ಜಿಲ್ಲೆತುಮಕೂರುದೇಶರಾಜ್ಯ

ಶ್ರೀ ಶಿವಕುಮಾರ ಸ್ವಾಮಿಗಳು ಮಠದ ಮಕ್ಕಳಲ್ಲಿ, ಭಕ್ತರ ಕಣಕಣದಲ್ಲಿ ಜೀವಿಸುವ ಮೂಲಕ ಇಂದಿಗೂ ಬದುಕಿದ್ದಾರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮ ದಿನ ಇನ್ನು ಮುಂದೆ ‘ದಾಸೋಹ ದಿನ’

ತುಮಕೂರು : ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ಸಾಧಕ. ಅಂತೆಯೇ ಶ್ರೀ ಸಿದ್ದಗಂಗಾಮಠದ ಪರಮಪೂಜ್ಯ ಶಿವಕುಮಾರ ಸ್ವಾಮಿಗಳು ಮಠದ ಮಕ್ಕಳಲ್ಲಿ, ಭಕ್ತರ ಕಣಕಣದಲ್ಲಿ ಜೀವಿಸುವ ಮೂಲಕ ನಮ್ಮೆಲ್ಲರ ಮಧ್ಯೆ ಇಂದಿಗೂ ಬದುಕಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರಿಂದು ಸಿದ್ಧಗಂಗಾ ಮಠದಲ್ಲಿ ಏರ್ಪಡಿಸಿದ್ದ ಡಾ: ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 4ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಡಾ: ಶಿವಕುಮಾರಸ್ವಾಮಿಗಳ ಉದಾತ್ತ ಚಿಂತನೆಯ ಫಲವಾಗಿ ಇಂದು ಶ್ರೀಮಠದಲ್ಲಿ ದಾಸೋಹ ಕಾಯಕ ಮುಂದುವರೆದಿದೆ. ಮಠದ ಮಕ್ಕಳು ಮತ್ತು ಭಕ್ತರೇ ಮಠದ ಆಸ್ತಿ ಎಂದು ಶಿವಕುಮಾರಸ್ವಾಮಿಗಳು ನಂಬಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮನುಷ್ಯನಿಗೆ ಮುಗ್ದತೆಯನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಅಂತರಂಗ ಶುದ್ದಿಯಿದ್ದಾಗ ಮಾತ್ರ ಆ ಮುಗ್ದತೆ ಬಹಿರಂಗವಾಗಿ ಗೋಚರಿಸುತ್ತದೆ. ಅಂತೆಯೇ ಆತ್ಮಸಾಕ್ಷಿಗನುಗುಣವಾಗಿ ನಡೆದುಕೊಳ್ಳುವುದು ಕಷ್ಟದ ಕೆಲಸ. ಲೋಕದ ಲಾಭ ಆಮಿಷಗಳಿಂದ ಯಾರು ದೂರ ಉಳಿಯುತ್ತಾರೋ ಅವರು ಮುಗ್ದತೆ ಮತ್ತು ಆತ್ಮಸಾಕ್ಷಿ ಕಾಯ್ದಿಟ್ಟುಕೊಳ್ಳುತ್ತಾರೆ. ನಮ್ಮ ಪರಮಪೂಜ್ಯ ಸ್ವಾಮಿಗಳು ಮುಗ್ದತೆ ಮತ್ತು ಆತ್ಮಸಾಕ್ಷಿಗನುಗುಣವಾಗಿ ತಮ್ಮ ಜೀವನದುದ್ದಕ್ಕೂ ನಡೆದುಕೊಂಡಿದ್ದಾರೆ ಎಂದರು.
ನಡೆದಾಡುವ ದೇವರು ಶಿವಕುಮಾರಸ್ವಾಮಿಗಳು ತಾವು ಪಡೆದಂತಹ ಜ್ಞಾನವನ್ನು ಲೋಕಕಲ್ಯಾಣಕ್ಕಾಗಿ ಅರ್ಪಿಸಿದರು. ಅವರು ಕಾಯಕಯೋಗಿಗಳಾಗಿದ್ದಾರೆ, ತ್ರಿವಿಧ ದಾಸೋಹಿಗಳಾಗಿದ್ದಾರೆ, ಸುಮಾರು ಹತ್ತು ಸಾವಿರ ಮಕ್ಕಳಿಗೆ ಮಠದಲ್ಲಿ ಜ್ಞಾನ, ಅನ್ನ, ಆಶ್ರಯ, ಆರೋಗ್ಯ ಕಲ್ಪಿಸಿದ್ದಾರೆ ಜೊತೆಗೆ ಸಂಸ್ಕಾರವನ್ನು ನೀಡಿದ್ದಾರೆ ಎಂದರು.
ಶಿವಕುಮಾರ ಸ್ವಾಮೀಜಿಗಳ ಜನ್ಮ ದಿನವನ್ನು ದಾಸೋಹ ದಿನವೆಂದು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನಿಸಿದ್ದು, ಈ ದಿನ ರಾಜ್ಯದ ಎಲ್ಲೆಡೆ, ಮಠ ಮಂದಿರಗಳಲ್ಲಿ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಿದ್ದಗಂಗಾ ಮಠದ ದಾಸೋಹ ಕಾಯಕಕ್ಕೆ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಬಸವಣ್ಣನವರ ವಿಚಾರಧಾರೆಯಂತೆ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ದ ಮಠಮಾನ್ಯಗಳು ಸೇರಿದಂತೆ ನಾವೆಲ್ಲರೂ ಇಂದಿನ ದಿನಗಳಲ್ಲಿ ಹೋರಾಡಬೇಕಿದೆ. ಉತ್ಕೃಷ್ಟವಾದ ಪ್ರೀತಿಯನ್ನು ನಾವು ಜಗತ್ತಿಗೆ ಹಂಚುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಸಮಾಜದ ಎಲ್ಲಾ ವರ್ಗದ ಜನರಿಗೆ ಸಮಾನತೆಯನ್ನು ಕೊಟ್ಟಿರುವಂತಹ ಮಠ ಎಂದರೆ ಅದು ಶ್ರೀ ಸಿದ್ಧಗಂಗಾ ಮಠ ಮಾತ್ರ. ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ಕಾಯಕ ನಸುಕಿನ 4 ಗಂಟೆಗೆ ಪ್ರಾರಂಭಿಸಿ ತಡರಾತ್ರಿಯವರೆಗೂ ಮುಂದುವರೆಯುತ್ತಿತ್ತು. ಅಂತಹ ಮಹಾನ್ ಗುರುಗಳ ಆಶೀರ್ವಾದದಿಂದ ತಾವು ಈ ಮಟ್ಟಕ್ಕೆ ಬೆಳೆದಿರುವುದಾಗಿ ತಿಳಿಸಿದರು.

ಸಚಿವ ಮಾಧುಸ್ವಾಮಿ ಅವರು ಮಾತನಾಡಿ, ಪರಮ ಪೂಜ್ಯ ಶಿವಕುಮಾರ ಸ್ವಾಮೀಜಿ ಅವರು ಸಮಾಜದಲ್ಲಿ ಬಡತನ ನಿರ್ಮೂಲನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಅದಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಸಮಾಜದ ಶೋಷಿತ ವರ್ಗದವರ ಕುಟುಂಬದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪರಮಪೂಜ್ಯರ ಶ್ರಮ ಅತ್ಯಂತ ಸ್ಮರಣೀಯ ಎಂದು ಸ್ಮರಿಸಿದರು.

ಕೇಂದ್ರ ಸಚಿವ ಭಗವಂತ ಖೂಬ ಅವರು ಮಾತನಾಡಿ, ನಾನೊಬ್ಬ ಕೇಂದ್ರ ಸಚಿವ ಎಂದು ಹೇಳಿಕೊಳ್ಳುವುದಕ್ಕಿಂತ ಮಠದ ಹಳೆಯ ವಿದ್ಯಾರ್ಥಿ ಮತ್ತು ಮಠದ ಭಕ್ತ ಎಂದು ಹೇಳಿಕೊಳ್ಳಲು ಸಂತಸ ಪಡುತ್ತೇನೆ. ಮಠದಲ್ಲಿ ಕೇಳಿ ತಿಳಿದುಕೊಳ್ಳುವ ವಿದ್ಯೆಗಿಂತ ನೋಡಿ ಕಲಿತ ಅದೆಷ್ಟೋ ಲಕ್ಷಾಂತರ ಮಕ್ಕಳು ಇಂದು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ ಎಂದು ತಿಳಿಸಿದರು.
ಶ್ರೀ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಅವರು ಮಾತನಾಡುತ್ತಾ, ಡಾ: ಶಿವಕುಮಾರ ಸ್ವಾಮೀಜಿಯವರ ಬದುಕು ಸೇವೆಯ ಪ್ರತೀಕವಾಗಿದೆ. ತಮ್ಮನ್ನು ತಾವು ಸೇವೆಗಾಗಿ ಸಮರ್ಪಣೆ ಮಾಡಿಕೊಂಡಿದ್ದರು. ಪರಮಪೂಜ್ಯರು ತಮ್ಮ ಜೀವಿತಾವಧಿಯನ್ನು ಸಮಾಜ ಮತ್ತು ಮಕ್ಕಳಿಗಾಗಿ ತ್ಯಾಗ ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಬೇಲಿ ಮಠದ ಅಧ್ಯಕ್ಷ ಶಿವಾನುಭವಚರಮೂರ್ತಿ ಪರಮಪೂಜ್ಯ ಶ್ರೀಶ್ರೀ ಶಿವರುದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು. ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದರಾದ ಜಿ.ಎಸ್.ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಮಸಾಲೆ ಜಯರಾಮ್, ರಾಜೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ್ ಎಂ.ಗೌಡ, ಮೇಯರ್ ಪ್ರಭಾವತಿ ಎಂ.ಸುಧೀಶ್ವರ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ನಟರಾಜ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker