 ಕೋಟಿ ರೂ. ಹಾಗೂ ಗ್ರಾಮೀಣ ಪ್ರದೇಶದಲ್ಲಿ 50ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಕ್ರೈಸ್ತ ಅಭಿವೃದ್ಧಿ ಸಮಿತಿಯು 2011ರಲ್ಲಿ ರಚನೆಯಾಗಿದ್ದು, ಸಮಿತಿ ರಚನೆಯಾದ ಪ್ರಾರಂಭದಲ್ಲಿ 50 ಕೋಟಿ ರೂ.ಗಳ ಅನುದಾನ ಲಭ್ಯವಿತ್ತು.ಪ್ರಸ್ತುತ 200 ಕೋಟಿ ರೂ.ಗಳ ಅನುದಾನ ಲಭ್ಯವಿದೆ.ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ಈ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ. ಇದರಿಂದ ಪರಿಣಾಮಕಾರಿಯಾಗಿ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.
ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎನ್ನುವ ಸರಕಾರದ ಧ್ಯೇಯದಂತೆ ಕ್ರೈಸ್ತ ಸಮುದಾಯದ ಸಬಲೀಕರಣಕ್ಕಾಗಿ ನ್ಯಾಯಬದ್ಧ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದರಲ್ಲದೆ, ನಿರ್ವಹಣೆ ಇಲ್ಲದೆ ಶಿಥಿಲ ಸ್ಥಿತಿ ತಲುಪಿದ್ದ ಸುಮಾರು 300 ವರ್ಷ ಹಳೆಯ ಚರ್ಚ್ಗಳ ನವೀಕರಣ,ದುರಸ್ತಿಗಾಗಿ ಅನುದಾನವನ್ನು ಬಳಕೆ ಮಾಡಲಾಗಿದ್ದು, ಪ್ರಸ್ತುತ ದುರಸ್ತಿಯಾದ ಚರ್ಚ್ಗಳು ಸಮುದಾಯದ ಧಾರ್ಮಿಕ ಬೇಡಿಕೆಗಳನ್ನು ಈಡೇರಿಸುತ್ತಿವೆ ಎಂದು ತಿಳಿಸಿದರು.
ಕ್ರೈಸ್ತ ಸಮುದಾಯದ ಸಂಘ ಸಂಸ್ಥೆಗಳಡಿ ನಡೆಯುತ್ತಿರುವ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ಆಡಳಿತಾತ್ಮಕ ವೆಚ್ಚವಾಗಿ ವಾರ್ಷಿಕ ಗರಿಷ್ಟ 15ಲಕ್ಷ ರೂ.ಗಳ ಅನುದಾನವನ್ನು ನೀಡಲಾಗುತ್ತಿದೆ.ರಾಜ್ಯದ 45ಕ್ಕೂ ಹೆಚ್ಚು ಅನಾಥಾಶ್ರಮ ಹಾಗೂ 50ಕ್ಕೂ ಹೆಚ್ಚು ವೃದ್ಧಾಶ್ರಮಗಳು ಈ ಸೌಲಭ್ಯವನ್ನು ಪಡೆಯುತ್ತಿವೆ.ಕ್ರೈಸ್ತಸಂಘ ಸಂಸ್ಥೆಗಳ ಅಧೀನದಲ್ಲಿರುವ ಸ್ಮಶಾನ ಭೂಮಿ ಒತ್ತುವರಿಯಾಗುವುದನ್ನು ತಡೆಗಟ್ಟುವ ಸಲುವಾಗಿ ಆವರಣ ಗೋಡೆ ನಿರ್ಮಾಣಕ್ಕಾಗಿ ವೆಚ್ಚಕ್ಕನುಗುಣವಾಗಿ ಗರಿಷ್ಟ 40ಲಕ್ಷ ರೂ.ಗಳನ್ನು ಒದಗಿಸಲಾಗುತ್ತಿದೆಯಲ್ಲದೆ, ಚರ್ಚ್ಗಳ ಆವರಣ ಗೋಡೆ ನಿರ್ಮಾಣಕ್ಕೂ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸರಕಾರದಿಂದ ಈಗಾಗಲೇ ವಿದೇಶಿ ವ್ಯಾಸಂಗಕ್ಕಾಗಿ ಗುರುತಿಸಲಾಗಿರುವ 500 ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ 20ಲಕ್ಷ ರೂ.ಗಳ ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗುವುದು. ಕ್ರೈಸ್ತ ಅಭಿವೃದ್ಧಿ ಸಮಿತಿಯ ಅನುದಾನವನ್ನು ಬಳಸಿಕೊಂಡು ಚರ್ಚ್, ವೃದ್ಧಾಶ್ರಮ, ಅನಾಥಾಶ್ರಮ, ಸಮುದಾಯ ಭವನಗಳು, ಅಭಿವೃದ್ಧಿ ಹೊಂದಿವೆ ಎಂದು ತಿಳಿಸಿದರಲ್ಲದೆ, 2013 ರಿಂದ 2022ರವರೆಗೆ ಜಿಲ್ಲೆಯ ತುಮಕೂರು ತಾಲ್ಲೂಕು ಕ್ಯಾತ್ಸಂದ್ರದ ನ್ಯೂ ಲೈಫ್ ಫಿಲೋಶಿಪ್ ಚರ್ಚ್, ಗಾಂಧಿ ನಗರದ ಅವರ್ ಲೇಡಿ ಆಫ್ ರೋಸರಿ ಕಾನ್ವೆಂಟ್, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ತಿಪಟೂರು ತಾಲ್ಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ಚರ್ಚ್ಗಳ ನವೀಕರಣಕ್ಕಾಗಿ ಸೇರಿದಂತೆ ಒಟ್ಟು 1.24ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಕುಣಿಗಲ್ ತಾಲೂಕು ವಾಣಿಗೆರೆಯಲ್ಲಿ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಯ ಸಮುದಾಯ ಭವನ ನಿರ್ಮಾಣಕ್ಕಾಗಿ 45ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದ್ದು, ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಜೆ.ಕೆನಡಿ ತಿಳಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೇರ್ ಕರಂಗಿ ಮಾತನಾಡಿ, ಶೀಘ್ರದಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.ಉದ್ಘಾಟನೆಯ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮುಲ್ಲಾ ಹಾಜರಿದ್ದರು.