ಪುರಸಭೆಯಲ್ಲಿ ಅವ್ಯವಹಾರದ ವಾಸನೆ : ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪರಿಶೀಲನೆ
ಪಾವಗಡ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುವ ವೇಳೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆಂದು ನಾಮಿನಿ ಸದಸ್ಯೆರು ದೂರಿದ್ದರ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಶೀಲನೆ ನಡೆಸಿ ತನಿಖೆ ಕೈಗೊಂಡಿರುವ ಘಟನೆ ನಡೆದಿದೆ.
ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿ 2020-21ನೇ ಸಾಲಿನ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಮಾಡುವ ವೇಳೆ ಅಧಿಕಾರಿಗಳು ಸುಮಾರು 25 ಲಕ್ಷ ರೂ. ಅವ್ಯವಹಾರ ನಡೆಸಿರುವುದಾಗಿ ಪುರಸಭೆಯ ನಾಮಿನಿ ಸದಸ್ಯರಾದ ರವಿ, ಲೋಕೇಶ್ ರಾವ್, ಶೇಖರ್ ಬಾಬು, ಮಂಜು, ಪ್ರಸನ್ನ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದು ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಪುರಸಭೆಯ ಅಧಿಕಾರಿಗಳು ಹಾಗೂ ದೂರುದಾರರೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಪಿ.ಡಿ. ಅಂಜಿನಪ್ಪ, ಹಾಗೂ ಮುಖ್ಯ ಇಂಜನಿಯರ್ ಪ್ರಕಾಶ್ ರವರ ತಂಡ ಪಾವಗಡ ಪಟ್ಟಣದ ವಿವಿಧ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಎಲ್ಲೆಲ್ಲಿ ಪರಿಶೀಲನೆ: ಹಿಂದೂಪರ ರಸ್ತೆಯ ಮಾರ್ಗದಲ್ಲಿರುವ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಲ್ಯಾಣಿ ಅಭಿವೃದ್ದಿ, ಹಾಗೂ ಘಟಕದಲ್ಲಿರುವ ಗಿಡ ಮರಗಳಿಗೆ ನೀರುಣಿಸಲು ಕೈಗೊಂಡಿರುವ ಹನಿ ನೀರಾವರಿ ಕಾಮಗಾರಿ, ನಡಿಪನ್ನ ದೇವಸ್ಥಾನದಿಂದ ಎಂ.ಎ.ಆರ್. ಲೇಔಟ್ ವರಗೂ ಕುಡಿಯುವ ನೀರಿನ ಪೈಪ್ ಅಳವಡಿಕೆ, ಮತ್ತು ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ಮೀನಾ ನರ್ಸಿಂಗ್ ಮುಂಭಾಗ ಡಕ್ ನಿರ್ಮಾಣದ ಕಾಮಗಾರಿಗಳನ್ನು ಮಾಡದೆ ಹಣ ಡ್ರಾ ಮಾಡಿಕೊಂಡಿರುವ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.
ಇನ್ನು ಪಟ್ಟಣದ ಹೊಸ ಬಸ್ ನಿಲ್ದಾಣದ ಶೌಚಾಲಯದ ಹಿಂಭಾಗದಲ್ಲಿ ಹಾಗೂ 1ನೇ ವಾರ್ಡ್ನಿಂದ 23 ವಾರ್ಡುಗಳ ವರೆಗೂ ಪಾರ್ಕ್ ಅಭಿವೃದ್ದಿ ಕಾಮಗಾರಿಗಳಲ್ಲಿ ಅವ್ಯವಹಾರ ಮಾಡಲಾಗಿದ್ದು 20 & 21 ನೇ ವಾರ್ಡ್ಗಳಲ್ಲಿ ಪಾರ್ಕ್ ನಿರ್ಮಾಣ ಮಾಡದೆ ಹಣ ಡ್ರಾ ಮಾಡಲಾಗಿದೆ ಎಂದು ನಾಮಿನಿ ಸದಸ್ಯರು ದಾಖಲೆ ಸಮೇತ ಅಧಿಕಾರಿಗಳಿಗೆ ವಿವರಿಸಿದ ಘಟನೆ ನಡೆಯಿತು.
ಈ ವೇಳೆ ಪುರಸಭೆಯ ಮುಖ್ಯಾಧಿಕಾರಿಗಳು, ಇಂಜಿನಿಯರ್ ಹಾಗೂ ಸಿಬ್ಬಂದಿ ಸೇರಿದಂತೆ ನಾಮಿಸಿ ಸದಸ್ಯರು ಅಧಿಕಾರಿಗಳೊಂದಿಗೆ ಹಾಜರಿದ್ದರು.