ಶಿರಾ : ಗೌರಿ-ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ, ಗಣೇಶ ಮೂರ್ತಿ ಸ್ಥಾಪಿಸುವ ಆಯೋಜಕರು ನಗರಸಭೆಯಲ್ಲಿ ಏಕಗವಾಕ್ಷಿಯಡಿ ಅನುಮತಿ ಪತ್ರ ಪಡೆದು ಗಣೇಶ ಮೂರ್ತಿ ಸ್ಥಾಪಿಸಬೇಕು. ಪರಿಸರಕ್ಕೆ ಹಾನಿಯಾಗದಂತಹ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ತಹಶೀಲ್ದಾರ್ ಮಮತ ತಿಳಿಸಿದರು.
ಅವರು ನಗರಸಭೆ ಸಭಾಂಗಣದಲ್ಲಿ ಶನಿವಾರ ಗೌರಿ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಆಯೋಜಕರು ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಭಂಗ ಉಂಟಾಗದಂತೆ ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಆಚರಿಸಬೇಕು. ಕಂದಾಯ ಇಲಾಖೆ, ನಗರಸಭೆ, ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಇಂಧನ ಇಲಾಖೆ, ಅಗ್ನಿಶಾಮಕ ಇಲಾಖೆಯವರು ಒಂದೇ ಕಡೆ ಕಚೇರಿಯಲ್ಲಿರುತ್ತಾರೆ. ಅರ್ಜಿ ಸಲ್ಲಿಸುವ ಆಯೋಜಕರಿಗೆ ಒಂದೇ ಕಡೆ ಅನುಮತಿ ಪತ್ರ ದೊರಕುತ್ತದೆ. ಪೊಲೀಸ್ ಇಲಾಖೆ, ನಗರಸಭೆಯ, ಬೆಸ್ಕಾಂ ಇಲಾಖೆಯ, ತಾಲ್ಲೂಕು ಆಡಳಿತಕ್ಕೆ ಸಹಕರಿಸಬೇಕು. ಗಣೇಶ ಮೂರ್ತಿಯನ್ನು ಆಯೋಜಕರು ಷರತ್ತುಗಳಿಗೆ ಬದ್ಧರಾಗಿ ಸರಕಾರದ ಸುತ್ತೋಲೆ ಅನುಸರಿಸಬೇಕು. ಸಾರ್ವಜನಿಕ ಸುರಕ್ಷತೆ ಪರಿಸರ ಮಾಲಿನ್ಯ ಉಂಟಾಗದ ರಿತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಹೈ-ಟೆನ್ಷನ್ ತಂತಿ ಹಾದು ಹೋಗಿರುವ ಪ್ರದೇಶದಲ್ಲಿ ಯಾವುದೇ ಕಾಣಕ್ಕೂ ಗಣೇಶ ಮೂರ್ತಿಯನ್ನು ಸ್ಥಾಪಿಸಲು ಅನುಮತಿ ಇರುವುದಿಲ್ಲ. ಗಣೇಶ ಪ್ರತಿಷ್ಟಾಪನೆ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆ ಮತ್ತು ಬೀದಿಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಪೆಂಡಾಲ್ ನಿರ್ಮಿಸಬೇಕು ಎಂದು ತಿಳಿಸಿದರು.
ಡಿವೈಎಸ್‌ಪಿ ನವೀನ್ ಕುಮಾರ್ ಅವರು ಮಾತನಾಡಿ ಈ ಬಾರಿ ಕೋವಿಡ್ ಇಲ್ಲದ ಕಾರಣ ಜನರು ಸೇರಲು ನಿಬಂಧನೆ ಇಲ್ಲ. ಆದರೆ ಮೈಕ್‌ಗಳು, ಡಿಜೆಗಳಿಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಆದೇಶ ಪಾಲಿಸಬೇಕಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಆರ್ಕೇಷ್ಟಾç ಕಾರ್ಯಕ್ರಮ ಮಾಡುವಂತಿಲ್ಲ. ನಗರಸಭೆ ಸದಸ್ಯರು ತಮ್ಮ ವಾರ್ಡುಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸುವ ಆಯೋಜಕರಿಗೆ ತಾವೇ ಅವರನ್ನು ಕರೆದುಕೊಂಡು ಬಂದು ಅನುಮತಿ ಕೊಡಿಸಬೇಕು. ಎಲ್ಲರೂ ಒಟ್ಟಾಗಿ ಸೇರಿ ಗಣೇಶ ಗೌರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಎಂದರು.
ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಮಾತನಾಡಿ ನಗರದಲ್ಲಿ ಗಣೇಶನ ಮೂರ್ತಿ ಸ್ಥಾಪಿಸುವವರು ಯಾವುದೇ ಕಾರಣಕ್ಕೆ ಪ್ಲೆಕ್ಸ್ ಹಾಕುವಂತಿಲ್ಲ. ಮುಂದಿನ ಸಭೆಯಲ್ಲಿ ಪ್ಲೆಕ್ಸ್ ಹಾಕುವ ಬಗ್ಗೆ ಸಾಮಾನ್ಯ ಸಭೆ ಕರೆದು ದರವನ್ನು ನಿಗಧಿಪಡಿಸಲಾಗುವುದು ನಂತರ ಪ್ಲೆಕ್ಸ್ಗಳನ್ನು ಹಾಕಲು ಅನುಮತಿ ನೀಡಲಾಗುವುದು ಎಂದರು.
ಸಭೆಯಲ್ಲಿ ಪೌರಾಯುಕ್ತ ಶ್ರೀನಿವಾಸ್, ನಗರ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ, ಗ್ರಾಮಾಂತರ ಇನ್ಸ್ಪೆಕ್ಟರ್ ರವಿಕುಮಾರ್, ಬೆಸ್ಕಾಂ ಎಇಇ ಶಾಂತರಾಜು, ನಗರಸಭಾ ಸದಸ್ಯರಾದ ಎಸ್.ಎಲ್.ರಂಗನಾಥ್, ಲಕ್ಷ್ಮೀಕಾಂತ್, ಅಜಯ್‌ಕುಮಾರ್, ಉಮಾ ವಿಜಯರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.