ತುಮಕೂರು : ನಗರದ ಚಕ್ರವರ್ತಿ ಗೆಳೆಯರ ಬಳಗದ ವತಿಯಿಂದ ಡಾ.ಪುನೀತ್ ರಾಜ್‌ಕುಮಾರ್ ಸವಿ ನೆನಪಿಗಾಗಿ ಫೆ.09ರಿಂದ 12ರವರೆಗೆ ನಾಲ್ಕು ದಿನಗಳ ಕಾಲ ಐದನೇ ವರ್ಷದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಟೆನ್ನಿಸ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಾಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಚಕ್ರವತಿ ಗೆಳೆಯರ ಬಳಗದ ಪ್ರಕಾಶ್ ಮತ್ತು ತಂಡ ಪ್ರತಿ ಮೂರು ವರ್ಷಕ್ಕೊಮ್ಮೆ ಇಂತಹ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತಿದ್ದಾರೆ.ಫೆ.09ರ ಗುರುವಾರದಿಂದ ಫೆ.12ರ ಭಾನುವಾರದ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಪಡೆದ ತಂಡಕ್ಕೆ 3 ಲಕ್ಷ ರೂ ಬಹುಮಾನ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ 1.50 ಲಕ್ಷ ರೂ ಮತ್ತು ಟ್ರೋಪಿ ನೀಡಲಾಗುವುದು.ಅಲ್ಲದೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದರು.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಈ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ತಂಡಗಳು ಅಲ್ಲದೆ,ಹೊರರಾಜ್ಯಗಳಾದ ಆಂಧ್ರ ಪ್ರದೇಶ, ಛತ್ತಿಸ್‌ಗಡ್ ಸೇರಿದಂತೆ ಒಟ್ಟು 32 ತಂಡಗಳು ಭಾಗವಹಿಸುತ್ತಿದ್ದು,ಎಲ್ಲಾ ಕ್ರೀಡಾಪಟುಗಳಿಗೆ ಊಟ, ವಸತಿ ವ್ಯವಸ್ಥೆಯ ಚಕ್ರವರ್ತಿ ಗೆಳೆಯರ ಬಳಗ ಮಾಡಿದೆ. ಫೆ.09ರಂದು ಸಂಜೆ 6 ಗಂಟೆಗೆ ಕ್ರೀಡಾಕೂಟಕ್ಕೆ ಮಾಜಿ ಡಿಸಿಎಂ ಹಾಗೂ ಕರ್ನಾಟಕ ಅಥ್ಲೇಟಿಕ ಫೆಡರೇಷನ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಚಾಲನೆ ನೀಡಲಿದ್ದಾರೆ.ಇದೇ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಡಾ.ಜಯರಾಮರಾವ್ ಅಧ್ಯಕ್ಷತೆ ವಹಿಸುವರು.ಶಾಸಕ ಜಿ.ಬಿ.ಜೋತಿಗಣೇಶ್,ಮಾಜಿ ಸಚಿವರಾದ ಎಸ್.ಅರ್.ಶ್ರೀನಿವಾಸ್,ಸೊಗಡು ಶಿವಣ್ಣ,ಮಾಜಿ ಶಾಸಕರಾದ ಬೊಮ್ಮನಹಳ್ಳಿ ಬಾಬು, ಗೋವಿಂದರಾಜು,ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್,ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಕಾರ್ಪೋರೇಟರ್ ಧನಿಯಕುಮಾರ್ ಅವರುಗಳು ಭಾಗವಹಿಸುವರು.
ಕ್ರೀಡಾಪಟು ಹಾಗೂ ಕ್ರೀಡಾ ಆಯೋಜಕರಾದ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ,ಕಳೆದ ಎರಡು ವರ್ಷಗಳ ಕಾಲ ಕೋವಿಡ್‌ನಿಂದ ಇಲ್ಲಿ ಯಾವುದೇ ದೊಡ್ಡ ಮಟ್ಟದ ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ದೊಡ್ಡ ಕ್ರೀಡಾಕೂಟವನ್ನು ಫೆ.09 ರಿಂದ 12ರವರೆಗೆ ಆಚರಿಸಲಾಗುತ್ತಿದೆ.ಅಲ್ಲದೆ ಹೈಸ್ಕೂಲ್ ಮೈದಾನವನ್ನು ಬಹಳ ಸುಂದರವಾಗಿ ನಿರ್ಮಿಸಿರುವ ಶಾಸಕ ಜಿ.ಬಿ.ಜೋತಿಗಣೇಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ ಕ್ರೀಡಾ ಪತ್ರಿಭೆಗಳು ಬೆಳೆಯಲು ಇದು ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್, ನೇತಾಜಿ ಶ್ರೀಧರ್,ಮಾರುತಿ,ಪ್ರಸನ್ನ(ಪಚ್ಚಿ), ರಂಜನ್,ಚೇತನ್, ಭರತ್ ಮತ್ತಿತರರು ಉಪಸ್ಥಿತರಿದ್ದರು.