ಚಿಕ್ಕನಾಯಕನಹಳ್ಳಿಜಿಲ್ಲೆತುಮಕೂರುಸಾಹಿತ್ಯ
ರೈತನ ಬಿಕ್ಕಟ್ಟುಗಳಿಗೆ ಸಹಕಾರ ಕೃಷಿಯಲ್ಲಿದೆ ಪರಿಹಾರ : ಕೃಷಿ ತಜ್ಞ ಶಿವನಂಜಯ್ಯ ಬಾಳೆಕಾಯಿ
- ಚಿಕ್ಕನಾಯಕನಹಳ್ಳಿ : ಸಹಕಾರಿ ಕೃಷಿ ಮೂಲಕ ರೈತನಿಗೆ ಎದುರಾಗಿರುವ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಹಜ ಕೃಷಿ ತಜ್ಞ ಶಿವನಂಜಯ್ಯ ಬಾಳೆಕಾಯಿ ಹೇಳಿದರು.
ಚಿಕ್ಕನಾಯಕನಹಳ್ಳಿಯಲ್ಲಿ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕೃಷಿ- ಮಾರುಕಟ್ಟೆ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯಾ ಪಂಚಾಯಿತಿಯನ್ನು ಕೇಂದ್ರವಾಗಿಟ್ಟುಕೊಂಡು ಅದಕ್ಕೆ ಸಂಬಂಧಪಟ್ಟ ಹಳ್ಳಿಗಳನ್ನು ಒಳಗೊಂಡಂತೆ ಅಗತ್ಯ ಯಂತ್ರೋಪಕರಣಗಳು ಸಿಗುವಂತೆ ಮಾಡಿಕೊಳ್ಳಬೇಕು. ಬಹುತೇಕರು ಸಣ್ಣ ಹಿಡುವಳಿದಾರರೇ ಆಗಿರುವುದರಿಂದ ಬಹುಬೆಳೆಗಳಿಗೆ ಒತ್ತುಕೊಟ್ಟು ಕೃಷಿ ಮಾಡಬೇಕು. ತಾವು ಬೆಳೆದ ಉತ್ಪನ್ನಗಳಿಗೆ ಮೌಲ್ಯ ವರ್ಧನೆ ಮಾಡಿಕೊಂಡರೆ ಉತ್ತಮ ಬೆಲೆ ಸಿಗುತ್ತದೆ. ಮಾರುಕಟ್ಟೆ ವಿಷಯದಲ್ಲಿ ಕೆಎಂಎಫ್ನಂತಹ ಸಂಸ್ಥೆಯನ್ನು ಬಲವಾಗಿ ಕಟ್ಟಿಕೊಳ್ಳಬೇಕಾಗಿದೆ ಎಂದರು.
ಪಾರಂಪರಿಕವಾಗಿ ರೂಢಿಸಿಕೊಂಡಿರುವ ಸಾವಯವ ಕೃಷಿ ಜೀವಪರವಾದದ್ದು. ಇಡೀ ಜೀವ ಸಂಕುಲವನ್ನು ತನ್ನ ಒಡಲಲ್ಲಿಟ್ಟುಕೊಂಡು ಮಾಡುವಂತಹದು. ಆದರೆ, ಇವತ್ತಿನ ದಿನಗಳಲ್ಲಿ ಸಾವಯವ ಕೃಷಿ ವಿಚಾರವೇ ಬೇರೆಯಾಗಿದೆ. ಹಸುವಿನ ಗಂಜಲವೇ ಶ್ರೇಷ್ಠ ಎನ್ನುವ ಮನೋಭಾವ ತುಂಬಲಾಗುತ್ತಿದೆ ಎಂದರು.
ರೈತ-ಮಾರುಕಟ್ಟೆ: ಸ್ಥಿತಿ ಗತಿ ಕುರಿತು ಮಾತನಾಡಿದ ಸಹಜ ಕೃಷಿಕ ತರಬೇನಹಳ್ಳಿ ಷಡಕ್ಷರಿ, ಎಪಿಎಂಸಿ ರಾಜಕಾರಣಿಗಳ ಆಡಂಬೋಲವಾಗಿದೆ. ರೈತರ ಪರ ಕೆಲಸ ಮಾಡುವವರು, ಮಾತನಾಡುವವರು ಬೇಕಾಗಿಲ್ಲ. ರಾಜಕಾರಣಿಗಳು ತಮ್ಮ ಮಾತು ಕೇಳುವವರನ್ನು ನೇಮಿಸಿಕೊಳ್ಳುತ್ತಾರೆ ಎಂದರು.
ಸರ್ಕಾರ ಮುತುವರ್ಜಿ ವಹಿಸಿ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು. ನಪೆಡ್ಗಳಲ್ಲೂ ರಾಜಕೀಯ ನಡೆದಿದೆ. ತೆಂಗಿನ ತೋಟ ಇರುವವರಿಂದ ರಾಗಿ ಖರೀದಿಸುತ್ತಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆಂದು ಸರ್ಕಾರ ಹೇಳಿತ್ತು. ಅದು ಆಗಿದೆಯಾ ಎಂದು ಪ್ರಶ್ನಿಸಿದರು.
ಬ್ಯಾಂಕ್ಗಳಲ್ಲಿ ರೈತರಿಗೆ ಸಾಲ ಸೌಲಭ್ಯಗಳನ್ನು ಕೊಡುವ ವ್ಯವಸ್ಥೆಯಾಗಬೇಕು. ಮಾರುಕಟ್ಟೆಗಳಲ್ಲಿ ಬೆಲೆ ನಿಯಂತ್ರಿಸುವವರಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್ ಮಾತನಾಡಿ, ಜಾನುವಾರುಗಳಿಗೆ ಸಮತೋಲಿತ ಆಹಾರ ಸಿಗದೆ ಕೃಷಿಕ ನಷ್ಟ ಅನುಭವಿಸುತ್ತಿದ್ದಾನೆ. ಈ ಸಮಸ್ಯೆ ಎಲ್ಲೆಡೆ ಇದ್ದು ನಮ್ಮ ದೇಶದ ಕುರಿಯ ಸರಾಸರಿ ತೂಕ ೧೩ ಕೆ.ಜಿ. ಇದ್ದರೆ, ಡೆನ್ಮಾರ್ಕ್ ದೇಶದಲ್ಲಿ ೫೦ ಕೆ.ಜಿ. ಇರುತ್ತದೆ. ಹೀಗಾಗಿ ಜಾನುವಾರು ಸಾಕಣೆದಾರರಿಗೆ ಲಾಭವಾಗುತ್ತಿಲ್ಲ ಎಂದರು.
ಪಾರಂಪರಿಕ – ಆಧುನಿಕ ಕೃಷಿ ಸಮೀಕರಣ ಕುರಿತು ಪರಿಸರ ಚಿಂತಕ ರಾಮಕೃಷ್ಣಪ್ಪ, ಗೋಷ್ಟಿ ವಿಷಯ ಕುರಿತು ಸಹಜ ಕೃಷಿಕ ಮಲ್ಲಿಕಾರ್ಜುನ ಹೊಸಪಾಳ್ಯ ದಿಕ್ಸೂಚಿ ಭಾಷಣ ಮಾಡಿದರು.