ಚಿಕ್ಕನಾಯಕನಹಳ್ಳಿ

ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿರುವ ಜೆಸಿಎಂ : ಗೃಹ ಸಚಿವ ಆರಗ ಜ್ಞಾನೇಂದ್ರ

ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿದ್ದಾರೆ. ಇವರು ಯೋಜನೆಗಳಿಗೆ ಅನುದಾನವನ್ನು ಕೇಳಿದರೆ ಸರಕಾರ ನಿರಾಕರಿಸುವುದಿಲ್ಲ. ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಶ್ರಮಿಸುತ್ತಿದ್ದಾರೆ. ಸುಸಜ್ಜಿತವಾದ ಪೋಲೀಸ್ ಠಾಣೆಯ ನಿರ್ಮಾಣದ ಮೂಲಕ ಜನರ ಸುರಕ್ಷತೆಗೆ ಆದ್ಯತೆ ನೀಡಿರುವ ಜೆಸಿಎಂ ಅವರ ಕಾರ್ಯವೈಖರಿ ಮುಂದುವರಿಯಲಿ ಎಂದು ಗೃಹ ಮತ್ತು ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಆಶಿಸಿದರು.
ಪಟ್ಟಣ ಹಾಗು ಹುಳಿಯಾರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೋಲೀಸ್‌ಠಾಣೆಯನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಜಂಟಿಯಾಗಿ ಬುಧವಾರ ಉದ್ಘಾಟಿಸಿದರು. ಹಳೆ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಸಿಪಿಐ ಕಚೇರಿ ಹಾಗು ಪೋಲೀಸ್‌ಠಾಣೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.
ದುಷ್ಟರನ್ನು ಹೆಡೆಮುರಿ ಕಟ್ಟಲು ನೂರು ಪೋಲೀಸ್ ಠಾಣೆಗಳ ನಿರ್ಮಾಣ, ಪೋಲೀಸರ ಕಾರ್ಯ ವೈಖರಿ ಹೆಚ್ಚಿಸಲು ತಂತ್ರಜ್ಞಾನ ಬಲಪಡಿಸುವುದು, ಅವರ ನೆಮ್ಮದಿಯ ಬದುಕಿಗೆ ಮನೆಗಳನ್ನು ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಆರೋಪಿಗಳು ಪೋಲೀಸರಿಂದ ತಪ್ಪಿಸಿಕೊಳ್ಳಬಾರದು ಇದಕ್ಕಾಗಿ ವ್ಯವಸ್ಥಿತವಾಗಿ ಪೋಲಿಸರ ಶಕ್ತಿಯನ್ನು ನಮ್ಮ ಸರಕಾರ ಬಲಪಡಿಸುತ್ತಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣೆಗೆ ಶಂಕು ಸ್ಥಾಪನೆ ನೆರವೇರಿಸಿದ್ದೆ ಈಗ ನಾನೇ ಉದ್ಘಾಟಿಸುತ್ತಿರುವುದು ಸಂತಸದ ವಿಚಾರ. ಪೋಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ಎಲ್ಲಾ ಕೆಲಸಗಳಿಗೂ ಸಮಯವಿದೆ. ಆದರೆ ಪೋಲಿಸ್ ಕೆಲಸಗಳಿಗೆ ನಿಗದಿತ ಸಮಯವಿಲ್ಲ. ಶೋಷಿತ, ಬಡವ, ಅನ್ಯಾಯಕ್ಕೆ ಒಳಗಾದವರಿಗೆ ಪೋಲೀಸರು ಸಮರ್ಪಕವಾಗಿ ಸ್ಪಂದಿಸಬೇಕೆಂದು ಅಭಿಪ್ರಾಯಪಟ್ಟರು.
ಮೈಸೂರು- ಬಳ್ಳಾರಿ ರೈಲು ಮಾರ್ಗ ರಚನೆಗೆ ಮನವಿ
ಮೈಸೂರಿನ ಪಾಂಡವಪುರದಿಂದ ಆರಂಭಿಸಿ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹಿರಿಯೂರು ಮುಖಾಂತರ ಬಳ್ಳಾರಿ ಸೇರುವಂತೆ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕೆಂದು ಸಚಿವರು ಶ್ರೀಕಾರ ಹಾಕಿದರು. ಗಣಿ ಭಾದಿತ ಪ್ರದೇಶಗಳ ಅಭಿವೃದ್ದಿಗೆ 1200 ಕೋಟಿ ಹಣ ನಮ್ಮ ಜಿಲ್ಲೆಗೆ ಬಂದಿದ್ದು, ಈ ಹಣವನ್ನು ಉಪಯೋಗಿಸಿ ಯೋಜನೆಗೆ ಬೇಕಾದ ಭೂಮಿಯನ್ನು ರೈತರಿಂದ ಪಡೆಯಬಹುದು ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಸಮಾರಂಭದಲ್ಲಿ ಪೋಲೀಸ್ ಅಧೀಕ್ಷಕ ರಾಹುಲ್‌ಕುಮಾರ್, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಉದೇಶ್, ಸಹಾಯಕ ಪೋಲೀಸ್ ಅಧಿಕ್ಷಕ ಸಿದ್ದಾರ್ಥ ಗೋಯಲ್, ಸಿಪಿಐ ನಿರ್ಮಲ, ತಹಸೀಲ್ದಾರ್ ತೇಜಸ್ವಿನಿ, ಪುರಸಭಾ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಲಕ್ಷ್ಮಿ ಹಾಗೂ ಇತರರಿದ್ದರು.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker