ವಕೀಲರ ಕಲಾ ಸಂಘದಿಂದ ಕುರುಕ್ಷೇತ್ರ ನಾಟಕದ ಪ್ರದರ್ಶನ : 2 ಲಕ್ಷ ರೂಗಳ ಧೇಣಿಗೆ ನೀಡಿದ ಶಾಸಕ ಡಿ.ಸಿ.ಗೌರಿಶಂಕರ್
ತುಮಕೂರು : ನಗರದ ನ್ಯಾಯಾಲಯದ ಆವರಣದಲ್ಲಿ ಶ್ರೀಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗ(ರಿ) ತುಮಕೂರು ಇವರು ತುಮಕೂರು ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಯೋಗದಲ್ಲಿ ಹಿರಿಯ ವಕೀಲರಾದ ದಿ.ಹೆಚ್.ಎಸ್.ಶೇಷಾದ್ರಿ ಮತ್ತು ದಿ.ಕೆ.ಎನ್.ರಾಜಶೇಖರ್ ಅವರ ಸ್ಮರಣಾರ್ಥ ಕುರುಕ್ಷೇತ್ರ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ,ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ.ಪೌರಾಣಿಕ ನಾಟಕಗಳು ಒಂದು ರೀತಿಯಲ್ಲಿ ನಮ್ಮ ಪೂರ್ವಜರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಲಾ ಪ್ರಕಾರಗಳಾಗಿವೆ.ವಕೀಲರ ಸಂಘ ಈ ನಿಟ್ಟಿನಲ್ಲಿ ನಾಟಕ ಪ್ರದರ್ಶಿಸುತ್ತಿರುವುದು ಸಂತೋಷದ ವಿಚಾರವಾಗಿದೆ.ತುಮಕೂರು ಜಿಲ್ಲೆ ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಕಲಾವಿದರನ್ನು ಹೊಂದಿರುವ ಜಿಲ್ಲೆಯಾಗಿದೆ.
ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನನ್ನ ವಯುಕ್ತಿಕವಾಗಿ ಸಂಘಕ್ಕೆ 2 ಲಕ್ಷ ರೂಗಳ ಧೇಣಿಗೆ ನೀಡಿದ್ದೇನೆ. ನಾನು ಕೂಡ ಪೌರಾಣಿಕ ನಾಟಕದ ಪಾತ್ರ ನಿರ್ವಹಿಸಬೇಕೆಂಬ ಆಶಯ ಹೊಂದಿದ್ದೇನೆ.ಮುಂದಿನ ದಿನಗಳಲ್ಲಿ ನಿಮ್ಮ ಜೊತೆಯೇ ನಾಟಕಕ್ಕೆ ಬಣ್ಣ ಹಚ್ಚುವಂತಾಗಲಿ ಎಂದು ಶುಭ ಹಾರೈಸಿದರು.
ನಾಟಕೋತ್ಸವಕ್ಕೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಕೆ.ಬಿ.ಗೀತಾ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಂಕಷ್ಟಹರ ಗಣಪತಿ ವಕೀಲರ ಕಲಾ ಬಳಗದ ಅಧ್ಯಕ್ಷ ಎಂ.ಸಿ.ಚಂದ್ರಯ್ಯ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಉಪಾಧ್ಯಕ್ಷ ಬಿ.ಎಸ್.ಯೋಗೀಶ್, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಸದಸ್ಯರಾದ ಎಸ್.ಮಧುಸೂಧನ್ ಭಾಗವಹಿಸಿದ್ದರು.