ದಕ್ಷ ಅಧಿಕಾರಿ ತಹಶೀಲ್ದಾರ್ ಮಮತ ವರ್ಗಾವಣೆ ಮಾಡಲು ಹುನ್ನಾರ : ವರ್ಗಾವಣೆ ಮಾಡಿದರೆ ಹೋರಾಟ : ನಾದೂರು ಕೆಂಚಪ್ಪ
ಶಿರಾ : ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಶೀಬಿ, ಶೀಬಿ ಅಗ್ರಹಾರ ಗ್ರಾಮಗಳ ಸುಮಾರು 732 ಎಕರೆ ಅರಣ್ಯ ಭೂಮಿಯನ್ನು ಭೂಗಳ್ಳರು ಜಮೀನುಗಳನ್ನು ಕಬಳಿಸಲು ಹಾಕಿದ್ದ ಹೊಂಚನ್ನು ವಿಫಲಗೊಳಿಸಿರುವ ತಹಶೀಲ್ದಾರ್ ಮಮತ ಅವರನ್ನು ವರ್ಗಾವಣೆ ಮಾಡಲು ಶಾಸಕರು, ಸಂಸದರು, ಎಂಎಲ್‌ಸಿಗಳು ಹುನ್ನಾರ ನಡೆಸುತ್ತಿದ್ದಾರೆ. ಇವರು ದಕ್ಷ ಅಧಿಕಾರಿಗಳ ಪರ ಇದ್ದಾರೋ? ಇಲ್ಲ ಭೂಗಳ್ಳರ ಪರ ಇದ್ದಾರೋ ಎಂದು ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಆರೋಪಿಸಿದರು.
ಈ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
ಕಳ್ಳಂಬೆಳ್ಳ ಹೋಬಳಿಯ ಶೀಬಿ, ಶೀಬಿ ಅಗ್ರಹಾರ ಗ್ರಾಮಗಳ ಸುಮಾರು 732 ಎಕರೆ ಅರಣ್ಯ ಭೂಮಿಯನ್ನು ಪವತಿ ಆಧಾರದ ಮೇಲೆ ಖಾತೆ ಮಾಡಿಕೊಡುವಂತೆ ಶಿರಾ ನಗರ, ಶೀಬಿ, ಶೀಬಿ ಅಗ್ರಹಾರ ಗ್ರಾಮಸ್ಥರು ಅರ್ಜಿ ಸಲ್ಲಿಸಿರುವುದನ್ನು ತಾಲ್ಲೂಕು ದಂಡಾಧಿಕಾರಿಗಳಾದ ಮಮತ ಹಾಗೂ ಅರಣ್ಯಾಧಿಕಾರಿಗಳಾದ ರಾಧಾ ಅವರು ಸಮಗ್ರವಾಗಿ ತನಿಖೆ ಮಾಡಿ ಸದರಿ ಜಮೀನುಗಳು ಅರಣ್ಯ ಪ್ರದೇಶದಲ್ಲಿವೆ ಎಂದು ಅರ್ಜಿಯನ್ನು ವಜಾಗೊಳಿಸಿ ದೊಡ್ಡ ಭೂ ಹಗರಣವನ್ನು ತಡೆದಿರುವ ತಹಶೀಲ್ದಾರ್ ಮಮತ ಅವರ ಕಾರ್ಯ ಅಭಿನಂದನಾರ್ಹ. ಆದರೆ ತಾಲ್ಲೂಕು ಕಚೇರಿಯ ಪಡಸಾಲೆಯಲ್ಲಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಬ್ಬ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಶಾಸಕರು, ಎಂಎಲ್‌ಸಿಗಳು ಹಾಗೂ ಸರಕಾರ ವರ್ಗಾವಣೆ ಮಾಡಲು ಹೊರಟಿದ್ದಾರೆ ಎಂದರೆ ಇವರು ಯಾರ ಪರ ಇದ್ದಾರೆ. ಪ್ರಾಮಾಣಿಕರ ಪರ ಇದ್ದಾರೋ ಅಥವಾ ಭೂಗಳ್ಳರ ಪರ ಇದ್ದಾರೋ ಎಂದು ಪ್ರಶ್ನಿಸಿದ ಅವರು ಒಂದು ವೇಳೆ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿದರೆ ಎಲ್ಲಾ ಜನಪರ ಸಂಘಟನೆಯ ಹೋರಾಟಗಾರರು ಉಗ್ರ ಹೋರಾಟ ಮಾಡುತ್ತೇವೆ. ನಾವೆಲ್ಲಾ ಹೋರಾಟಗಾರರು ಅನ್ಯಾಯದ ವಿರುದ್ಧ, ರೈತ ಪರವಾಗಿ ನ್ಯಾಯ ಕೊಡಿಸಲು ಹೋರಾಟ ಮಾಡುತ್ತಾ ಬಂದಿದ್ದೇವೆ. ಅದೇ ರೀತಿ ಪ್ರಮಾಣಿಕ ಅಧಿಕಾರಿಗಳ ಪರವಾಗಿಯೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರರು ಹಾಗೂ ಎಎಪಿ ಪಕ್ಷದ ಮುಖಂಡರಾದ ಗೋಮಾರದನಹಳ್ಳಿ ಮಂಜುನಾಥ್ ಮಾತನಾಡಿ ಸುಮಾರು 732 ಎಕರೆ ಜಮೀನನ್ನು ರಕ್ಷಿಸಿದ ತಹಶೀಲ್ದಾರ್ ಮಮತ ಮತ್ತು ಅರಣ್ಯಾಧಿಕಾರಿ ರಾಧಾ ಅವರನ್ನು ಶಿರಾ ಜನತೆಯ ಪರವಾರಿ ಅಭಿನಂದಿಸುತ್ತೇವೆ. ಆದರೆ ಈಗಿನ ಸರಕಾರ ತಹಶೀಲ್ದಾರ್ ಅವರನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆಸುತ್ತಿವೆ ಇದನ್ನು ನಾವು ಖಂಡಿಸುತ್ತೇವೆ. ಯಾವುದೇ ಕಾರಣಕ್ಕೂ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಬಾರದು. ಒಂದು ವೇಳೆ ವರ್ಗಾವಣೆ ಮಾಡಿದರೆ ಶಾಸಕರು, ಸಂಸದರ ಸಭೆಗಳಿಗೆ ಘೇರಾವ್ ಹಾಕುತ್ತೇವೆ ಎಂದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಟೈರ್ ರಂಗನಾಥ್ ಮಾತನಾಡಿ ಶಿರಾ ತಾಲ್ಲೂಕಿನ ಮೇಲೆ ಈಗಾಗಲೇ ಭೂಗಳ್ಳರ ಕಣ್ಣು ಬಿದ್ದಿದೆ ಇತ್ತಿಚೆಗಷ್ಟೆ ತಹಶೀಲ್ದಾರ್ ಮಮತ ಅವರು ಮರಡಿಗುಡ್ಡದ ಹೊನ್ನೇನಹಳ್ಳಿ ಬಳಿ ಅಕ್ರಮವಾಗಿ ಸಾಗುವಳಿ ರೈತರ ಜಮೀನುಗಳನ್ನು ವಶಪಡಿಸಿಕೊಂಡಿದ್ದರು ಅಂತಹವರ ಮೇಲೆ ದಾಳಿ ಮಾಡಿ ರೈತರಿಗೆ ಜಮೀನುಗಳನ್ನು ವಾಪಸ್ಸು ಕೊಡಿಸುವ ಕಾರ್ಯವನ್ನು ದಕ್ಷ ತಹಶೀಲ್ದಾರ್ ಮಮತ ಅವರು ಮಾಡಿದ್ದಾರೆ. ಶಿರಾ ತಾಲ್ಲೂಕಿನಲ್ಲಿರುವ ಅರಣ್ಯ ಭೂಮಿ, ಗೋಮಾಳ ಉಳಿಸುವ ಕಾರ್ಯವಾಗಬೇಕು. ಆದ್ದರಿಂದ ಇಂತಹ ಅಧಿಕಾರಿಗಳು ಶಿರಾ ತಾಲ್ಲೂಕಿಗೆ ಬೇಕು ಮತ್ತು ಈಗಾಗಲೇ ಅರಣ್ಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಅವರನ್ನು ಮತ್ತೊಮ್ಮೆ ಶಿರಾಕ್ಕೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಎಲ್ಲಾ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಗದೀಶ್, ಗುರುಮೂರ್ತಿ, ಯರಗುಂಟೆ ನಟರಾಜಪ್ಪ, ಕೃಷ್ಣಮೂರ್ತಿ, ಭೂತೇಶ್, ದಲಿತ ಸಂಘರ್ಷ ಸಮಿತಿಯ ಶಿವಾಜಿನಗರ ತಿಪ್ಪೇಸ್ವಾಮಿ, ಕಾರ್ತಿಕ್, ಜಯರಾಜ್, ತಿಪ್ಪೇಶ್ ಸೇರಿದಂತೆ ಹಲವರು ಹಾಜರಿದ್ದರು.