ಮಾಯಸಂದ್ರದಲ್ಲಿ ಶ್ರೀ ಮಠದ ವತಿಯಿಂದ ಕೃಷಿ ಕಾಲೇಜು ಸ್ಥಾಪನೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಟಿ.ಬಿ.ಕ್ರಾಸ್‌ನಲ್ಲಿ ಚುಂಚಾದ್ರಿ ರೈತ ಸಂತೆಗೆ ಶ್ರೀಗಳಿಂದ ಚಾಲನೆ
ತುರುವೇಕೆರೆ : ದೇಶದ ಬೆನ್ನೆಲುಬಾದ ರೈತನ ಆರ್ಥಿಕವಾಗಿ ಸದೃಡನಾಗಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ ಆರಂಭಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್‌ನಲ್ಲಿ ಚುಂಚಾದ್ರಿ ರೈತ ಸಂತೆ ಚಾಲನೆ, ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಅನಾವರಣ, ಹಾಗೂ ಆದಿಚುಂಚನಗಿರಿ ಸಮುದಾಯ ಭವನ ಶಂಕುಸ್ಥಾಪನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ರೈತ ತಾನು ಬೆಳದ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡುವ ಕಲೆಯನ್ನು ಕಲಿಯಬೇಕಿದೆ. 30 ಕ್ಕೂ ಹೆಚ್ಚು ಕೆರೆಕಟ್ಟೆಗಳನ್ನು, ಶಾಲೆಗಳನ್ನು ಕಟ್ಟಿ, ಸಹಕಾರಿ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶೆಷ ಕೊಡುಗೆ ನೀಡಿದ ಮಾಜಿ ಶಾಸಕ ಬಿ.ಭೈರಪ್ಪಾಜಿಯವರರು ನಮಗೆ ಆದರ್ಶಪ್ರಾಯರಾಗಿದ್ದಾರೆ.. ಶ್ರೀ ಆದಿಚುಂಚನಗಿರಿ ಮಠದ ವತಿಯಿಂದ ತಾಲೂಕಿನ ಮಾಯಸಂದ್ರದಲ್ಲಿ ಶೀಘ್ರದಲ್ಲೇ ಕೃಷಿ ಕಾಲೇಜು ಸ್ಥಾಪಿಸಲಾಗುವುದು ಎಂದರು.
ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್ ಮಾತನಾಡಿ ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿಪಡಿಸುವಂತಾದಾಗ ಮಾತ್ರ ರೈತರ ಕಲ್ಯಾಣ ಸಾಧ್ಯ. ಈ ನಿಟ್ಟಿನಲ್ಲಿ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಚುಂಚಾದ್ರಿ ರೈತ ಸಂತೆಗೆ ಚಾಲನೆ ದೊರಕಿಸಿ ಶ್ರೀ ಆದಿಚುಂಚನಗಿರಿ ಮಠ ದಾಪುಗಾಲಿರಿಸಿದೆ. ನನ್ನ ತಂದೆ ಕೆ.ಹೆಚ್.ಪಾಟೀಲ್ ಅವರ ಆಪ್ತರಾಗಿದ್ದ ಮಾಜಿ ಶಾಸಕ ಬಿ. ಭೈರಪ್ಪಾಜಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಅತ್ಯಂತ ಸಂತಸ ತಂದಿದೆ.
25 ಲಕ್ಷ ರೂ ದೇಣಿಗೆ :-
ಶಾಸಕ ಮಸಾಲಜಯರಾಮ್ ಮಾತನಾಡಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ ಮಠದ ವತಿಯಿಂದ ಚುಂಚಾದ್ರಿ ರೈತ ಸಂತೆ, ಹಾಗೂ ಸಮುದಾಯಭವನ ಶಂಕುಸ್ಥಾಪನೆ ನೆರವೇರಿಸಿರುವುದಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿಯವರಿಗೆ ವಿಶೇಷ ಕೃತಜ್ಷತೆಗಳನ್ನು ಸಲ್ಲಿಸುತ್ತೇನೆ. ಆದಿ ಚುಂಚನಗಿರಿ ಸಮುದಾಯ ಭವನಕ್ಕೆ 25 ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು.
ರಾಜ್ಯ ರೈತ ಸಂಘದ ವರಿಷ್ಟ ಕೆ.ಟಿ.ಗಂಗಾಧರ್ ಮಾತನಾಡಿ ಧಾರ್ಮಿಕ ಮಠವಾದ ಅದಿಚುಂಚನಗಿರಿ ಶ್ರೀ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿಯವರು ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಚುಂಚಾದ್ರಿ ರೈತ ಸಂತೆ ಚಾಲನೆ ನೀಡಿರುವುದು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ರೈತ ತನ್ನ ಬೆಳೆಯನ್ನು ಮೌಲ್ಯವರ್ಧನೆ ಮಾಡುವ ತಂತ್ರಜ್ಞಾನವನ್ನು ಬೆಳೆಸಿಕೊಂಡು ಆರ್ಥಿಕ ಸಶಕ್ತತೆಯನ್ನು ಹೊಂದಲಿ ಎಂದು ಆಶಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಸಚಿವ ದ್ವಯರಾದ ಮುನಿರತ್ನ ಹಾಗೂ ಗೋಪಾಲಯ್ಯ ಅವರುಗಳು ಟಿ.ಬಿ.ಕ್ರಾಸ್‌ನಲ್ಲಿ ಮಾಜಿ ಶಾಸಕ ಬಿ.ಭೈರಪ್ಪಾಜಿಯವರ ಪುತ್ಥಳಿ ಅನಾವರಣ, ಚುಂಚಾದ್ರಿ ರೈತ ಸಂತೆ ಹಾಗೂ ಆದಿಚುಂಚನಗಿರಿ ಸಮುದಾಯ ಭವನ ಶಂಕುಸ್ಥಾಪನೆ, ಸಂದರ್ಭದಲ್ಲಿ ಡಾ.ಶ್ರೀ ನಿರ್ಮಲಾನಂದಸ್ವಾಮೀಜಿಯವರೊಂದಿಗೆ ಹಾಜರಿದ್ದು ಶುಭ ಕೋರಿ ತೆರಳಿದರು.
ಇದೇ ಸಂದರ್ಭದಲ್ಲಿ ಪ್ರೋ. ಪುಟ್ಟರಂಗಪ್ಪ ರಚಿಸಿರುವ ರೈತಬಂದು ಬಿ. ಬೈರಪ್ಪಾಜಿ ಕೃತಿಯನ್ನು ಡಾ.ಶ್ರೀ ನಿರ್ಮಲಾನಂದ ನಾಥಸ್ವಾಮೀಜಿಯವರು ಬಿಡುಗಡೆಗೊಳಿಸಿ ಸಾರಸ್ವತ ಲೋಕಕ್ಕೆ ಸಮರ್ಪಿಸಿದರು. ಅನೇಕ ಗಣ್ಯರನ್ನು ಶ್ರೀ ಮಠ ಹಾಗೂ ಬಿ.ಭೈರಪ್ಪಾಜಿ ಪ್ರತಿಷ್ಟಾನದ ವತಿಯಿಂದ ಗೌರವಿಸಲಾಯಿತು,
ಶ್ರೀ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ, ಶಾಸಕರಾದ ಸುರೇಶ್‌ಗೌಡ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀ ನಾರಾಯಣ, ಬೈರಪ್ಪಾಜಿಯವರ ಪುತ್ರ ಬೆಟ್ಟಸ್ವಾಮಿ, ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಕೊಂಡಜ್ಜಿವಿಶ್ವನಾಥ್, ತೋಟಗಾರಿಕೆ ಇಲಾಖೆಯ ಡಿ.ಡಿ. ರಘು, ತಹಶೀಲ್ದಾರ್ ರೇಣುಕುಮಾರ್ ಮತ್ತಿತರಿದ್ದರು.