ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಲು ಎಐಡಿಎಸ್‌ಓ ಆಗ್ರಹ
ತುಮಕೂರು : ರಾಜ್ಯದ ಎರಡನೇ ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪಾಸ್ ಅನ್ನು ಸೆಪ್ಟೆಂಬರ್ 2021ರಲ್ಲಿ ನೀಡಲಾಗಿತ್ತು. ಆದರೆ ತರಗತಿಗಳು ನವೆಂಬರ್‌ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021 ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸಿಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ. ಇದು ಇಷ್ಟು ವರ್ಷಗಳವರೆಗೂ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಅಂದರೆ, ನವಂಬರ್‌ನಲ್ಲಿ ತರಗತಿ ಆರಂಭದ ನಂತರ ಪಾಸ್ ಪಡೆದ ವಿದ್ಯಾರ್ಥಿಗಳು ಆಗಸ್ಟ್ನವರೆಗೂ, ಡಿಸೆಂಬರ್‌ನಲ್ಲಿ ಪಾಸ್ ಪಡೆದ ವಿದ್ಯಾರ್ಥಿಗಳು ಸೆಪ್ಟೆಂಬರ್‌ವರೆಗೂ ಉಚಿತವಾಗಿ ಓಡಾಡಬಹುದು. ಆದರೆ, ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಏಕಾಏಕಿ ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್ ಪಾಸಿನ ಅವಧಿಯು ಕೊನೆಗೊಳ್ಳಲಿರುವುದರಿಂದ ಮುಂದಿನ ತಿಂಗಳಿನಿಂದ ಹಣ ಪಾವತಿಸಿ ಓಡಾಡಬೇಕು ಎಂದು ಹೇಳಿದೆ. ನಿಗಮದ ಈ ನಿರ್ಧಾರವನ್ನು ಎಐಡಿಎಸ್‌ಓ ಜಿಲ್ಲಾ ಸಮಿತಿಯು ಖಂಡಿಸಿ ಇಂದು ತುಮಕೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಮಾತನಾಡಿ, ಮೊದಲನೆಯದಾಗಿ, ಹಲವು ವರ್ಷಗಳ ಹೋರಾಟದ ಫಲವಾಗಿ ವಿದ್ಯಾರ್ಥಿಗಳು ರಿಯಾಯಿತಿ ಪಾಸ್‌ಅನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ, ನಮ್ಮ ಹೋರಾಟ ಉಚಿತ ಪಾಸ್ ನೀಡಬೇಕು ಎಂಬುದೇ ಆಗಿದೆ. ಹೀಗಿರುವಾಗ, ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ, ಮಾನ್ಯತೆ ರದ್ದಾಗಿದೆ ದುಡ್ಡು ಕೊಟ್ಟು ಓಡಾಡಬೇಕು ಎಂಬುದು ಅತ್ಯಂತ ವಿದ್ಯಾರ್ಥಿ ವಿರೋಧಿ ಮತ್ತು ಅಪ್ರಜಾತಾಂತ್ರಿಕ. ಈಗಾಗಲೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿ.ಎಂ.ಟಿ.ಸಿ)ಯು ವಿದ್ಯಾರ್ಥಿಬಸ್ ಪಾಸಿನ ಅವಧಿಯನ್ನು ಆಗಸ್ಟ್ನವರೆಗೆ ವಿಸ್ತರಣೆ ಮಾಡಿದೆ. ಇದನ್ನೇ ತುಮಕೂರು ಜಿಲ್ಲೆಯ ಸಾರಿಗೆ ಸಂಸ್ಥೆಯೂ ಅನುಸರಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಬೇಕು, ಈಗಾಗಲೇ ಪಾಸ್ ಮುಂದುವರಿಕೆಗೆ ಹಣ ಪಾವತಿಸಿರುವ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಬೇಕು ಮತ್ತು ಬೇಷರತ್ತಾಗಿ ವಿದ್ಯಾರ್ಥಿ ಪಾಸಿನ ಅವಧಿಯನ್ನು ವಿಸ್ತರಣೆ ಮಾಡುವಂತೆ ಸಾರಿಗೆ ಸಂಸ್ಥೆ ನಿರ್ದೇಶನವನ್ನು ನೀಡಬೇಕೆಂದು ಆಗ್ರಹಿಸಿದರು.
ಈ ಕುರಿತು ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್‌ರವರಿಗೆ ಮನವಿಪತ್ರ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮದ ಈ ನಿರ್ಧಾರದ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಮತ್ತು ರಾಜ್ಯ ಸಾರಿಗೆ ನಿಗಮಕ್ಕ ಈ ಕೂಡಲೇ ಸಮಸ್ಯೆಯನ್ನು ಪರಿಹರಿಸದಿದ್ದರೆ ಮುಂದೆ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಲಾಯಿತು.