ಶಿಕ್ಷಣ ವ್ಯವಸ್ಥೆ ಅಂಕಗಳಿಕೆಗೆ ಮಾತ್ರ ಸೀಮೀತವಾಗಿ ಗುಣಮಟ್ಟ ಹಾಗೂ ಮೌಲ್ಯಗಳು ಕುಸಿದಿವೆ : ರಂಗಾಪುರ ಶ್ರೀಗಳ ಅಭಿಮತ

ತಿಪಟೂರು : ಇಂದಿನ ಯುವಕರು ನಮ್ಮ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನ ನಿರ್ಲಕ್ಷಿಸುವುದನ್ನು ಬಿಟ್ಟು ಹೆತ್ತವರು, ವಿದ್ಯೆ ಕಲಿಸಿ ಬುದ್ದಿ ಹೇಳಿದ ಗುರು ಹಾಗೂ ಸಮಾಜ ಮತ್ತು ಭಕ್ತರನ್ನು ಸದಾ ತಿದ್ದುವ ಕಾಯಕ ಮಾಡುತ್ತಿರುವ ಗುರುಗಳನ್ನ ಸ್ಮರಿಸುವ ಮೂಲಕ ಸುಂಸೃತರಾಗಿ ಉತ್ತಮ ಬದುಕನ್ನ ಅಳವಡಿಸಿಕೊಂಡು ತಮ್ಮ ಹಾಗೂ ದೇಶದ ಭವಿಷ್ಯವನ್ನ ಉಜ್ವಲಗೊಳಿಸಬೇಕೆಂದು ಕೆರಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಕರೆ ನೀಡಿದರು.
ಕಲ್ಪತರು ನಾಡಿನ ಪ್ರಸಿದ್ಧ ಸುಕ್ಷೇತ್ರ ಕೆರೆಗೋಡಿ-ರಂಗಾಪುರ ಶ್ರೀಮಠದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮೂಲ ಗುರುಗಳ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇಂದಿನ ಶಿಕ್ಷಣ ಕೇವಲ ಅಂಕಗಳಿಕೆ ಹಾಗೂ ಉದ್ಯೋಗಕ್ಕೆ ಮಾತ್ರ ಸೀಮೀತವಾಗಿ ಶಿಕ್ಷಣದ ಗುಣಮಟ್ಟ ಹಾಗೂ ಮೌಲ್ಯಗಳು ಕುಸಿತ ಕಂಡಿದೆ. ಶಿಕ್ಷಣ ಮೊದಲು ಮನುಷ್ಯನಿಗೆ ಸಂಸ್ಕೃತಿ, ಸಂಸ್ಕಾರ, ನೈತಿಕ ಮೌಲ್ಯಗಳು, ದೇಶಭಕ್ತಿ, ದೇಶಪ್ರೇಮ, ಭಾಷಾ ಪ್ರೇಮ ಮತ್ತು ಗುರುಹಿರಿಯರಿಗೆ ನೀಡಬೇಕಾದ ಗೌರವಗಳನ್ನ ಕಲಿಸಿಕೊಡಬೇಕಾಗಿತ್ತು. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕೇವಲ ಹಣ ಮಾಡುವ ದಂಧೆಯಾಗಿದೆ. ಪಠ್ಯಗಳಲ್ಲಿ ಬೇಕು ಬೇಡವಾದುಗಳನ್ನೆಲ್ಲಾ ಜಾತಿ, ರಾಜಕೀಯ ಮತ್ತಿತರೆ ಹೆಸರಿನಲ್ಲಿ ತೂರಿಸಲಾಗುತ್ತಿದೆ. ಈಗ ಲಂಚ ಕೊಟ್ಟು ಯಾವುದೇ ಡಾಕ್ಟರೇಟ್ ಪದವಿ ಅಥವಾ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನ ಕೊಂಡುಕೊಳ್ಳಬಹುದಾಗಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಈ ಸಮಾರಂಭದಲ್ಲಿ ನಮ್ಮ ಸಂಸ್ಥೆಯ ಶಾಲಾ ಕಾಲೇಜಿನಲ್ಲಿ ಓದಿ ಈಗ ನಂದೀಗುಡಿ ಶ್ರೀ ಮಠದ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಯವರಿಗೆ ಹಾಗೂ ್ಲ ನಮಗೂ ವಿದ್ಯೆ ಕಲಿಸಿದ ನಮ್ಮ ಸಂಸ್ಥೆಯ ಶಿಕ್ಷಕರುಗಳಿಗೂ ಒಟ್ಟಿಗೇ ಗುರುವಂದನೆಯನ್ನ ಹಿರಿಯ ವಿದ್ಯಾರ್ಥಿ ಸಂಘದವರು ಹಮ್ಮಿಕೊಂಡಿರುವುದು ಬಹಳ ವಿಶೇಷವಾಗಿದೆ. ನಮ್ಮ ಶ್ರೀಮಠದ ಮೂಲಗುರುಗಳ ಜಯಂತಿ ಆಚರಣೆಯೂ ಇದೇ ದಿವಸ ಇದ್ದು ಅವರ ಕೃಪೆ ನಮಗೆ, ನಿಮಗೆಲ್ಲಾ ಇದ್ದು ಎಲ್ಲರೂ ಸುಖ-ಶಾಂತಿಯಿAದ ಜೀವನ ನಡೆಸಲಿ. ದೇಶದಲ್ಲಿ ಪ್ರಸ್ತುತ ಇರುವ ಅಶಾಂತಿಯ ದಿನಗಳು ಮಾಯವಾಗಿ ಸದಾ ಸಾಂತಿ ನೆಲಸಲಿ ಎಂದು ಶ್ರೀಗಳು ಆಶಿಸಿದರು.
ಗುರುವಂದನೆ ಸ್ವೀಕರಿಸಿ, ಆಶೀರ್ವಚನ ನೀಡಿದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ ನಾನು ಬಾಲ್ಯದಲ್ಲಿ ವಿದ್ಯೆ ಕಲಿಯಲು ರಂಗಾಪುರ ಶ್ರೀಮಠಕ್ಕೆ ಸೇರಿಕೊಂಡಿದ್ದೆ. ನಂತರ ನಾನು ನಂದೀಗುಡಿ ಶ್ರೀ ಮಠಕ್ಕೆ ಆಕಸ್ಮಿಕವಾಗಿ ಸ್ವಾಮೀಜಿಯಾಗಬೇಕಾಯಿತು. ಅಂದಿನಿAದ ಈವರೆಗೆ ಕೆರೆಗೋಡಿ-ರಂಗಾಪುರ ಶ್ರೀಗಳು ನನಗೆ ಎಲ್ಲ ರೀತಿಯ ಆಶೀರ್ವಾದ, ಸಹಕಾರ ನೀಡುತ್ತಿದ್ದಾರೆ. ಇದೇ ಸಂಸ್ಥೆಯಲ್ಲಿ ನಾನು ಶಿಕ್ಷಣ ಪಡೆದಿದ್ದು, ಅಂದಿನ ನನ್ನ ಸಹಪಾಠಿಗಳು ಇಂದು ನನ್ನನ್ನ ಇಲ್ಲಿಗೆ ಕರೆದು ಗುರುವಂದನೆ ನೀಡುತ್ತಿರುವುದು ಹಾಗೂ ನನಗೆ ವಿದ್ಯೆ ಕಲಿಸಿದ್ದ ಶಿಕ್ಷಕರುಗಳಿಗೆ ಮತ್ತು ಎಲ್ಲಕ್ಕಿಂತ ನನಗೆ ಅಂದು ಆಶ್ರಯದಾತರಾಗಿದ್ದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರ ಜೊತೆ ಗುರುವಂದನೆ ಸ್ವೀಕರಿಸುತ್ತಿರುವುದು ಅತ್ಯಂತ ಸಂತೋಷ ತಂದಿದೆ. ಪ್ರತಿಯೊಬ್ಬರೂ ಯಾವುದೇ ಸ್ಮರಣಾರ್ಥಕ ಸೇವೆ, ಕೆಲಸ ಕಾರ್ಯಗಳನ್ನ ನೆನೆಸಿಕೊಳ್ಳುವುದು ಶ್ರೇಷ್ಠ ಕೆಲಸ ಎಂದರು.
ನುಡಿನಮನ ಸಲ್ಲಿಸಿದ ಸಾಹಿತಿ ಕಿರಣ್ ಸಿಡ್ಲೇಹಳ್ಳಿ ಕೆರೆಗೋಡಿ-ರಂಗಾಪುರ ಶ್ರೀಮಠ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನಾಶ್ರಯ ನೀಡಿ ವಿದ್ಯೆ ನೀಡಿ ಮನುಷ್ಯರನ್ನಾಗಿ ಮಾಡಿದೆ. ಈಗಿನ 7ನೇ ಶ್ರೀಗಳು ಕಾಯಕಯೋಗಿಗಳಾಗಿದ್ದು ಅವರ ಅವದಿಯಲ್ಲಿ ಇಲ್ಲಿನ ವಿದ್ಯಾಸಂಸ್ಥೆ ಬೃಹದಾಕಾರವಾಗಿ ಬೆಳೆದು ಕಡುಬಡವರಿಗೆ, ಗ್ರಾಮೀಣರಿಗೆ ಎಲ್ಲ ರೀತಿಯ ನೆರವು ನೀಡಿ ವಿದ್ಯೆ, ಸಂಸ್ಕಾರ ಜೊತೆಗೆ ಬದುಕನ್ನ ಕಟ್ಟಿಕೊಳ್ಳಲು ದಾರಿದೀಪವಾಗಿದ್ದಾರೆ ಎಂದರು.
ಪೊಲೀಸ್ ಅಧಿಕಾರಿ ದಿನೇಶ್ ಪಾಟೀಲ್ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಿ. ಶಿಕ್ಷಕರುಗಳಾದ ಹೆಚ್. ಎನ್. ಪಾಲಾಕ್ಷಯ್ಯ, ಜೆ.ಹೆಚ್. ಷಡಕ್ಷರಯ್ಯ, ಬಿ. ಗುರುಚನ್ನಬಸಪ್ಪ ಸೇರಿದಂತೆ 50ಕ್ಕೂ ಹೆಚ್ಚು ನಿ. ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು.
ಸಮಾರಮಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯು.ಕೆ. ಶಿವಪ್ಪ, ಉಪಾಧ್ಯಕ್ಷ ಯು.ಎಸ್. ಬಸವರಾಜು, ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ನಿ. ಪ್ರಾಂಶುಪಾಲ ಕೆ.ಆರ್. ಶಂಕರಪ್ಪ, ಆಡಳಿತಾಧಿಕಾರಿ ಭದ್ರಪ್ಪ, ಯು.ಎಸ್. ಲೋಕೇಶ್, ಶ್ರೀಮಠದ ಡಿ.ಹೆಚ್. ಗಂಗಣ್ಣ ಬೋರ್‌ವೆಲ್ ಮಧು, ಸಮಾಜಸೇವಕ ಶಾಂತಕುಮಾರ್ ಸೇರಿದಂತೆ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ಮುಂತಾದವರಿದ್ದರು.