ತಿಪಟೂರು : ನಗರದ ಕೆ.ಆರ್.ಬಡಾವಣೆಯ ಹಾಸ್ಯಚಕ್ರವರ್ತಿ ನರಸಿಂಹರಾಜು ರಂಗಮಂದಿರದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ಹಾಸ್ಯಚಕ್ರವರ್ತಿ ಟಿ.ಆರ್.ನರಸಿಂಹರಾಜು ಅಭಿಮಾನಿ ಬಳಗ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಟಿ.ಆರ್.ನರಸಿಂಹರಾಜು ಜನ್ಮಶತಮಾನೋತ್ಸವ ಸಮಾರಂಭವನ್ನು ನಡೆಸಲಾಯಿತು.
ಶಾಸಕ ಕೆ.ಷಡಕ್ಷರಿ ಮಾತನಾಡಿ ನರಸಿಂಹರಾಜುರಿಗೆ ಸಿಗಬೇಕಾದಂತಹ ಗೌರವವನ್ನು ಮೊದಲು ಹುಟ್ಟೂರಿನಿಂದಲೇ ಸಲ್ಲಿಸಲಾಗುತ್ತಿದೆ. ಇಂದಿನ ಮಕ್ಕಳಿಗೆ ನಮ್ಮ ಊರಿನ ಕಲಾ ಪ್ರತಿಭೆಯ ಪರಿಚಯವಾಗುವ ದೃಷ್ಟಿಯಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಜಾಥಾ ಮಾಡಲಾಗುತ್ತಿದೆ. ನರಸಿಂಹರಾಜುರವರು ಯಾವುದೇ ಪ್ರೋತ್ಸಹ, ಬೆಂಬಲ ಪಡೆಯದೇ ವೈಯಕ್ತಿಕವಾಗಿ ಸಾಧನೆ ಮಾಡಿದಂತಹವರು. ಇವರ ಸಾಧನೆ ಇಂದಿನ ಯುವಜನತೆಗೆ ಮಾದರಿ, ಸ್ಫೂರ್ತಿ ಆಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಕೊಡುಗೆಯನ್ನು ತಿಪಟೂರು ನೀಡುವಂತಾಗಬೇಕಿದೆ. ತಿಪಟೂರಿನ ಪ್ರತಿಭೆಗೆ ನಮ್ಮ ಊರಿನಿಂದಲೇ ಗೌರವ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನರಸಿಂಹರಾಜು ರಂಗಮಂದಿರಕ್ಕೆ ಇನ್ನೂ ಮೂಲಭೂತ ಸೌಕರ್ಯಗಳ ಅಗತ್ಯತೆ ಇದ್ದು ಶೀಘ್ರವೇ ಅದನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಕಾರ್ಯಒತ್ತಡದ ನಡುವೆ ಖುಷಿಯಿಂದ ಕಾಲ ಕಳೆಯಲು ಬಯಸುತ್ತಾನೆ. ಅಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಿಂದಿನ ಹಾಸ್ಯಗಳನ್ನು ನೋಡಿದರೆ ಅದರಲ್ಲಿಯೂ ನರಸಿಂಹರಾಜುರ ಹಾಸ್ಯಗಳನ್ನು ನೋಡಿದಾಗ ಮನಸ್ಸಿಗೆ ಮುದ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿನ ಹಾಸ್ಯಗಳಲ್ಲಿ ಭಾಷೆಯ ಬಳಕೆ, ಹಾಸ್ಯದ ಪರಿಯನ್ನು ಹೇಳಲು ಸಾಧ್ಯವಾಗದ ರೀತಿಯಲ್ಲಿದೆ. ಟಿ.ಆರ್.ನರಸಿಂಹರಾಜುರ ಕಲಾವಿದ ಜೀವನವೂ ಇತರರಿಗೆ ಮಾದರಿಯಾಗಬೇಕಿದೆ ಎಂದರು.
