ನಿಮ್ಮಪ್ಪನನ್ನು ಗೆಲ್ಲಿಸಲು ಆಗದವರು ಈಗ ಬಂದಿದ್ದೀರಾ..? ಹೆಚ್.ಡಿ. ಕುಮಾರಸ್ವಾಮಿ ವಿರುದ್ದ ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ
ಚಿಕ್ಕನಾಯಕನಹಳ್ಳಿ : ನಿಮಗೆ ನಾಚಿಕೆ ಮಾನ ಮಾರ್ಯದೆ ಇದೆಯಾ..? ಲೋಕಸಭಾ ಚುನಾವಣೆಯಲ್ಲಿ ನಿಮ್ಮಪ್ಪನನ್ನು ಗೆಲ್ಲಿಸಲಾಗದಿದ್ದವರು ಈಗ ಬಂದಿದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಸಚಿವ ಜೆ.ಸಿ.ಮಾಧುಸ್ವಾಮಿ ಕೆರಳಿ ಕೆಂಡವಾದರು.
ಪಂಚರತ್ನ ರಥಯಾತ್ರೆಯಲ್ಲಿ ತಮ್ಮ ವಿರುದ್ದ ಟೀಕೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮತಿಘಟ್ಟದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಸಮಾರಂಭದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ತಿರುಗೇಟು ನೀಡಿದರು. ನಾಚಿಕೆ ಮಾನಮಾರ್ಯದೆ ಕುಮಾರಸ್ವಾಮಿಗೆ ಇದ್ದಿದ್ದರೆ ನಮ್ಮ ಕ್ಷೇತ್ರಕ್ಕೆ ಬರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ಮನುಷ್ಯ ಅಧಿಕಾರ ಸಿಕ್ಕಾಗ ಸ್ವಾಭಾವಿಕವಾಗಿ ಬೆಳೆಯುತ್ತಾನೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು ಎಲ್ಲರೂ ಸೇರಿ ರಾಜ್ಯವನ್ನು ದೋಚಲು ಶುರು ಮಾಡಿರುವ ಇವರು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಬಂದು ಭಾಷಣ ಮಾಡುತ್ತಾರೆ. ದೇವೇಗೌಡರು ಪ್ರಥಮವಾಗಿ ಸಾಲದ ರೂಪದಲ್ಲಿ ಹಣ ಪಡೆದು ಹೊಳೆನರಸೀಪುರದಲ್ಲಿ ಗುತ್ತಿಗೆ ಆರಂಭಿಸಿದ್ದವರು ಈಗ ಹೇಗಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಾವು ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರಿನಲ್ಲಿ ಮೂರು ಮನೆ ಮಾಡಿಕೊಂಡು ಸರಿಯಾಗಿ ಆಡಳಿತ ನೀಡದ ಪರಿಣಾಮ ನೀವು ಸಂಕಷ್ಟ ಅನುಭವಿಸಿದ್ದೀರ ಎಂಬುದನ್ನು ಅರಿತುಕೊಳ್ಳಬೇಕು. ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚಿಸಿವುದನ್ನು ಬಿಟ್ಟು ಅನುಕಂಪ, ಜಾತಿ, ಹಣ ಬಲದ ಮೂಲಕ ಚುನಾವಣೆ ನಡೆಸಲು ಹೊರಟಿರುವ ಜೆಡಿಎಸ್‌ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಸಿದ್ದರಾಮಯ್ಯನವರಿಗೆ ರಣವೀಳ್ಯ;-
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ನನ್ನ ವಿರುದ್ದ ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಆಹ್ವಾನಿಸಿದರು. ವಿಧಾನಸಭೆಯಲ್ಲಿ ಪರಸ್ಪರ ವಾಗ್ಜರಿ ಹರಿಸುವ ಸಿದ್ದರಾಮಯ್ಯನವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಯಾಗಲು ರಣವೀಳ್ಯ ನೀಡಿದರು.
ಸಮಾರಂಭದಲ್ಲಿ ತಾ. ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ತಾಲ್ಲೂಕು ಉಸ್ತುವಾರಿ ನಿತಿನ್, ಮುಖಂಡರಾದ ನಿತ್ಯಾನಂದ್, ನಿರಂಜನಮೂರ್ತಿ, ಹಳೇಮನೆ ಶಿವನಂಜಪ್ಪ, ರಂಗಸ್ವಾಮಯ್ಯ ಅರಳಿಕೆರೆ ಉಮೇಶ್ ಹಾಗು ಇತರರಿದ್ದರು.