ಪತ್ರಿಕಾ ರಂಗದವರಿಗೂ ಇ-ಶ್ರಮ್ ಪೋರ್ಟಲ್ ನೋಂದಣಿ ಅವಕಾಶ : ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಸಿ. ಚಂದ್ರಶೇಖರ್
ತುಮಕೂರು : ಅಸಂಘಟಿತ ಕಾರ್ಮಿಕ ವಲಯದವರ ನೋಂದಣಿಗಾಗಿ ಕೇಂದ್ರ ಸರ್ಕಾರದಿಂದ ಅಭಿವೃದ್ಧಿಪಡಿಸಿರುವ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಪತ್ರಿಕಾ ರಂಗದವರಿಗೂ ಅವಕಾಶ ಕಲ್ಪಿಸಿದ್ದು, ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವವರು ಪ್ರಯೋಜನ ಪಡೆಯಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಸಿ. ಚಂದ್ರಶೇಖರ್ ಕರೆ ನೀಡಿದರು.
ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿಂದು ಆಯೋಜಿಸಿದ್ದ ಇ-ಶ್ರಮ್ ಪೋರ್ಟಲ್‌ನಲ್ಲಿ ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿರುವವರ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇ-ಶ್ರಮ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದರಿಂದ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ಪತ್ರಿಕಾ ವಿತರಕರು/ಹಂಚಿಕೆದಾರರು, ಬುಕ್ ಬೈಂಡಿಂಗ್ ವರ್ಕರ್, ಮುದ್ರಕರು ಸೇರಿದಂತೆ ಪತ್ರಿಕಾರಂಗದಲ್ಲಿ ದುಡಿಯುತ್ತಿರುವವರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಸರ್ಕಾರ ಘೋಷಿಸಿದೆ. ಇ-ಶ್ರಮ್ ಪೋರ್ಟಲ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವುದರಿಂದ ಫಲಾನುಭವಿಯು ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯ ಹೊಂದಿದರೆ 1ಲಕ್ಷ ರೂ. ಪರಿಹಾರ ಪಡೆಯಲು ಅವಕಾಶವಿದ್ದು, ಅರ್ಹ ಫಲಾನುಭವಿಗಳು ತಪ್ಪದೇ ತಮ್ಮ ಹೆಸರನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಕಾರ್ಮಿಕರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ದೊರೆತಿಲ್ಲ. ಈಗಲಾದರೂ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರೆಂದು ಪತ್ರಿಕಾ ರಂಗದವರನ್ನು ಗುರುತಿಸಿ ಸರ್ಕಾರದ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯವೆಂದು ಅಭಿಪ್ರಾಯಪಟ್ಟರಲ್ಲದೆ, 2017ರ ದತ್ತಾಂಶದ ಅನ್ವಯ ದೇಶದಲ್ಲಿ 48 ಕೋಟಿ ಕಾರ್ಮಿಕರಿದ್ದಾರೆಂದು ತಿಳಿದು ಬಂದಿದೆ. ಈ ಪೈಕಿ 9 ಕೋಟಿ ಮಂದಿ ಮಾತ್ರ ಸಂಘಟಿತ ಕಾರ್ಮಿಕರು ಹಾಗೂ 37 ಕೋಟಿ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ವೇತನ ಹೊರತುಪಡಿಸಿ ಸೇವಾಭದ್ರತೆ, ವಿಮೆ, ಪಿಂಚಣಿ, ಮತ್ತಿತರ ಸೌಲಭ್ಯಗಳು ಲಭ್ಯವಿಲ್ಲದ ಕಾರಣ ಅಸಂಘಟಿತ ಕಾರ್ಮಿಕರು ತಪ್ಪದೇ ಇ-ಶ್ರಮ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಮಿಕ ಅಧಿಕಾರಿ ರಮೇಶ್ ಮಾತನಾಡಿ, ಇ-ಶ್ರಮ್ ಪೋರ್ಟಲ್‌ನಲ್ಲಿ ಅರ್ಹ ಅಸಂಘಟಿತ ಕಾರ್ಮಿಕರು ಉಚಿತವಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ(ಅSಅ)ಗಳಿಗೆ ಭೇಟಿ ನೀಡಿ ಅಥವಾ ಇ-ಶ್ರಮ್ ಪೋರ್ಟಲ್ ತಿತಿತಿ.eshಡಿಚಿm.gov.iಟಿ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ನೋಂದಣಿ ಯಶಸ್ವಿಯಾದ ನಂತರ ಫಲಾನುಭವಿಗಳು ಸ್ಥಳದಲ್ಲಿಯೇ ಗುರುತಿನ ಚೀಟಿ ಪಡೆಯಬಹುದಾಗಿದೆ ಎಂದರಲ್ಲದೆ, ನೋಂದಣಿ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಅಗತ್ಯ ದಾಖಲೆಗಳೊಂದಿಗೆ ಕಚೇರಿ ಸಮಯದಲ್ಲಿ ಕಾರ್ಮಿಕ ಇಲಾಖೆಗೆ ಭೇಟಿ ನೀಡಿಯೂ ಸಹ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.
ಇ-ಶ್ರಮ ಪೋರ್ಟಲ್‌ಗೆ ನೋಂದಣಿಯಾಗ ಬಯಸುವವರ ವೇತನ 15ಸಾವಿರ ರೂ. ಒಳಗಿದ್ದು, 16 ರಿಂದ 59ವರ್ಷ ವಯೋಮಾನದೊಳಗಿರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ/ ಇಎಸ್‌ಐ ಫಲಾನುಭವಿಯಾಗಿರಬಾರದು. ಪತ್ರಿಕಾ ರಂಗದಲ್ಲಿ ಕೆಲಸ ಮಾಡುತ್ತಿರುವ ಫಲಾನುಭವಿಗಳು ಕೂಡಲೇ ಇ-ಶ್ರಮ್ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪತ್ರಿಕಾರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಅಸಂಘಟಿತ ಕಾರ್ಮಿಕರಿಗೆ ಆಯಾ ತಾಲ್ಲೂಕಿನಲ್ಲಿಯೇ ನೋಂದಣಿಗೆ ಅನುವು ಮಾಡಿಕೊಡಲಾಗಿದ್ದು, ಫಲಾನುಭವಿಗಳು ಇ-ಶ್ರಮ್ ಪೋರ್ಟಲ್ ಯೋಜನೆಯ ಲಾಭ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ರಾಷ್ಟೀಯ ಸಮಿತಿ ಸದಸ್ಯ ಶಾಂತರಾಜು, ಉಪಾಧ್ಯಕ್ಷ ಚಿಕ್ಕೀರಪ್ಪ ಜಿಲ್ಲಾ ನಿರ್ದೇಶಕ ಹೆಚ್.ಎಸ್. ಪರಮೇಶ್, ನಾಮಿನಿ ನಿರ್ದೇಶಕರಾದ ಎಸ್. ಹರೀಶ್ ಆಚಾರ್ಯ, ಕಾಗ್ಗೆರೆ ಸುರೇಶ್, ಸೇರಿದಂತೆ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.