ಅಟ್ರಾಸಿಟಿ ಕಾಯ್ದೆ ದುರ್ಬಲಗೊಳಿಸುತ್ತಿರುವ ಡಿ.ವೈ.ಎಸ್.ಪಿ. ರಮೇಶ್ : ದ.ಸಂ.ಸ ಆರೋಪ
ದಲಿತ ವಿರೋಧಿ ಪೇದೆ ಸಂತೋಷ್ ಎತ್ತಂಗಡಿಗೆ ಒತ್ತಾಯ
ತುರುವೇಕೆರೆ : ದಲಿತರ ದೌರ್ಜನ್ಯ ನಡೆಸುವವರ ವಿರುದ್ದ ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಳ್ಳದ ಕುಣಿಗಲ್ ಡಿ.ವೈ.ಎಸ್.ಪಿ. ರಮೇಶ್ ಕರ್ತವ್ಯ ನಿರ್ಲಕ್ಷ್ಯ ಮಾಡುವ ಮೂಲಕ ದಲಿತವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದ,ಸಂ.ಸ. ಮುಖಂಡ ಜಗದೀಶ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಛಲವಾದಿ ಮಹಾಸಭಾ ಹಾಗೂ ದ.ಸಂ.ಸ. ವತಿಯಿಂದ ಕರೆಯಲಾಗಿದ್ದ ಜಂಟಿಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ಕುಣಿಗಲ್ ಡಿ.ವೈ.ಎಸ್.ಪಿ. ರಮೇಶ್ ದೌರ್ಜನ್ಯ ನಡೆಸಿದ ಆರೋಪಿ ಕಣ್ಮುಂದೆ ಇದ್ದರೂ ಬಂದಿಸುವುದಿಲ್ಲ, ಆರೋಪಿಯ ನಾಪತ್ತೆಗಾಗಿ ಎಫ್.ಐ. ಆರ್. ದಾಖಲಿಸಲು ವಿಳಂಬ ಮಾಡುತ್ತಾರೆ, ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸುತ್ತಿರುವ ಡಿ.ವೈ.,ಎಸ್.ಪಿ. ರಮೇಶ್ ರವರಿಂದಲೇ ದೌರ್ಜನ್ಯಕ್ಕೊಳಗಾದ ದಲಿತರು ಕಿರುಕುಳ ಅನುಭವಿಸುವಂತಾಗಿದೆ. ತಾಲೂಕಿನಲ್ಲಿ 2020 ರಿಂದ ಇಲ್ಲಿಯವರೆಗೆ 7 ಪ್ರಕರಣಗಳು ದಾಖಲಾಗಿದ್ದು, ಇತ್ತೀಚೆಗೆ ನರಿಗೆಹಳ್ಳಿ ಗ್ರಾಮದ ದಲಿತ ಹಟ್ಟಪ್ಪ ಎಂಬುವರ ಜಮೀನಿಗೆ ಅತಿಕ್ರಮ ಪ್ರವೇಶಿಸಿ ಬೆದರಿಸಿದ ಸವರ್ಣೀಯನ ವಿರುದ್ದ ಕ್ರಮ ಕೈಗೊಂಡಿಲ್ಲ, ದಲಿತ ವಿರೋಧಿ ಡಿ.ವೈ.ಎಸ್.ಪಿ ವಿರುದ್ದ ಇಲಾಖೆ ಕ್ರಮವಹಿಸಲಿ ಇಲ್ಲವಾದಲ್ಲಿ ಶೀಘ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ದೌರ್ಜನ್ಯ ನಡೆದ ದಲಿತರು ಡಿ.ವೈ.ಎಸ್.ಪಿ.ಕಚೇರಿಯ ಪೇದೆ ಸಂತೋಷ್ ಹೇಳಿದಂತೆ ದೂರು ಬರೆಯಬೇಕೆಂದು ಕಟ್ಟಪ್ಪಣೆ ಹೊರಡಿಸುತ್ತಾರೆ. ಸುಮಾರು ವರ್ಷಗಳಿಂದ ಡಿ.ವೈ.ಎಸ್.ಪಿ.ಕಚೇರಿಯಲ್ಲಿ ಬೀಡು ಬಿಟ್ಟಿರುವ ಪೇದೆ ಸಂತೋಷ್ ಪರೋಕ್ಷವಾಗಿ ದಲಿತ ವಿರೋಧಿಯಾಗಿದ್ದಾರೆ. . ಜಿಲ್ಲಾ ಎಸ್.ಪಿ. ಯವರು ಪೇದೆ ಸಂತೋಷ್‌ನ್ನು ಎತ್ತಂಗಡಿ ಮಾಡಿ ದಲಿತರ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಗೋಷ್ಟಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಹನುಮಂತಯ್ಯ, ಛಲವಾದಿ ಮಹಾಸಭಾ ಅಧ್ಯಕ್ಷ ರಾಮಯ್ಯ, ಪುರ ರಾಮಚಂದ್ರು, ಮಂಜುನಾಥ್, ಹಟ್ಟಪ್ಪ, ಲಕ್ಷ್ಮೀನರಸಿಂಹಯ್ಯ, ಬಾಳೆಕಾಯಿಶೇಖರ್, ಮುರುಳಿ ಮತ್ತಿತರಿದ್ದರು.