2023 ವಿಧಾನಸಭಾ ಚುನಾವಣಾ ಕಣದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ : ಡಾ. ರಫೀಕ್ ಅಹ್ಮದ್
ತುಮಕೂರು : ಮುಂಬರುವ 2023 ವಿಧಾನಸಭಾ ಚುನಾವಣಾ ಕಣದಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಡಾ. ರಫೀಕ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ತಿಳಿಸಿದ್ದಾರೆ.
ಕಳೆದ 45 ವರ್ಷಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಹಾಗಾಗಿ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗದಂತೆ ಮನವಿ ಮಾಡಿದ್ದಾರೆ. ಚುನಾವಣೆ ಎದುರಿಸುವಷ್ಟು ಆರ್ಥಿಕ ಶಕ್ತಿ ನನ್ನಲ್ಲಿದೆ, ಹಣಕಾಸಿನ ಕೊರತೆ ಇದೆ ಎಂದು ಯಾರಿಗೂ ಹೇಳಿಲ್ಲ. ಅದೆಲ್ಲಾ ಊಹಾಪೋಹ ಅಷ್ಟೆ ಹಾಗಾಗಿ ಕಾರ್ಯಕರ್ತರು ಎದೆಗುಂದುವ ಅಗತ್ಯವಿಲ್ಲ ಎಂದರು.
ಓರ್ವ ಮಾಜಿ ಶಾಸಕನಾಗಿ ಪಕ್ಷ ನೀಡಿದ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಭಾರತ್ ಜೋಡೋ ಯಾತ್ರೆ, ಪ್ರಜಾಧ್ವನಿ, ಮೇಕೆದಾಟು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಕೊರೋನಾ ಲಾಕ್‌ಡೌನ್ ವೇಳೆಯೂ ಸಹ ಶಕ್ತಿಮೀರಿ ಜನಸೇವೆ ಮಾಡಿದ್ದೇನೆ. ಸುಮಾರು 45 ಸಾವಿರ ಫುಡ್‌ಕಿಟ್ ಜೊತೆಗೆ ಹತ್ತಾರು ಸಾವಿರ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದೇನೆ. ಪಕ್ಷದ ಹೈಕಮಾಂಡ್ ನಲ್ಲಿ ನನ್ನ ಬಗ್ಗೆ ಒಳ್ಳೆಯ ಭಾವನೆ ಇದೆ. ನನಗೆ ಟಿಕೆಟ್ ದೊರೆಯುವ ಸಂಪೂರ್ಣ ವಿಶ್ವಾಸ ನನ್ನಲ್ಲಿರುವಾಗ ನಾನೇಕೆ ಕಣದಿಂದ ದೂರ ಸರಿಯಲಿ? ಇದೆಲ್ಲಾ ಗಾಳಿಸುದ್ದಿಯಷ್ಟೆ. ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದೇನೆ.
ಕಾಂಗ್ರೆಸ್ ಪಕ್ಷ 140 ವರ್ಷಗಳ ಇತಿಹಾಸವಿರುವ ಪಕ್ಷೆ ಒಬ್ಬ ವ್ಯಕ್ತಿಗೆ ಟಿಕೆಟ್ ನೀಡುವಾಗ ಆತನ ಹಿನ್ನೆಲೆ ಮುನ್ನಲೆ ಎಲ್ಲವನ್ನು ಗಮನಿಸುತ್ತದೆ. ಏಕಾಏಕಿ ಅರ್ಜಿ ಹಾಕಿದಾಕ್ಷಣ ಟಿಕೆಟ್ ನೀಡುವುದಿಲ್ಲ. ಈಗಾಗಲೇ ಎಐಸಿಸಿ ಮತ್ತು ಕೆಪಿಸಿಸಿ ವತಿಯಿಂದ ಸರ್ವೆ ನಡೆದಿದೆ. ಈ ವರದಿಯೂ ಹೈಕಮಾಂಡ್ ಕೈ ಸೇರಿದೆ. ಪಕ್ಷವು ನನಗೆ ಟಿಕೆಟ್ ನೀಡಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಡಾ.ರಫೀಕ್ ಅಹ್ಮದ್ ತಿಳಿಸಿದರು.
ಕಳೆದ ಒಂದು ವಾರದಿಂದ ನಾನು ಕಾಲೇಜಿನ ಸಂಬಂಧವಾಗಿ ಪ್ರವಾಸದಲ್ಲಿದ್ದೇನೆ ಇದನ್ನೇ ನೆಪ ಮಾಡಿ ನಮ್ಮ ಕಾರ್ಯಕರ್ತರು ಮತ್ತು ಮತದಾರರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಮಾಜಿ ಶಾಸಕರು ಮನವಿ ಮಾಡಿದ್ದಾರೆ.