ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಮಲೇರಿಯಾ ನಿಯಂತ್ರಣ ಸಾಧ್ಯ; ಡಾ.ಪುರುಷೋತ್ತಮ್
ಶಿರಾ ತಾಲ್ಲೂಕು ಬೇವಿನಹಳ್ಳಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ
ಶಿರಾ : ಪರಿಸರ ಸ್ವಚ್ಛತೆ ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಮಲೇರಿಯಾ ನಿಯಂತ್ರಣ ಸಾಧ್ಯ, ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಣ ಮಾಡಲು ಚಿಕ್ಕ-ಚಿಕ್ಕ ಜಾಗಗಳಲ್ಲಿ ಬಹುದಿನಗಳಿಂದ ನಿಂತ ನೀರನ್ನು ನಿಲ್ಲದಂತೆ ನೋಡಿಕೊಳ್ಳುವುದು ನಮ್ಮ-ನಿಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪುರುಷೋತ್ತಮ್ ಹೇಳಿದರು.
ಅವರು ಬೇವಿನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮೈತುಂಬ ಬಟ್ಟೆ ಹಾಕಿಕೊಂಡು ಹಾಗೂ ರಾತ್ರಿ ಸಂದರ್ಭದಲ್ಲಿ ಸೊಳ್ಳೆ ಪರೆದೆಗಳನ್ನು ಹಾಕಿ ಮಲಗಿಕೊಳ್ಳುವಂತಹ ಸಂಪ್ರದಾಯ ರೂಡಿಸಿಕೊಂಡರೆ ರೋಗ ಹರಡದಂತೆ ತಡೆಯಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಮನೆಗಳಲ್ಲಿ ಸೊಳ್ಳೆ ನಿಯಂತ್ರಣದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಗ್ರಾಪA ಅಧ್ಯಕ್ಷ ಮೂಡ್ಲೆ ಗೌಡ ಮಾತನಾಡಿ ರೋಗಗಳು ಹರಡದಂತೆ ನಮ್ಮ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಕೂಡ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ್ದು ಪೌರಕಾರ್ಮಿಕರು ಹೆಚ್ಚು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಾರೆ. ಗ್ರಾಮ ಮತ್ತು ಬೀದಿಗಳು ಸದಾ ಸ್ವಚ್ಛತೆಯಿಂದ ಇರಬೇಕೆಂದರೆ ಜನರ ಸಹಕಾರ ಅಗತ್ಯ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ನಮ್ಮ ಪಂಚಾಯತಿ ಕಾರ್ಮಿಕರೊಂದಿಗೆ ಸಾರ್ವಜನಿಕರು ಕೂಡ ಕೈ ಜೋಡಿಸಿದಾಗ ಮಾತ್ರ ಮಲೇರಿಯಾದಂತಹ ರೋಗ ನಿಯಂತ್ರಣ ಸಾಧ್ಯ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣ ಮೇಲ್ವಿಚಾರಕರಾದ ಸತೀಶ್, ಪುಟ್ಟಯ್ಯ, ವೈದ್ಯಾಧಿಕಾರಿ ಡಾ. ತಿಮ್ಮರಾಜು, ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಕಿ ಮುದ್ದ ರಾಜಮ್ಮ, ಪಿಡಿಒ ಕನಕಪ್ಪ ,
ನಿರಂಜನ್, ಕಿಶೋರ್, ಶಿಕ್ಷಕರಾದ ಮಹಮ್ಮದ್ ರಶೀದ್ ,ಹರೀಶ್, ಲಕ್ಷ್ಮೀದೇವಮ್ಮ, ರಮಕಾಂತ್ ಅನುರಾಧ, ಲಲಿತ ಮುಖಂಡರಾದ ನಾಗರಾಜು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ತಿಮ್ಮಯ್ಯ ಸೇರಿದಂತೆ ಹಲವಾರು ಆಶಾ ಕಾರ್ಯಕರ್ತರು ಆರೋಗ್ಯ ಕಾರ್ಯಕರ್ತರು ವಿದ್ಯಾರ್ಥಿಗಳು ಭಾಗವಹಿಸಿದ್ದರು.