ಸ್ಥಳೀಯ ಕಾರ್ಯಕರ್ತೆ ನೇಮಕಕ್ಕೆ ಒತ್ತಾಯಿಸಿ ಪಟ್ರೇಹಳ್ಳಿ ಅಂಗನವಾಡಿ ಕೇಂದ್ರಕ್ಕೆ 15 ದಿನಗಳಿಂದ ಬೀಗ : ಇಲಾಖೆಯ ಆದೇಶದ ವಿರುದ್ಧ ತಿರುಗಿ ಬಿದ್ಧಿರುವ ಪಟ್ರೇಹಳ್ಳಿ ಗ್ರಾಮಸ್ಥರು
ತಿಪಟೂರು : ಅಂಗನವಾಡಿ ಕಾರ್ಯಕರ್ತೆ ನಿವೃತ್ತಿಯ ನಂತರದಲ್ಲಿ ಸ್ವಗ್ರಾಮದವರನ್ನೇ ನೇಮಕ ಮಾಡಿಕೊಳ್ಳಬೇಕೇಂದು ಗ್ರಾಮಸ್ಥರು ಆಗ್ರಹಿಸಿ ಅಂಗನವಾಡಿಗೆ 15 ದಿನಗಳಿಂದ ಬೀಗ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಪಟ್ರೇಹಳ್ಳಿ ಗ್ರಾಮದಲ್ಲಿ ಪಟ್ರೇಹಳ್ಳಿ ಮತ್ತು ವಿಠಲಾಪುರ ಗ್ರಾಮಗಳಿಗೆ ಒಂದು ಅಂಗನವಾಡಿಯನ್ನು ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಕಳೆದ ಜೂನ್ ತಿಂಗಳಲ್ಲಿ ವಯೋನಿವೃತ್ತಿಯನ್ನು ಹೊಂದಿದ್ದಾರೆ. ಆದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹುಲಿಹಳ್ಳಿ ಗ್ರಾಮದ ಅಂಗನವಾಡಿ ಸಹಾಯಕಿಯನ್ನು ಬಡ್ತಿ ನೀಡಿ ಇಲಾಖೆಯ ಆದೇಶದ ಅನ್ವಯದಂತೆ ಪಟ್ರೇಹಳ್ಳಿಯ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಆದರೆ ಸ್ಥಳೀಯ ಪಟ್ರೇಹಳ್ಳಿ ಮತ್ತು ವಿಠಲಾಪುರ ಗ್ರಾಮದ ನಿವಾಸಿಗಳು ಇಲಾಖೆಯಿಂದ ಹೊಸದಾಗಿ ನೇಮಕಾತಿಗೆ ಆದೇಶ ಮಾಡಬೇಕು. ಸ್ಥಳೀಯ ಗ್ರಾಮದ ನಿವಾಸಿಯನ್ನೇ ಅಂಗನವಾಡಿ ಕಾರ್ಯಕರ್ತರನ್ನಾಗಿ ನೇಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಇಲಾಖಾ ಅಧಿಕಾರಿಗಳು ಒಪ್ಪದ ಕಾರಣ ಹಿಂದಿನ ಅಂಗನವಾಡಿ ಕಾರ್ಯಕರ್ತೆಯನ್ನೇ ಮುಂದುವರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ ಇಲಾಖೆ ನಿಯಮದ ಅನುಸಾರ ಜೂ.4 ರಂದು ಅಧಿಕಾರ ಹಸ್ತಾಂತರದ ವೇಳೆ ಸ್ಥಳೀಯರು ತಡೆದು ಅಂಗನವಾಡಿಗೆ ಬೀಗ ಹಾಕಿದ್ದಾರೆ.
