ಶಿರಾ : ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದಿದ್ದರೆ, ನಾವು ಬರೆದಿದ್ದಕ್ಕೆ, ನಾವು ಬದುಕಿದ್ದಕ್ಕೆ ಅರ್ಥ ಇರುವುದಿಲ್ಲ. ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆ ಉಳ್ಳದ್ದೆ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.
ಅವರು ಶಿರಾ ರಂಗನಾಥ ನಗರದಲ್ಲಿ ಮಾತೃ ಸಮನ್ವಯ ಸಮಿತಿ ಹಾಗೂ ಜಾಗೃತಿ ಟ್ರಸ್ಟ್ ಇವರ ಸಂಯುಕ್ತಶ್ರಯದಲ್ಲಿ ಮೊದಲನೇ ಕನ್ನಡ ಸಂಭ್ರಮಾಚರಣೆ ಹಾಗೂ ಬಿಎಂಟಿಸಿ ಕಂಡಕ್ಟರ್ ಆರ್.ಪ್ರಭಾಕರ್ ಅವರು ಬರೆದಿರುವ ನೀಲಕ್ರಾಂತಿ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತವಾಗಿ ಕೆಲವರು ಧರ್ಮವನ್ನು ಬಳಸಿಕೊಂಡು ಧರ್ಮ ಧರ್ಮಗಳ ನಡುವೆ ಧ್ವೇಷ ಹುಟ್ಟುಹಾಕುತ್ತಿದ್ದಾರೆ. ಧರ್ಮ ಧರ್ಮಗಳಲ್ಲಿ ಪ್ರೀತಿ ಬೆಳೆಸಬೇಕು. ಕೆಟ್ಟವರು ಎಲ್ಲಾ ಧರ್ಮದಲ್ಲೂ ಇರುತ್ತಾರೆ. ಕೆಟ್ಟವರು ಸಣ್ಣ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ ಅವರಿಗೆ ಪ್ರಚಾರ ಹೆಚ್ಚು. ಒಳ್ಳೆಯವರು ಹೆಚ್ಚು ಸಂಖ್ಯೆಯಲ್ಲಿರುತ್ತಾರೆ. ಅವರಿಗೆ ಪ್ರಚಾರ ಸಿಗುವುದಿಲ್ಲ ಎಂದು ಹೇಳಿದರು.
ಹೆಚ್ಚಾದ ದಲಿತರ ಮೇಲಿನ ದೌರ್ಜನ್ಯ: ದೇಶದಲ್ಲಿ ಶೇ. 1.2 ರಷ್ಟು ಇದ್ದ ದಲಿತರ ಮೇಲೆ ದೌರ್ಜನ್ಯ 2022ರ ವೇಳೆಗೆ ಶೇ. 6.4 ರಷ್ಟಾಗಿದೆ. ಪ.ಜಾತಿ ಮಹಿಳೆಯರ ಮೇಲಿನ ಅತ್ಯಾಚಾರ ಶೇ. 7.64 ರಷ್ಟಿದೆ. ಪ.ಪಂಗಡದ ಮಹಿಳೆಯರ ಮೇಲಿನ ಅತ್ಯಾಚಾರ ಶೇ. 15 ರಷ್ಟಿದೆ. 70818 ದಲಿತರ ಮೇಲಿನ ದೌರ್ಜನ್ಯದ ಕೇಸುಗಳು ಬಾಕಿ ಇವೆ. ಪ.ಪಂಗಡದ ದೌರ್ಜನ್ಯ ಕೇಸುಗಳು ಸುಮಾರು 12000 ಬಾಕಿ ಇವೆ. ಶೇ. 1.2 ರಷ್ಟಿದ್ದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಹಾಗಾದರೆ ನಾವು ಮನುಷ್ಯರಾಗಿದ್ದೇವಾ? ಪ್ರಜಾಪ್ರಭುತ್ವದ ಅನುಸಾರ ನಡೆಯುತ್ತಿದ್ದೇವಾ? ನಾಡಗೀತೆ ಅನುಸಾರ ಬದುಕುತ್ತಿದ್ದೇವಾ? ಎಂಬುದು ತಿಳಿಯುತ್ತದೆ ಎಂದರು.
ನೀಲ ಕ್ರಾಂತಿ ಅದ್ಭುತ ಕೃತಿ : ಅಂಬೇಡ್ಕರ್ ಅವರು ಕೇವಲ ಹೋರಾಟಗಾರರಲ್ಲ. ಮಹಾನ್ ವಿದ್ವಾಂಸರು ಭಾರತದ ಸಾಮಾಜಿಕ ಚರಿತ್ರೆಯನ್ನು ಪುನರ್ ಸಂಯೋಜನೆ ಮಾಡಿದ ದೊಡ್ಡ ವಿದ್ವಾಂಸರು. ಅವರು ಕೊಟ್ಟ ಅರಿವಿನ ಅಸ್ತçವನ್ನು ಭೀಮಾಸ್ತç ಎನ್ನುತ್ತಾರೆ. ಜನಸಾಮಾನ್ಯರು ಈ ದೇಶವನ್ನು ಕಟ್ಟಿದ್ದು, ಅಂತಹವರು ಅನಾಮಧೇಯರು. ನಮಗೆ ಹೆಸರನ್ನು ಕೊಟ್ಟು ಹೆಸರೇಳದೇ ಹೋದವರು ನೂರಾರು ಜನರು. ಶ್ರಮಸಂಸ್ಕೃತಿಯ ಮೂಲಕ ಜನಸಂಸ್ಕೃತಿಯನ್ನು ಕಟ್ಟಿದವರನ್ನು ನಾನು ನೆನಪಿಸಿಕೊಳ್ಳಬೇಕು. ಅಂತಹ ಅದ್ಭುತ ಆಶಯಗಳನ್ನು ಹೊಂದಿರುವ ಕೃತಿ ನೀಲ ಕ್ರಾಂತಿ ಕೃತಿ ಮಾನವೀಯತೆ ಇಲ್ಲದವರು ಸಮಾನತೆ ಕೇಳುವುದಿಲ್ಲ. ಬಸವಣ್ಣನವರ ಕಾಯಕ, ಗಾಂಧೀಜಿಯವರ ಅಹಿಂಸೆ ಇವುಗಳು ಅಸ್ತçವಾಗಬೇಕು. ಬರೆಯುವವನಿಗೆ ಕೇವಲ ಬರವಣಿಗೆ ಇದ್ದರೆ ಸಾಲದು ಓದುವುದು ಬಹಳ ಮುಖ್ಯ ಎಂದರು.
ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಮಾತನಾಡಿ ನಾವೆಲ್ಲರೂ ಸರಿ ಸಮಾನವಾದ ಸಮಾಜ ಕಟ್ಟಬೇಕು. ಪರಿವರ್ತನೆಯ ಮಾರ್ಗ ಬುದ್ಧ, ಬಸವ, ಪೆರಿಯಾರ್, ಅಂಬೇಡ್ಕರ್, ಪುಲೆ, ಕುವೆಂಪು ಇಂತಹ ಮಹಾನ್ ನಾಯಕರ ಸಿದ್ದಾಂತದಲ್ಲಿ ಪರಿವರ್ತನೆ ಇದೆ. ಇವರ ವಿಚಾರಧಾರೆಗಳಲ್ಲಿ ಸಮಾನತೆ, ನ್ಯಾಯ, ವೈಜ್ಞಾನಿಕತೆಗಳಿಂದ ಉತ್ತಮ ಸಮಾಜ ಕಟ್ಟಲು ಸಮಾನತೆ, ನ್ಯಾಯ, ವೈಜ್ಞಾನಿಕತೆ ಮುಖ್ಯ. ಸಾಮಾನತೆ ಎಂದರೆ ಎಲ್ಲರಿಗೂ ಸರಿ ಸಮಾನವಾದ ಅವಕಾಶಗಳು, ಎಲ್ಲರಿಗೂ ಸರಿ ಸಮಾನವಾದ ಆರ್ಥಿಕತೆ, ಎಲ್ಲರಿಗೂ ಸರಿ ಸಮಾನವಾದ ಘನತೆ. ಇದು ಬಹಳ ಮುಖ್ಯ. ಇದಕ್ಕಾಗಿ ನಾವು ಶ್ರಮಿಸಬೇಕು. ನ್ಯಾಯ ಎಂದರೆ ಹೆಚ್ಚು ಪಡೆದವರು ಹೆಚ್ಚು ಕೊಡಬೇಕು. ಶಿಕ್ಷಣದಲ್ಲಿ, ಆರ್ಥಿಕತೆಯಲ್ಲಿ, ಘನತೆಯಲ್ಲಿ ವಂಚಿತರಾಗಿದ್ದಾರೆ. ಅವರಿಗೆ ಕೊಡಬೇಕು. ಸಮಾಜದಲ್ಲಿ ಪಡೆದವರೇ ಹೆಚ್ಚು ಪಡೆಯುತ್ತಿದ್ದಾರೆ. ಇತಿಹಾಸದ ತಪ್ಪುಗಳನ್ನು ತಿದ್ದುವುದು ಅದೇ ನ್ಯಾಯ ಎಂದರು.
ನೀಲ ಕ್ರಾಂತಿ ಕೃತಿ ರಚನೆಕಾರರು ಹಾಗೂ ಬಿಎಂಟಿಸಿ ನಿರ್ವಾಹಕರಾದ ಆರ್.ಪ್ರಭಾಕರ್ ಅವರು ಮಾತನಾಡಿ ನೀಲ ಕ್ರಾಂತಿ ಕೃತಿ ರಚನೆಯ ಉದ್ದೇಶ ಸಮಾಜದ ಮೇಲು ಕೀಲುಗಳನ್ನು, ಮೂಡನಂಭಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ನಾಯಕರನ್ನು ಸ್ಮರಿಸುವುದಾಗಿದೆ. ಸಮುದಾಯದಲ್ಲಿ ಯುವಕರು ಪರಿವರ್ತನೆಯಾಗಬೇಕೆಂಬುದು ನನ್ನ ಉದ್ದೇಶ.ನನ್ನ ಕೃತಿಗೆ ಡಾ.ಸಿದ್ದಲಿಂಗಯ್ಯ ಅವರು ಮುನ್ನುಡಿ ಬರೆದುಕೊಟ್ಟಿದ್ದು ನನ್ನ ಪುಣ್ಯ. ಕೃತಿ ಬಿಡುಗಡೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಡಾ.ಶಾರದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೆಂಕಟರಮಣಪ್ಪ, ರಾಜ್ಯ ಕಾರ್ಯದರ್ಶಿ ರವಿಪ್ರಕಾಶ್, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ, ಮಾಜಿ ನಗರಸಭಾ ಸದಸ್ಯ ಬಸವರಾಜು, ದಸಂಸ ಸಂಚಾಲಕ ಟೈರ್ ರಂಗನಾಥ್, ಗಾಯಕ ಮೋಹನ್, ನವೋದಯ ಯುವ ವೇದಿಕೆಯ ಜಯರಾಮಕೃಷ್ಣ, ಕಂಟ್ರಾಕ್ಟರ್ ಕಂಬಣ್ಣ, ಹೆಂದೊರೆ ಶಿವಣ್ಣ, ಮಹಮ್ಮದ್ ಶೇಖ್ ಅಲಿ ಸೇರಿದಂತೆ ಹಲವರು ಹಾಜರಿದ್ದರು.