ನಟಿ ಸುಧಾ ನರಸಿಂಹರಾಜು ಮಾತನಾಡಿ ಕಳೆದ 43 ವರ್ಷಗಳ ಆಸೆ, ನಿರೀಕ್ಷೆಗಳಿಗೆ ಜೀವ ಬಂದಂತಾಗಿದ್ದು 100ನೇ ವರ್ಷದ ಜನ್ಮಶತಮಾನೋತ್ಸವ ಇಷ್ಟರ ಮಟ್ಟಿಗೆ ಅದ್ದೂರಿಯಾಗಿ ನಡೆಯುತ್ತದೆ ಎಂದು ನಿರೀಕ್ಷೆಯೇ ಇರಲಿಲ್ಲ. ಅದರಲ್ಲಿಯೂ ಸ್ವತಃ ಊರಾದ ತಿಪಟೂರಿನಲ್ಲಿ ಸಂಭ್ರಮಾಚರಣೆ ಎಂದರೆ ಖುಷಿ ತರುವ ವಿಚಾರ. ಶತಮಾನೋತ್ಸವದ ಅಂಗವಾಗಿ ವರ್ಷವಿಡಿ ರಾಜ್ಯದಾದ್ಯಂತ ಕಾರ್ಯಕ್ರಮಗಳು ನಡೆದರೆ ಸಂತೋಷ ನೀಡುತ್ತದೆ. ಮುಂದಿನ 3 ತಿಂಗಳ ನಂತರದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ತಿಪಟೂರಿನಿಂದ ಕಾರ್ಯಕ್ರಮ ಪ್ರಾರಂಭವಾಗಬೇಕೆಂಬ ಬಯಕೆ ಇದೆ ಎಂದರು.
ರಂಗಕರ್ಮಿ ಡಿವಿಎಸ್ ಗುಪ್ತ ಮಾತನಾಡಿ ಭಾರತದಲ್ಲಿ ಅತ್ಯಂತ ಪ್ರತಿಭಾವಂತ ಹಾಸ್ಯ ನಟ ಟಿ.ಆರ್.ನರಸಿಂಹರಾಜು ಎಂದರೆ ತಪ್ಪಾಗಲಾರದು. ದೇಹ ಚಿಕ್ಕದಾದರೂ ಪ್ರತಿಭೆ ಆಗಾಧವಾದದ್ದು, ಇಡೀ ಭಾರತದಲ್ಲಿ ಯಾವುದೇ ಭಾಷೆಯ ಹಾಸ್ಯ ಕಲಾವಿದರಲ್ಲಿ ನರಸಿಂಹರಾಜುರಂತಹ ಆಂಗಿಕ ಅಭಿನಯದ ಹಾಸ್ಯ ಕಲಾವಿದರನ್ನು ಇಲ್ಲಿಯವರೆವಿಗೂ ಕಾಣಲು ಸಾಧ್ಯವಾಗಿಲ್ಲ. ಇಂದಿನ ದಿನಮಾನದಲ್ಲಿ ಚಂದನವನದಲ್ಲಿ ನಾಯಕ ನಟರಿಗೆ ಸಿಗುವಂತಹ ಗೌರವವು ಹಾಸ್ಯ ಕಲಾವಿದರಿಗೂ ಸಿಗುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ನರಸಿಂಹರಾಜುರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿಯೂ ಚಂದನವನವಾಗಲಿ, ರಂಗಭೂಮಿಯಾಗಲಿ ನೆನಪಿಸಿಕೊಳ್ಳದರಿರುವುದು ನೋವಿನ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಜಿ.ಪಂ.ಸಿ.ಇ.ಓ. ಪ್ರಭು, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್, ಡಿವೈಎಸ್‌ಪಿ ಸಿದ್ಧಾರ್ಥ ಗೋಯಲ್, ಉಪವಿಭಾಗಾಧಿಕಾರಿ ಕಲ್ಪಶ್ರೀ.ಸಿ.ಆರ್., ತಹಶೀಲ್ದಾರ್ ಪವನ್ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆಯ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ನರಸಿಂಹರಾಜು ಪುತ್ರಿ ಗಾಯತ್ರಿ ದೇವಿ, ವಿಶ್ವನಾಥ್, ತಿಪಟೂರು ಕೃಷ್ಣ, ಎ.ಟಿ.ಪ್ರಸಾದ್, ನಿಖಿಲ್ ರಾಜಣ್ಣ, ಜ್ಯೋತಿ ಗಣೇಶ್, ನವೀನ್ ಕುಮಾರ್, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್ ಸೇರಿದಂತೆ ಹಲವರು ಇದ್ದರು.