ಆದರೆ ಇಲಾಯ ಮಾಹಿತಿ ಅನ್ವಯ ಪಟ್ರೇಹಳ್ಳಿಯ ಅಂಗನವಾಡಿಯೂ ಬಳುವನೆರಲು ವೃತ್ತದ ಸಾರ್ಥವಳ್ಳಿ ಪಂಚಾಯಿತಿಗೆ ಸೇರಲಿದ್ದು 3 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಇತರೆ ಅಂಗನವಾಡಿ ಸಹಾಯಕಿಗೆ ಬಡ್ತಿ ಕೊಡಲು ಅವಕಾಶ ಇದ್ದು ಅದರಂತೆ ನೇಮಕ ಮಾಡಲಾಗಿದೆ ಎನ್ನುತ್ತಿದ್ದಾರೆ. ಆದರೆ ವಾಸ್ತವಾಗಿ ಪಟ್ರೇಹಳ್ಳಿ ಅಂಗನವಾಡಿಗೂ ಹುಲಿಹಳ್ಳಿ ಅಂಗನವಾಡಿಗೂ ಸುಮಾರು 6 ಕಿ.ಮೀ.(6900 ಮೀಟರ್) ಅಂತರವಿದ್ದು ಹೇಗೆ ನೇಮಕ ಮಾಡಲಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.
ಕಳೆದ 15 ದಿನಗಳಿಂದ ಅಂಗನವಾಡಿಯ ಬಾಗಿಲು ತೆರೆಯದ ಕಾರಣ ಮಕ್ಕಳಿಗೆ ಪೌಷ್ಟಿಕ ಆಹಾರ ದೊರಕುತ್ತಿಲ್ಲ. ಜೊತೆಗೆ ಇಲಾಖೆಯಿಂದ ನೀಡುವ ಗರ್ಭಿಣಿ, ಬಾಣಂತಿ, ಕಿಶೋರಿಯರಿಗೆ ನೀಡುವಂತಹ ಪೌಷ್ಟಿಕ ಆಹಾರದ ಸರಬರಾಜು ನಿಂತಿದ್ದು ಇಲಾಖೆಯ ಕಾರ್ಯಗಳು ಸ್ಥಗಿತಗೊಂಡಿವೆ. ಆದರೆ ಇಲ್ಲಿಯವರೆವಿಗೂ ಯಾವುದೇ ಅಧಿಕಾರಿಗೂ ಅಂಗನವಾಡಿಯ ಬಳಿಗೆ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಪ್ರಟೇಹಳ್ಳಿ- ವಿಠಲಾಪುರ ಗ್ರಾಮದವರನ್ನು ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕ ಮಾಡುವುದರಿಂದ ಸ್ಥಳೀಯ ಮಾಹಿತಿಗಳು ಸಮರ್ಪಕವಾಗಿ ಲಭ್ಯವಿದ್ದು, ಬಿಡುವಿನ ಸಮಯದಲ್ಲಿಯೂ ಮಾಹಿತಿಗೆ ಅನುಕೂಲವಾಗಲಿದೆ. ಹೊರಗಿನಿಂದ ಬರುವುದರಿಂದ ಸಮಸ್ಯೆಗಳು ಹೆಚ್ಚಾಗಲಿದ್ದು ಕೂಡಲೇ ಆದೇಶ ಹಿಂಪಡೆದು ನೇಮಕಾತಿಗೆ ಆದೇಶಿಸಬೇಕು.
– ಪುಟ್ಟಸ್ವಾಮಿ, ಪಟ್ರೇಹಳ್ಳಿ ಗ್ರಾಮಸ್ಥ
ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇದಕ್ಕೂ ನಮಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ತಿಪಟೂರಿನ ಕಚೇರಿಯ ಮುಂಭಾಗದ ಧರಣಿ ಕೂರುವ ಅನಿವಾರ್ಯತೆ ಎದುರಾಗಲಿದೆ.
-ಭರತ್ ಕುಮಾರ್, ಪಟ್ರೇಹಳ್ಳಿ ಗ್ರಾಮಸ್ಥ
ಸಮಸ್ಯೆಯ ಬಗ್ಗೆ ಮಾಹಿತಿ ದೊರೆತಿದ್ದು 2 ದಿನಗಳ ಒಳಗಾಗಿ ಬಗೆಹರಿಸಲಾಗುವುದು.
– ಪಿ.ಓಂಕಾರಪ್ಪ, ಸಿಡಿಪಿಓ, ತಿಪಟೂರು