ಬಗರ್ ಹುಕುಂ ಸಾಗುವಳಿದಾರರ ಹಕ್ಕುಪತ್ರ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ತಿಪಟೂರು : ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಜಮೀನು ದುರಸ್ತಿ, ವಸತಿ ಹೀನರಿಗೆ ಮನೆ ನಿವೇಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ, ತುಮಕೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ತಿಪಟೂರು ಉಪ ವಿಭಾಗಾಧಾರಿಕಾರಿ ಕಛೇರಿ ಎದುರು ಮಂಗಳವಾರದಂದು ಬಗರ್ ಹುಕುಂ ಸಾಗುವಳಿದಾರರ ಅನಿರ್ದಿಷ್ಟಾವದಿ ಧರಣಿಗೆ ಮುಂದಾದರು.
ನಗರದ ಕೆಂಪಮ್ಮದೇವಿ ದೇವಾಲಯದಿಂದ ಮಿನಿವಿಧಾನಸೌಧದವರಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು, ಬಗರ್ ಹುಕುಂ ಸಾಗುವಳಿದಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ,ಕೇಂದ್ರ ಮತ್ತು ರಾಜ್ಯ ಎರಡೂ ಕಡೆಯೂ ಒಂದೇ ಸರ್ಕಾರ ಇದ್ದರೆ ಡಬಲ್ ಇಂಜಿನ್ ಅಭಿವೃದ್ಧಿ ಎಂದು ಹೇಳಿದ್ದ ಇವರ ಆಡಳಿತದಲ್ಲಿ ರೈತರು ಡಬಲ್ ಚಪ್ಪಡಿಕಲ್ಲು ಅನ್ನು ತಲೆ ಮೇಲೆ ಹಾಕಿಕೊಂಡಂತಾಗಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಲು ಈ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಸುಳ್ಳುಗಳೇ ಈ ಸರ್ಕಾರಗಳ ಹೆಗ್ಗುರುತಾಗಿದೆ. ಅಧಿಕಾರದಲ್ಲಿದ್ದ ಜನ ವಿರೋಧಿ ಸರ್ಕಾರಗಳನ್ನು ಸೋಲಿಸುವ ಮೂಲಕ ಜನರ ಪ್ರಜಾಪ್ರಭುತ್ವ ಹಕ್ಕನ್ನು ಉಳಿಸಿಕೊಳ್ಳಲು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್. ಕೆ. ಸುಬ್ರಹ್ಮಣ್ಯ ಮಾತಾನಾಡಿ ಸುಮಾರು 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡಿರುವ ಭೂಮಿಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದರೂ ಹಕ್ಕುಪತ್ರ ನಿರಾಕರಣೆ ಅನ್ಯಾಯದ ಪರಮಾವಧಿ. ಕೂಡಲೇ ರೈತರ ಭೂಮಿ ಹಕ್ಕು ರಕ್ಷಣೆ ಆಗಬೇಕು ಹಾಗೂ ರೈತ ವಿರೋಧಿ ರಾಜ್ಯ ಕೃಷಿ ಕಾಯ್ದೆ ಹಾಗೂ ಬಲವಂತದ ಭೂ ಸ್ವಾಧೀನ ಕಾಯ್ದೆ ರದ್ದಾಗಬೇಕು ಎಂದು ಆಗ್ರಹಿಸಿದರು.
ತುಮಕೂರು ಜಿಲ್ಲಾ ಅಧ್ಯಕ್ಷ ಆರ್.ಎಸ್. ಚನ್ನಬಸವಣ್ಣ, ಜಿಲ್ಲಾ ಕಾರ್ಯದರ್ಶಿ ಸಿ.ಅಜ್ಜಪ್ಪ, ಮುಖಂಡರುಗಳಾದ ಕೊಟ್ರಪ್ಪ,ಸುಧಾಕರ್ ,ದೊಡ್ಡನಂಜಯ್ಯ, ನರಸಿಂಹಮೂರ್ತಿ ,ಶಿವಣ್ಣ ,ಯಾದವಮೂರ್ತಿ , ಚಂದ್ರಪ್ಪ ,ಲೋಕೇಶ್, ಅನಸೂಯ, ರಾಧಮ್ಮ ಸೇರಿದಂತೆ ತಿಪಟೂರು ,ಚಿಕ್ಕನಾಯಕನಹಳ್ಳಿ ,ತುರುವೆಕೆರೆ ತಾಲ್ಲೂಕುಗಳ ಸುಮಾರು 300ಕ್ಕೂ ಹೆಚ್ಚು ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.