ಅವೈಜ್ಞಾನಿಕ ಚರಂಡಿ ನಿರ್ಮಾಣ ಕಾಮಗಾರಿ ವಿರೋಧಿಸಿ ಪ್ರತಿಭಟನೆ
ತಿಪಟೂರು : ನಗರದ ಅಮಾನಿಕೆರೆಯ ಪಕ್ಕದ ಬೈಪಾಸ್ ರಸ್ತೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಚರಂಡಿ ನಿರ್ಮಾಣ ಮಾಡುತ್ತಿದ್ದು ತಿಪಟೂರು ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ಹಾಗೂ ಕೊಪ್ಪ, ಗೊರಗೊಂಡನಹಳ್ಳಿ ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ನಗರದ ಕಲ್ಲೇಶ್ವರ ದೇವಾಲಯದ ಹಿಂಭಾಗದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ವೆಚ್ಚದಲ್ಲಿ ಅವೈಜ್ಞಾನಿಕವಾದ ದೊಡ್ಡದಾದ ತೆರೆದ ಚರಂಡಿಯನ್ನು ಮಾಡಿ ಸರ್ಕಾರಿ ಹಣವನ್ನು ಹಾಳುಮಾಡುವುದಲ್ಲದೇ ಕೆರೆಯ ಏರಿಗೆ, ದೇವಾಸ್ಥಾನಕ್ಕೆ ಮತ್ತು ಪಕ್ಕದಲ್ಲಿ ವಾಸಿಸುವ ಸಾವಿರಾರು ನಿವಾಸಿಗಳಿಗೆ ತೊಂದರೆ ಮಾಡಲು ಹೊರಟಿರುವ ಸಣ್ಣ-ನೀರಾವರಿ ಇಲಾಖೆ, ನಗರಸಭೆ ಮತ್ತು ತಾಲ್ಲೂಕಿನ ಜನಪ್ರತಿನಿಧಿಯ ಯೋಜನೆಯನ್ನು ವಿರೋಧಿಸುವ ಸಲುವಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯಲ್ಲಿ ತಿಪಟೂರು ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷ ಲೋಕೇಶ್ವರ ಮಾತನಾಡಿ ಯೋಜನೆಯಿಂದ ಕೆರೆ ಏರಿಯ ಗಟ್ಟಿತನವು ಹಾಳಾಗುತ್ತದೆ. ಜೊತೆಗೆ ಸ್ವಿಪೆಜ್ ನೀರು ಸೋರಿಕೆ ಉಂಟಾಗಿ ದೇವಾಸ್ಥಾನದ ತಳ ಪಾಯವು ಹಾಳಾಗುವ ಸಾಧ್ಯತೆಯಿದೆ. ಕೆರೆ ಪಕ್ಕ 6ನೇ ವಾರ್ಡ್ನಲ್ಲಿ ವಾಸವಾಗಿರುವ ನೂರಾರು ಮನೆಗಳಿಗೂ ತೊಂದರೆ ಆಗುತ್ತದೆ. ಚರಂಡಿಯ ವಾಸನೆ ಮತ್ತು ಸೊಳ್ಳೆ ಕಾಟದಿಂದ ಅಲ್ಲಿಯ ನಿವಾಸಿಗಳು ನರಳ ಬೇಕಾಗುತ್ತದೆ, ಅಕ್ಕ ಪಕ್ಕದಲ್ಲಿ ಹಾದು ಹೋಗುವ ಮನುಷ್ಯರು, ದನಗಳು ಮತ್ತು ನಾಯಿ ಇತರೆ ಪ್ರಾಣಿಗಳು ಆಳವಾದ ಚರಂಡಿಯಲ್ಲಿ ಬಿದ್ದು ಸಾಯುವ ಅವಕಾಶಗಳು ಹೆಚ್ಚಾಗಿರುತ್ತವೆ. ದೇವರ ಎಲ್ಲಾ ಉತ್ಸವಗಳಿಗೆ ಇಲ್ಲಿ ತುಂಬಾ ತೊಂದರೆ ಆಗುತ್ತದೆ ಮತ್ತು ವಾಹನ ಸಂಚಾರಕ್ಕೂ ತೊಂದರೆ ಆಗುತ್ತದೆ. ಒಂದು ಸಮಯ ಅವುಗಳಿಗೆ ಸ್ಲಾಬ್ ಜೋಡಿಸಿದರು ಅಲ್ಲಿ ಓಡಾಡುವ ಬಾರಿ ವಾಹನಗಳಿಂದ ಅವುಗಳು ಹೊಡೆದು ಹೋಗಿ ಮತ್ತೆ ಅಪಾಯಕಾರಿ ಜಾಗಗಳಾಗುವ ಅವಕಾಶವಿರುತ್ತದೆ. ಆದ್ದರಿಂದ ಈ 8 ಅಡಿ 15 ಅಡಿ ಉದ್ದದ ದೊಡ್ಡ ಚರಂಡಿ ಮಾಡುವ ಯೋಜನೆಯನ್ನು ಕೈ ಬಿಟ್ಟು ಯು.ಜಿ.ಡಿ ಗೆ ಅಳವಡಿಸಿದಂತೆ ಭೂಮಿಯ ಒಳಗಡೆ ಪೈಪ್‌ಗಳನ್ನು ಅಳವಡಿಸಿ ಮುಚ್ಚುವುದರಿಂದ ಮೇಲಿನ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಅವಕಾಶವಿರುತ್ತದೆ. ಈ ಬದಲಾವಣೆಯನ್ನು ಮಾಡದೇ ಸರ್ಕಾರದ ಪ್ರತಿನಿಧಿಗಳು ಮುಂದುವರೆದಿದ್ದೆ ಆದಲ್ಲಿ ಈ ಯೋಜನೆಯನ್ನು ಎಲ್ಲಾ ಸಾರ್ವಜನಿಕರು ವಿರೋಧಿಸಿ ಬೃಹತ್ ಹೋರಾಟಕ್ಕೆ ಸಿದ್ದರಾಗಬೇಕಾಗುತ್ತದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಆರ್.ಜೆ.ಚಂದ್ರಶೇಖರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಎಇಇ ದೊಡ್ಡಯ್ಯ ಆಗಮಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಕೆಂಪಮ್ಮದೇವಿ ದೇವಾಲಯದ ಗುಡಿಗೌಡ ಚಂದ್ರಶೇಖರ್, ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯೆ ಆಶ್ರಿಫಾ ಬಾನು, ಮಾಜಿ ಸದಸ್ಯರುಗಳಾದ ರಾಜಶೇಖರ್, ಎಂ.ನಿಜಗುಣ ಸೇರಿದಂತೆ ಕೊಪ್ಪ, ಗೊರಗೊಂಡನಹಳ್ಳಿ ಗ್ರಾಮಸ್ಥರು ಇದ್ದರು.