ಟಾಟಾ ಮೋಟಾರ್ಸ್ ವತಿಯಿಂದ ಕ್ಯಾನ್ಸರ್ ಜಾಗೃತಿ ನಡಿಗೆ
ತುಮಕೂರು : ನಗರದ ಗುಬ್ಬಿ ಗೇಟ್’ನ ಶ್ರೀ ಆಟೋ ಟಾಟಾ ಮೋಟಾರ್ಸ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ನಡಿಗೆ ಜಾಥಾ ‘ವಾಕಥಾನ್’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರತಿವರ್ಷ ಟಾಟಾ ಮೋಟಾರ್ಸ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಜಾಗೃತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಈ ಬಾರಿ ಜನಸಾಮಾನ್ಯರಿಗೆ ಕ್ಯಾನ್ಸರ್ ಬಗ್ಗೆ ಅರಿವನ್ನು ಮೂಡಿಸುವ ದೃಷ್ಟಿಯಿಂದ ವಾಕಥಾನ್ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹೆಚ್.ಡಿ. ಶ್ರೀನಿವಾಸ್ ಹಾಗೂ ಜನರಲ್ ಮ್ಯಾನೇಜರ್ ಕೆ.ವಿ.ಪದ್ಮನಾಭ್ ಚಾಲನೆ ನೀಡಿದರು. ನಗರದ ಗುಬ್ಬಿ ಗೇಟ್ ಬಳಿ ಪ್ರಾರಂಭಗೊಂಡ ಜಾಗೃತಿ ನಡಿಗೆ ಜಾಥಾದಲ್ಲಿ ಸುಮಾರು 450ಕ್ಕೂ ಅಧಿಕ ಮಂದಿ ಸಾರ್ವಜನಿಕರು ಭಾಗವಹಿಸಿ ಕಾರ್ಟೆಕ್ಸ್ ಸರ್ಕಲ್ ಮೂಲಕ ಟೌನ್ ಹಾಲ್ ವೃತ್ತವನ್ನು ತಲುಪಿ ಸಾರ್ವಜನಿಕರಿಗೆ ಕ್ಯಾನ್ಸರ್ ರೋಗದ ಲಕ್ಷಣಗಳು ಹಾಗೂ ಅದಕ್ಕೆ ತೆಗೆದುಕೊಳ್ಳಬಹುದಾದ ಚಿಕಿತ್ಸೆಯ ಬಗ್ಗೆ ಅರಿವನ್ನು ಮೂಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ಜನರಲ್ ಮ್ಯಾನೇಜರ್ ಪದ್ಮನಾಭ ರವರು ಟಾಟಾ ಸಮೂಹ ಸಂಸ್ಥೆಯ ಸ್ಥಾಪಕರಾದ ಸರ್ ದೊರಾಬ್ಜಿ ಟಾಟಾ ರವರ ಮಡದಿ ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ನಿಧಾನರಾಗಿದ್ದು, ಇದನ್ನು ಮನಗಂಡ ಸರ್ ದೊರಾಬ್ಜಿ ರವರು ಮುಂಬೈ ನಗರದಲ್ಲಿ ವಿಶ್ವ ಗುಣಮಟ್ಟದ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಆ ಆಸ್ಪತ್ರೆಯಲ್ಲಿ ವಿಶೇಷವಾದ ಚಿಕಿತ್ಸೆಯನ್ನು ಇಂದಿಗೂ ಸಹ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುತ್ತಿದ್ದು ಪ್ರಪಂಚದಲ್ಲಿಯೇ ಉತ್ತಮವಾದ ಕ್ಯಾನ್ಸರ್ ಆಸ್ಪತ್ರೆ ಎಂದು ಹೆಸರುಗಳಿಸಿದೆ. ಇದೇ ರೀತಿ ಟಾಟಾ ಸಮೂಹ ಸಂಸ್ಥೆ ಪ್ರತಿ ವರ್ಷ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಬಾರಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಮಾಜಕ್ಕೆ ಕ್ಯಾನ್ಸರ್ ರೋಗದ ಬಗ್ಗೆ ಹಾಗೂ ಜಾಗೃತಿಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ವಾಕಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಗರದ ಯುವಕರ ಆದಿಯಾಗಿ ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಸಾಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಕ್ಯಾನ್ಸರ್ ಎಂಬುದು ಮಾರಣಾಂತಿಕ ಕಾಯಿಲೆಯಾಗಿದ್ದರೂ ಸಹ ಅದನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದರಿಂದ ಕ್ಯಾನ್ಸರ್ ರೋಗವನ್ನು ಕೊನೆಗಾಣಿಸಬಹುದು ಈ ನಿಟ್ಟಿನಲ್ಲಿ ಸಾರ್ವಜನಿಕರು ವರ್ಷಕ್ಕೊಮ್ಮೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪರಿಸರ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು ಪರಿಸರವನ್ನು ರಕ್ಷಿಸುವುದರ ಮೂಲಕ ಉತ್ತಮ ಆರೋಗ್ಯ ಶೈಲಿಯನ್ನು ಬೆಳೆಸಿಕೊಳ್ಳಬೇಕು ಭಾರತ ಸರ್ಕಾರದ ನಿರ್ದೇಶನದಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ಮೂಲಕ ಇಂಧನದ ಕೊರತೆಯನ್ನು ತಪ್ಪಿಸುವುದರ ಜೊತೆಗೆ ಸ್ವಾಭಾವಿಕ ಸಂಪನ್ಮೂಲಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.