ಆರೋಗ್ಯಜಿಲ್ಲೆತುಮಕೂರು

ವೈದ್ಯರು ತಮ್ಮ ವೃತ್ತಿಗೆ ನ್ಯಾಯ ಒದಗಿಸಿದರೆ ರೋಗಿಗಳ ಕಣ್ಣಿಗೆ ದೇವರಾಗಿ ಕಾಣುತ್ತೀರಿ : ಸಚಿವ ಜೆ.ಸಿ.ಮಾಧುಸ್ವಾಮಿ

ತುಮಕೂರು : ಸರಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೇಪರ್ ಮಾಡುವ ಪೋಸ್ಟ್ಮನ್ ಕೆಲಸದ ಬದಲು,ತಮ್ಮ ಶಕ್ತಿಯನ್ನು ಅರಿತು, ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ,ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ನೀಡಿದ್ದಾರೆ.
ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಹೆಚ್.ಎಂ.ಗಂಗಾಧರಯ್ಯ ಮೇಮೊರಿಯಲ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ಕಲ್ಪತರು ವೈದ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನೀವು ನಿಮ್ಮ ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲ್ಲು ಸಿದ್ದ ಎಂದ ಅಭಯ ನೀಡಿದರು.
ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ. ಕೋವಿಡ್ ಸಂದರ್ಭದಲ್ಲಿ ನಮ್ಮ ಸರಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗದುಕೊಂಡು ನಿರಂತರ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಯಿತು.ಇದಕ್ಕಾಗಿ ನಾನು ನಾಡಿನ ಎಲ್ಲ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಸರಕಾರಿ ಶಾಲೆಯ ಶಿಕ್ಷಕರು ಮತ್ತು ಸರಕಾರಿ ಆಸ್ಪತ್ರೆಯ ವೈದ್ಯರು ಪ್ರತಿಭಾವಂತರು,ಆದರೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಲು ಹಿಂದೇಟು ಹಾಕುವ ಪರಿಣಾಮ, ಈ ವಲಯದಲ್ಲಿ ಖಾಸಗಿ ಶಾಲೆಗಳು,ಆಸ್ಪತ್ರೆಗಳು ವಿಜೃಂಭಿಸುತ್ತಿವೆ.ನಿಮ್ಮ ಬಳಿ ಬರುವ ದೇವರ ಮಕ್ಕಳಿಗೆ ಒಳ್ಳೆಯ ಸೇವೆ ನಿಮ್ಮಿಂದ ದೊರೆತರೆ,ಅದು ಭಗವಂತನಿಗೆ ಪ್ರೀತಿಯಾಗುತ್ತದೆ.ಜನರ ಹೃದಯದಲ್ಲಿ ಸ್ಥಾನಗಳಿಸುತ್ತೀರಿ.ರೋಗಿಗಳ ಬಗ್ಗೆ ಅಸಡ್ಡೆ ತೊರದೆ,ಆತನನ್ನು ಪರೀಕ್ಷಿಸಿದ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವುದರಿಂದ ನೀವು ನೀಡುವ ಚಿಕಿತ್ಸೆ ದೇಹಕ್ಕಿಂತ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಜೆ.ಸಿ.ಮಾಧುಸ್ವಾಮಿ ಕಿವಿ ಮಾತು ಹೇಳಿದರು.

ವೈದ್ಯರು ಸಲ್ಲಿಸಿರುವ ಮನವಿಯನ್ನು ಸರಕಾರದ ಸಂಬಂಧ ಪಟ್ಟ ಮಂತ್ರಿಗಳಿಗೆ ಸಲ್ಲಿಸುವ ಕೆಲಸ ಮಾಡುತ್ತೇನೆ.ಅಲ್ಲದೆ ಸರಕಾರ ಸಿ & ಆರ್. ನಿಯಮ ರೂಪಿಸಿ ಕಾನೂನು ಇಲಾಖೆಗೆ ಕಳುಹಿಸಿದರೆ ಒಂದೇ ವಾರದಲ್ಲಿ ಅದನ್ನು ಮಂಜೂರು ಮಾಡಿ ಕಳುಹಿಸಲು ನಾವು ಸಿದ್ದರಿದ್ದೇವೆ.ಸರಕಾರ ಕೋವಿಡ್ ನಂತರದಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಹೆಚ್ಚು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ.ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಬೆಡ್ ಹಾಸಿಗೆಯ ಆಸ್ಪತ್ರೆಯ ಜೊತೆಗೆ,ಅಕ್ಸಿಜನ್ ಪ್ಲಾಂಟ್ ಕಡ್ಡಾಯಗೊಳಿಸಿದೆ.ಇದರ ಜೊತಗೆ ಸಮುದಾಯ ಆಸ್ಪತ್ರೆಗಳನ್ನು ಶಕ್ತಿ ಶಾಲಿಯಾಗಿಸಲು ಎಲ್ಲಾ ರೀತಿ ಕ್ರಮ ಕೈಗೊಂಡಿದೆ.ಆದರೆ ಮಾನವ ಸಂಪನ್ಮೂಲದ ಕೊರತೆಯನ್ನು ಸರಿದೂಗಿಸುವ ಕೆಲಸ ಆಗಬೇಕಾಗಿದೆ.ಈ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಸರಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ.ತಾವುಗಳು ಸಹ ವಿಜ್ಞಾನ ತಂತ್ರಜ್ಞಾನದ ಜೊತೆ ಜೊತೆಗೆ ಕೆಲಸ ಮಾಡಿದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ನುಡಿದರು.
ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಕೋವಿಡ್ ಸಮಯದಲ್ಲಿ ಎರಡು ವರ್ಷಗಳ ನಿಮ್ಮ ಜೊತೆ ಕೆಲಸ ಮಾಡಿ, ನಿಮ್ಮ ಕಷ್ಟ ಸುಖಃಗಳ ಅರಿವಿದೆ.ಸಿಬ್ಬಂದಿಗಳ ಕೊರತೆಯ ನಡುವೆಯೂ ನಿಮ್ಮ ಸೇವೆ ಶ್ಲಾಘನೀಯ. ಆರೋಗ್ಯ ಕ್ಷೇತ್ರ ಅದ್ಯತಾ ವಲಯ. ಮುಖ್ಯಮಂತ್ರಿಗಳಿಗೆ ನಿಮ್ಮ ಕಷ್ಟದ ಅರಿವಿದೆ. ನಿಮ್ಮ ನೆರವಿಗೆ ಬರಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಹಿರೇಮಠಾಧ್ಯಕ್ಷ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ಮಾತನಾಡಿ, ಆಮಂತ್ರಣ ವಿಲ್ಲದೆ ಹೋಗುವ ಎರಡು ಜಾಗಗಳೆಂದರೆ ಒಂದು ಆಸ್ಪತ್ರೆ,ಮತ್ತೊಂದು ಸ್ಮಶಾನ.ಆಸ್ಪತ್ರೆಗೆ ಅಶಕ್ತನಾಗಿ ಬಂದ ವ್ಯಕ್ತಿಯನ್ನು ನಿಮ್ಮ ಸೇವೆಯಿಂದ ಶಕ್ತನಾಗಿ ಹೊರಬರುತ್ತಾನೆ.ತಾಯಿ ಜನ್ಮ ನೀಡಿದರೆ,ವೈದ್ಯರು ಮರು ಜನ್ಮ ನೀಡುತ್ತಾರೆ ಹಾಗಾಗಿ ವೈದ್ಯರನ್ನು ನಾರಾಯಣನಿಗೆ ಹೊಲಿಸಲಾಗಿದೆ.ಖಾಸಗಿ ವೈದ್ಯರಿಗಿಂತ ಸರಕಾರಿ ವೈದ್ಯರ ಜವಾಬ್ದಾರಿ ಹೆಚ್ಚಿದೆ.ಸರಕಾರಿ ಶಾಲೆ,ಬಸ್ಸು, ಆಸ್ಪತ್ರೆ ಚನ್ನಾಗಿಲ್ಲ ಎಂಬ ಟ್ರಂಡ್ ಹೆಚ್ಚಾಗಿದೆ.ಇದನ್ನು ಹೋಗಲಾಡಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕೆಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಎ.ಎನ್.ದೇಸಾಯಿ ಮಾತನಾಡಿ,ಸರಕಾರ ಈಗಾಗಲೇ ವೈದ್ಯರು ನೀಡಿದ ಪ್ರಮುಖ ಬೇಡಿಕೆಗಳಲ್ಲಿ ಎರಡನ್ನು ಈಡೇರಿಸಿದೆ.ಜುಲೈ 1ನೇ ತಾರೀಖನ್ನು ವೈದ್ಯರ ದಿನವಾಗಿ ವಿಧಾನಸೌಧದ ಬ್ವಾಂಕಟ್ ಹಾಲ್‌ನಲ್ಲಿ ಆಯೋಜಿಸಬೇಕು ಹಾಗೂ ಶಿಥಿಲವಾಗಿರುವ ಆರೋಗ್ಯ ಭವನವನ್ನು 6 ಕೋಟಿ ರೂ ವೆಚ್ಚದಲ್ಲಿ ಹೊಸದಾಗಿ ಕಟ್ಟಲು ತೀರ್ಮಾನಿಸಿದೆ. ಅವುಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕು.ಸರಕಾರಿ ವೈದ್ಯಾಧಿಕಾರಿಗಳ ಸಿ & ಆರ್ ರೂಲ್ಸ್ 20 ವರ್ಷಗಳಿಂದ ಪರಿಷ್ಕರಣೆ ಗೊಂಡಿಲ್ಲ.ಇದು ವೈದ್ಯರ ಮುಂಬಡ್ತಿಗೆ ತೊಂದರೆಯಾಗಿದೆ.ಐಪಿಹೆಚ್‌ಎಸ್ ಮಾನದಂಡಕ್ಕೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿ ನೇಮಕ,ಕೌನ್ಸಿಲಿಂಗ್ ಮೂಲಕ ವೈದ್ಯರ ವರ್ಗಾವಣೆ ಮತ್ತಿತರರ ಬೇಡಿಕೆಗಳ ಮನವಿಯನ್ನು ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ.ಎಂ.ಇಂದುಮತಿ,ಡಾ.ಪ್ರಮಿಳಾ ಮರೂರ್ ಮಾತನಾಡಿದರು.ವೇದಿಕೆಯಲ್ಲಿ ವೀಕ್ಷಕರಾದ ಡಾ.ರವಿ,ಮಾಜಿ ಅಧ್ಯಕ್ಷ ಡಾ.ರಂಗನಾಥ್,ಡಾ.ಸೈಯದ್ ಮದಿನಿ,ಡಾ.ಮೇಟಿ, ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಚೇತನ್, ಡಾ.ಡಿ.ಎಂ.ಗೌಡ, ಡಾ.ಚಂದನ್, ಡಿಹೆಚ್‌ಓ ಡಾ. ಮಂಜುನಾಥ್, ಡಿ.ಎಸ್. ಡಾ.ವೀಣಾ, ಡಾ.ರಜಿನಿ ಡಾ.ದಿನೇಶ್, ಡಾ.ಸನತ್, ಡಾ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker