ತುಮಕೂರು : ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದವರಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ದೊಡ್ಡಶಕ್ತಿಯಾಗಿದ್ದರು. ಅವರು ನಂಬಿದವರನ್ನು ಎಂದೂ ಕೈಬಿಡದೆ ಜೊತೆಯಲ್ಲಿ ಕರೆದೊಯ್ಯುತ್ತಿದ್ದರು ಎಂದು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಹೇಳಿದ್ದಾರೆ.
ತುಮಕೂರಿನ ಕನ್ನಡಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ದರೈಸ್ತ್ರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತಿದ್ದ ಅವರು,ಬಿ.ಕೃಷ್ಣಪ್ಪ ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇತ್ತು. ದಲಿತ ಸಂಘರ್ಷ ಸಮಿತಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಹಾಕಿದರು. ಪ್ರತಿ ಬಾರಿ ನನ್ನನ್ನು ಭೇಟಿ ಆಗಲು ಬಂದಾಗ ಅವರು 10 ಫೈಲುಗಳನ್ನು ಜೊತೆಯಲ್ಲಿ ತರುತ್ತಿದ್ದರು. ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಬಿ.ಕೃಷ್ಣಪ್ಪ ಅವರಂತೆಯೇ ಬರಗೂರು ರಾಮಚಂದ್ರಪ್ಪನವರು ಚಳವಳಿಗಳಿಗೆ ಸ್ಪೂರ್ತಿ ತುಂಬುವಂತಹ ಕೆಲಸ ಮಾಡಿದರು. ಸಾಹಿತಿಯಾಗಿ, ಬಂಡಾಯ ಸಾಹಿತ್ಯ ಸಂಘಟನೆಯನ್ನು ಮುನ್ನಡೆಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಹಾಗೆಯೇ ಕತೆ-ಚಿತ್ರಕಥೆ, ಗೀತರಚನಾಕಾರರಾಗಿ ಹೆಸರು ಮಾಡಿದರು.ಪುಸ್ತಕ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. ಅವರೆಲ್ಲಿಯೂ ಹೆಸರು ಕೆಡಿಸಿಕೊಳ್ಳುವಂತಹ ಕೆಲಸ ಮಾಡಲಿಲ್ಲ.ನನ್ನ ಗುರುಗಳಾದ ಎಲ್.ಜಿ.ಹಾವನೂರ್ ಹೇಳುತ್ತಿದ್ದರು,ವ್ಯಕ್ತಿ ಹೇಗೆ ಎಂಬುದನ್ನು ತಿಳಿದುಕೊಳ್ಳಲು ಅಧಿಕಾರ ಕೊಟ್ಟು ನೋಡು ಎನ್ನುತ್ತಿದ್ದರು. ಹಾಗೆಯೇ ಬರಗೂರು ರಾಮಚಂದ್ರಪ್ಪನವರಿಗೆ ಯಾವುದೇ ಹುದ್ದೆ ನೀಡಿದರೂ ಎಲ್ಲವನ್ನು ಅತ್ಯಂತ ಚನ್ನಾಗಿ ನಿರ್ವಹಿಸಿದರು. ಅವರ ಕಾಲದಲ್ಲಿ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಬರಗೂರು ಎಲ್ಲಿಯೂ ಹೆಸರು ಕೆಡಿಸಿಕೊಂಡವರಲ್ಲ. ಅವರ ಕಡುವಿರೋಧಿಗಳು ಕೂಡ ಒಂದು ಮಾತನಾಡಲಿಲ್ಲ. ಈಗಲೂ ಬರಗೂರು ಅವರನ್ನು ಕಂಡರೆ ಎಲ್ಲರಿಗೂ ಗೌರವ. ರೈತರ, ದಲಿತರ ಮತ್ತು ಮಹಿಳೆಯರ ಪರವಾಗಿ ಕೆ.ಬಿ.ಸಿದ್ದಯ್ಯನವರು ಹುಟ್ಟುಹಾಕಿರುವ ದರೈಸ್ತ್ರೀ ಪ್ರಶಸ್ತಿಯನ್ನು ಸ್ವೀಕರಿಸಿರುವ ಬರಗೂರು ರಾಮಚಂದ್ರಪ್ಪನವರಿಂದ ಪ್ರಶಸ್ತಿಗೂ ಮೌಲ್ಯ ಬಂದಿದೆ ಎಂದರು.
ಬೇರೆ ಜಾತಿಗಳ ವಧು ವರರ ನಡುವೆ ಅಂತರ್ಜಾತಿ ವಿವಾಹ ನಡೆಯುವುದು ಸಾಮಾನ್ಯ. ಆದರೆ ದಲಿತರ ನಡುವೆ ಅಂತರ್ಜಾತಿ ವಿಹಾಗಳು ನಡೆಯುತ್ತಿಲ್ಲ ಎಂದು ಜಯಪ್ರಕಾಶ್ ನಾರಾಯಣ್ ಅವರು ಹೇಳುತ್ತಿದ್ದರು. ಹಾಗಾಗಿ ನಾನು ಕೆ.ಬಿ.ಸಿದ್ದಯ್ಯ ಮತ್ತು ಗಂಗರಾಜಮ್ಮ ದಲಿತರೊಳಗೆ ಅಂತರ್ಜಾತಿ ವಿವಾಹವಾದವರು ಎಂಬುದನ್ನು ಹೇಳಿ ಜೆಪಿಯಿಂದ ಶಬಾಷ್ ಗಿರಿ ಪಡೆಯುತ್ತಿದ್ದೆ ಎಂದು ತಿಳಿಸಿದರು.
ಕೆ.ಬಿ.ಸಿದ್ದಯ್ಯ ಸ್ವಾಭಿಮಾನಿಯಾಗಿದ್ದರು. ಸ್ವಯಂ ನಿಯಂತ್ರಣ ಶಕ್ತಿಯೂ ಅವರಲ್ಲಿತ್ತು. ದರೈಸ್ತ್ರಿ ಪ್ರಶಸ್ತಿ ಸ್ಥಾಪನೆ ಮಾಡಿದಾಗ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದೆವು. ಕೆ.ಬಿ.ಹಾಕಿದ ಸಸಿ ಇಂದು ಬೃಹದಾಕಾರವಾಗಿ ಬೆಳೆದು ಎಲ್ಲರಿಗೂ ನೆರಳನ್ನು ನೀಡುತ್ತಿದೆ ಎಂದು ಸ್ಮರಿಸಿದರು.
ದರೈಸ್ತ್ರಿ ಪ್ರಶಸ್ತಿಯನ್ನು ನಾಡೋಜ ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ದರೈಸ್ತ್ರಿ ಕಲ್ಚರಲ್ ಟ್ರಸ್ಟ್ ಗೌರವಾಧ್ಯಕ್ಷೆ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಟ್ರಸ್ಟ್ ಸಲಹಾ ಸಮಿತಿ ಸದಸ್ಯ ಡಾ.ಬಸವರಾಜು,ಟ್ರಸ್ಟ್ ಅಧ್ಯಕ್ಷ ರಾಮಚಂದ್ರಪ್ಪ,ಕಾರ್ಯಾಧ್ಯಕ್ಷ ಕೊಟ್ಟ ಶಂಕರ್, ಕಾರ್ಯದರ್ಶಿ ಡಾ.ಶಿವಣ್ಣತಿಮ್ಲಾಪುರ ಉಪಸ್ಥಿತರಿದ್ದರು.