ಏತನೀರಾವರಿ ಯೋಜನೆ ಹಳ್ಳ ಹಿಡಿಸಲು ಸಚಿವರ ಯತ್ನ, ನೀರು ಹರಿಸಲು ಆಗದ ಅಸಮರ್ಥ ಶಾಸಕ ಗೌರಿಶಂಕರ್ ವಿರುದ್ಧ ಸುರೇಶ್‌ಗೌಡ ವಾಗ್ದಾಳಿ

ತುಮಕೂರು : ಅಲೋಕೇಷನ್ ಇಲ್ಲದ ಕೆರೆಗಳಿಗೆ ನೀರು ಹರಿಸಿರುವವರು, ಅಲೋಕೇಷನ್
ಇರುವ ಕೆರೆಗಳಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿರುವುದು ಏಕೆ? ಕುಣಿಯಲು ಆಗದವರು
ನೆಲ ಡೊಂಕು ಎನ್ನುವಂತೆ ಗೂಳೂರು-ಹೆಬ್ಬೂರು ಏತನೀರಾವರಿ ಯೋಜನೆಯೇ ಅವೈಜ್ಞಾನಿಕ
ಎನ್ನುತ್ತಿದ್ದಾರೆ ಎಂದು ಸಚಿವ ಮಾಧುಸ್ವಾಮಿ, ಶಾಸಕ ಗೌರಿಶಂಕರ್ ವಿರುದ್ಧ ಸುರೇಶ್‌ಗೌಡ ಪರೋಕ್ಷವಾಗಿ
ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾಲ್ಕು ದಶಕಗಳ ಕಾಲ ರೈತರು ಹೋರಾಟ
ಮಾಡಿದ ಫಲವಾಗಿ ಜಾರಿಯಾದ ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ
ಎನ್ನುವವರು ತಾಂತ್ರಿಕ ಸಮಿತಿ ವರದಿಯಂತೆ ಸತತ ಮೂರು ತಿಂಗಳ ಕಾಲ ನೀರು ಹರಿಸಲಿ ಕೆರೆ
ತುಂಬುವುದೋ ಇಲ್ಲವೋ ನೋಡೋಣ ಎಂದು ಸವಾಲು ಹಾಕಿದರು.
ಈ ಹಿಂದೆ ನಾಗವಲ್ಲಿ, ಹೆಬ್ಬೂರು, ಹೊನ್ನುಡಿಕೆ, ಹೊನಸಿಗೆರೆ ಕೆರೆಗಳಿಗೆ ಇದೇ ಯೋಜನೆಯಲ್ಲಿ
ನೀರು ಹರಿಸಲಾಗಿತ್ತು, ಕೆರೆ ತುಂಬಿಸಲಾಗಿತ್ತು, ಅಲೋಕೇಷನ್ ಇಲ್ಲದ ಕೆರೆಗಳಿಗೆ ನೀರು
ಹರಿಸಿ, ಕಾನೂನು ಉಲ್ಲಂಘಿಸುವವರು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ
ನಿಗದಿಯಾಗಿರುವ ಕೆರೆಗಳಿಗೆ ನೀರು ಹರಿಸದೇ, ಏತ ನೀರಾವರಿ ಯೋಜನೆಯನ್ನು ಹಳ್ಳಹಿಡಿಸಲು
ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ನೀರು ಹರಿಸದಿದ್ದರೆ ಹೋರಾಟ: ತುಮಕೂರು
ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಯೋಜನೆಯ ಕೆರೆಗಳಿಗೆ ನೀರು ಹರಿಸದೇ ಇದ್ದರೆ
ಸತ್ಯಾಗ್ರಹ ನಡೆಸುವುದಾಗಿ ಹೇಳಿದ ಅವರು, ಅಲೋಕೇಷನ್ ಇಲ್ಲದ ಕೆರೆಗಳಿಗೆ ನೀರು
ತುಂಬಿಸುವುದನ್ನು ಬಿಟ್ಟು, ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ.ಸಿಇಒ ಅವರು ನೀರಾವರಿ ಯೋಜನೆಯ
ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.
ಗೂಳೂರು-ಹೆಬ್ಬೂರು ಏತ ನೀರಾವರಿ ಯೋಜನೆಯೊಂದಿಗೆ ಪ್ರಾರಂಭವಾದ ತಿಪಟೂರು ಬಹುಗ್ರಾಮ, ಮಾಧುಸ್ವಾಮಿ
ಅವರೇ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ, ಅರಸೀಕೆರೆಯ ಯೋಜನೆಗಳು ಯಶಸ್ವಿಯಾಗಿವೆ,
ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯ ಕೆರೆಗೆ ನೀರು ಹರಿಸಿಕೊಳ್ಳಲಾಗಿದೆ ಆದರೂ ಈ
ಯೋಜನೆ ವಿಚಾರದಲ್ಲಿ ಮಾತ್ರ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ಕಾವೇರಿ ನೀರಾವರಿ ವಿವಾದದ ನಡುವೆಯೇ ಕುಡಿಯುವ ನೀರಿನ ಹನ್ನೊಂದು ಯೋಜನೆಗಳನ್ನು
ಜಾರಿಗೆ ತಂದಿದ್ದೇನೆ, ಕುಣಿಯಲು ಆಗದವರು ನೆಲ ಡೊಂಕು ಎನ್ನುವಂತೆ ಉಸ್ತುವಾರಿ ಸಚಿವರು
ಅವೈಜ್ಞಾನಿಕ ಎನ್ನುತ್ತಿದ್ದಾರೆ, ನೀರಾವರಿ ತಜ್ಞರಾದ ಹೆಚ್.ಡಿ.ದೇವೇಗೌಡ, ಬಸವರಾಜ ಬೊಮ್ಮಾಯಿ
ಅವರ ಸಲಹೆ ಮಾರ್ಗದರ್ಶನ ಪಡೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಬರದಲ್ಲಿ ನೀರು ಸಾಧ್ಯವೇ? : 2016-17, 2017-18ರಲ್ಲಿ ಏತ ನೀರಾವರಿ ಯೋಜನೆಯಡಿ ನೀರು
ಹರಿಸಲಾಗಿಲ್ಲ ಎಂದು ಆರೋಪ ಮಾಡಲಾಗುತ್ತಿದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾದ
ಬರ ಪರಿಸ್ಥಿತಿಯಿಂದಾಗಿ 2016-17, 2017-18ರಲ್ಲಿ ಕೇವಲ ಆರು ಟಿಎಂಸಿ ನೀರು ಜಿಲ್ಲೆ
ಹರಿಸಲಾಗಿದೆ ಅಂತಹ ಬರ ಪರಿಸ್ಥಿತಿಯಲ್ಲಿ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾವೇರಿ ನೀರಾವರಿ ಪ್ರದೇಶದಲ್ಲಿ ಮಳೆಯಿಂದಾಗಿ ನೀರು ಸಮುದ್ರದ ಪಾಲಾಗುತ್ತಿದ್ದರು ಸಹ ಜಿಲ್ಲೆಯಲ್ಲಿ
ನಿಗದಿಯಾಗಿರುವ ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ಎಂತಹ ಅಸಮರ್ಥರು
ಎನ್ನುವುದನ್ನು ಜನರು ಅರ್ಥಮಾಡಿಕೊಳ್ಳಬೇಕು, ಬರೀ ಸುಳ್ಳುಗಳನ್ನೇ ಹೇಳಿಕೊಂಡು ಜನರಿಗೆ
ಮಕ್ಮಲ್ ಟೋಪಿ ಹಾಕುವುದನ್ನು ಬಿಟ್ಟು ನೀರು ಹರಿಸಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರವೀಶ್, ಮಾಜಿ ಜಿ.ಪಂ.ಸದಸ್ಯ ಗೂಳೂರು
ಶಿವಕುಮಾರ್, ಮಾಜಿ ತಾ.ಪಂ. ಸದಸ್ಯ ನರಸಿಂಹಮೂರ್ತಿ, ಎಪಿಎಂಸಿ ಅಧ್ಯಕ್ಷ ಉಮೇಶ್ ಗೌಡ, ಸಿದ್ದೇಗೌಡ ಇತರರಿದ್ದರು.