ತುಮಕೂರು ನಗರ

ತುಮಕೂರು ನಗರದ ಬಂದ್ ಯಾರ ಪುರುಷಾರ್ಥಕ್ಕಾಗಿ : ಡಾ. ರಫೀಕ್ ಅಹ್ಮದ್

ತುಮಕೂರು : ಕೆಲ ದಿನಗಳ ಹಿಂದೆ ಗುಬ್ಬಿ ಗೇಟ್‌ನಲ್ಲಿ ಯುವಕರ ನಡುವೆ ಜಗಳದಲ್ಲಿ ಭಾಗಿಯಾಗಿದ್ದ ಎಲ್ಲ ತಪ್ಪಿತಸ್ಥರ ಮೇಲೆ ಪೋಲಿಸರು ಕಠಿಣ ಕ್ರಮ ಜರುಗಿಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿ ಈ ಘಟನೆಯನ್ನು ನಾವೆಲ್ಲರೂ ಖಂಡಿಸಿದ್ದೆವು. ಅದರಂತೆ ಪೋಲಿಸ್ ಇಲಾಖೆ 307 ಸೆಕ್ಷನ್ ವಿಧಿಸಿ, ಈಗಾಗಲೇ ಆರೋಪಿಗಳನ್ನು ಬಂಧಿಸಿ ಈ ಪ್ರಕರಣ ತನಿಖಾ ಹಂತದಲ್ಲಿದೆ. ಇಷ್ಟಾದರೂ ತುಮಕೂರು ನಗರದ ಜವಾಬ್ಧಾರಿಯುತ ಸ್ಥಾನದಲ್ಲಿರುವ ಹಾಲಿ ಶಾಸಕರು ಬಂದ್ ಗೆ ಬೆಂಬಲ ನೀಡಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ಪ್ರಶ್ನಿಸಿದ್ದಾರೆ.
ಗುಬ್ಬಿ ಗೇಟ್‌ನಲ್ಲಿ ಘಟನೆ ನಡೆದ ನಂತರ ಕೆಲ ಸಂಘಟನೆಯ ಮುಖ್ಯಸ್ಥರು ಜಿಲ್ಲಾಸ್ಪತ್ರೆ ಒಳಗಡೆ ಒಬ್ಬ ಅಮಾಯಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅದೇ ದಿನ ಮತ್ತಿತರ ಕಿಡಿಗೇಡಿಗಳು ಆಸ್ಪತ್ರೆಯ ಆವರಣದಲ್ಲಿ ಅನ್ಯಕೋಮಿನ ಇಬ್ಬರು ಅಮಾಯಕ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸದೆ ಸಣ್ಣ ಪುಟ್ಟ ಕೇಸ್ ದಾಖಲಿಸಿ ಈ ಘಟನೆಯನ್ನು ಮುಚ್ಚಿಹಾಕುವ ಪಿತೂರಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಲ್ಲದೇ ನಗರದ ಹಾಲಿ ಶಾಸಕರು ವೀಲಿಂಗ್ ಮಾಡುವವರನ್ನು ಗುಂಡಿಕ್ಕಿ ಎಂದು ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡನೀಯ. ಈ ನಿಮ್ಮ ಹೇಳಿಕೆಯಿಂದ ಸಂವಿಧಾನಕ್ಕೆ ಧಕ್ಕೆಯಾಗಿದೆ. ಸಂವಿಧಾನದ ನಿಯಮದಡಿ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೀವು ಸಂವಿಧಾನ ವಿರೋಧಿ ಹೇಳೀಕೆ ನೀಡುವುದು ನಿಮ್ಮ ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ. ವೀಲಿಂಗ್ ಮಾಡುವುದು ತಪ್ಪು ಅದಕ್ಕೆ ನಮ್ಮ ವಿರೋಧವೂ ಇದೆ. ವೀಲಿಂಗ್ ವಿರುದ್ದ ಕ್ರಮ ವಹಿಸುವ ಕೆಲಸ ಪೋಲಿಸ್ ಇಲಾಖೆ ಮಾಡುತ್ತಿದೆ. ಆದರೆ ವೀಲಿಂಗ್ ಮಾಡುವವರನ್ನು ಗುಂಡಿಕ್ಕಿ ಎಂಬ ಹೇಳಿಕೆ ನೀಡುವ ಮೂಲಕ ನೈತಿಕ ಪೋಲಿಸ್ ಗಿರಿ ಮಾಡಿ ಸಮಾಜದ ಶಾಂತಿ ಕದಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಕೇವಲ ಸ್ವಯಂಪ್ರೇರಿತ ಬಂದ್ ಮಾಡುವಂತೆ ಹೇಳಿದ್ದ ಸಂಘಟನೆಗಳು ನಗರದ ಕೆಲವು ಭಾಗಗಳಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ವಾಗ್ವಾದ ನಡೆಸಿರುವುದು ಸಮಾಜ ಘಾತುವಾದ ಕೆಲಸವಾಗಿದೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ ಹಾಗೂ ಕೊರೊನಾ ಲಾಕ್‌ಡೌನ್ ನಿಂದಾಗಿ ನಷ್ಟದಲ್ಲಿರುವ ಸಣ್ಣ ಪುಟ್ಟ ವ್ಯಾಪಾರಸ್ಥರು ಈ ಒಂದು ಬಂದ್ ನಿಂದಾಗಿ ಅಪಾರ ನಷ್ಟ ಅನುಭವಿಸುವಂತಾಗಿರುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಮೆರವಣಿಗೆಯನ್ನು ಕೊರೊನಾ ನಿಯಮಾವಳಿಗಳ ಅನುಸಾರವಾಗಿ ನಿಷೇಧಿಸಿದ್ದನ್ನು ಎರಡೂ ಸಮುದಾಯದವರು ಒಪ್ಪಿ ಸರ್ಕಾರದ ನಿಯಮಗಳನ್ನು ಸ್ವಾಗತಿಸಿ ಸರಳ ಆಚರಣೆ ಮಾಡುವ ಮೂಲಕ ಕೊರೊನಾ ತಡೆಗಟ್ಟಲು ಕೈಜೋಡಿಸಿದ್ದಾರೆ. ಆದರೆ ನೆನ್ನೆ ನಡೆದ ಬಂದ್ ವೇಳೆ ಪ್ರತಿಭಟನೆ ಮಾಡುವುದಾಗಿ ಮಾತ್ರ ಒಪ್ಪಿಗೆ ಪಡೆದಿದ್ದ ಸಂಘಟನೆಗಳು ಕೊನೆ ಘಳಿಗೆಯಲ್ಲಿ ಮೆರವಣಿಗೆ ಮಾಡಲು ತೀರ್ಮಾನಿಸಿದ್ದಾರೆ ಈ ವೇಳೆ ಈ ಸಂಘಟನೆಗಳಿಗೆ ತಿಳಿ ಹೇಳುವ ಬದಲು ಖುದ್ದು ಶಾಸಕರೇ ಮೆರವಣಿಗೆಗೆ ಪ್ರೋತ್ಸಾಹಿಸಿರುವ ಮೂಲಕ ಕೋವಿಡ್ ನಿಯಮಾವಳಿ ಪಾಲಿಸದೆ ತಮ್ಮ ಅರಾಜಕತೆ ಮೆರಿದಿದ್ದಾರೆ ಎಂದು ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ದಲಿತರ ಹಾಗೂ ಹಿಂದುಳಿದವರ ಮೇಲೆ ಹಲ್ಲೆಗಳಾದಾಗ ಈ ಸಂಘಟನೆಗಳು ಎಲ್ಲಿ ಅಡಗಿದ್ದವು, ಕೇವಲ ಇವರ ಸಂಘಟನೆಯಲ್ಲಿರುವವರು ಮಾತ್ರ ಹಿಂದೂಗಳೇ, ದಲಿತರು, ಹಿಂದುಳಿದವರು ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೆರವಣಿಗೆ ಮಾಡುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಪೋಲಿಸ್ ವರಿಷ್ಠಾಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ ಸ್ವಾತಂತ್ರö್ಯ ಹೋರಾಟಗಾರರಾದ ಹಜರತ್ ಟಿಪ್ಪು ಸುಲ್ತಾನ್ ಬಗ್ಗೆ ಅವಮಾನಕರವಾಗುವಂತಹ ಅಸಭ್ಯ ಪದಬಳಕೆ ಮಾಡಿ ಘೋಷಣೆ ಕೂಗಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಇತ್ತೀಚೆಗೆ ಯುವ ಕಾಂಗ್ರೆಸ್ ಮುಖಂಡರು ಉತ್ತರಪ್ರದೇಶದಲ್ಲಿ ರೈತರ ಮೇಲಾದ ಮಾರಣಾಂತಿಕ ಹಲ್ಲೆ ಖಂಡಿಸಿ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಪ್ರತಿಕೃತಿಗೆ ಮಸಿ ಬಳಿದಾಗ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಈIಖ ದಾಖಲು ಮಾಡಿದ್ದಾg.ೆ ಅದೇ ರೀತಿಯಲ್ಲೆ ನಿನ್ನೆ ನಡೆದ ಬಂದ್ ವೇಳೆ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಘೋಷಣೆ ಕೂಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿರುವ ಕಿಡಿಗೇಡಿಗಳ ಮೇಲೆ ಕೇಸ್ ದಾಖಲು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಾ. ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.
ತುಮಕೂರು ನಗರ ಹಲವು ವರ್ಷಗಳಿಂದ ಶಾಂತಿಯುತ ವಾತಾವರಣದಿಂದ ಕೂಡಿದೆ. ಹಿಂದೂ ಮುಸ್ಲಿಂ ಸಮುದಾಯದವರು ಸೌಹಾರ್ಧಯುತವಾಗಿ ಬಾಳಿಕೊಂಡು ಬಂದಿದ್ದಾರೆ. ಕೋವಿಡ್ ನಿಂದ ಮೃತಪಟ್ಟ ಹಿಂದೂ ಮೃತದೇಹಗಳನ್ನು ಮುಸ್ಲಿಂ ಯುವಕರು ಅಂತ್ಯಸಂಸ್ಕಾರ ಮಾಡಿದ್ದಾರೆ. ಹಾಗೂ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದ ಅಲ್ಪಸಂಖ್ಯಾತ ಕುಟುಂಬಗಳಿಗೆ ಹಿಂದೂ ಯುವಕರು ಆಹಾರ ಪೂರೈಕೆ ಮಾಡುವ ಕೆಲಸ ಮಾಡಿದ್ದಾರೆ. ಇಂತಹ ಸೌಹಾರ್ಧಯುತ ನಗರದಲ್ಲಿ ಇದಾವುದನ್ನೂ ಲೆಕ್ಕಿಸದೇ ಕೋಮುಭಾವನೆ ಕೆರಳಿಸುವ ಭಾಷಣ ಮಾಡುತ್ತಾ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮೆರವಣಿಗೆ ಮಾಡಿರುವ ಈ ಸಂಘಟನೆಯ ಮುಖಂಡರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಿ ಕೇಸ್ ದಾಖಲಿಸಿ ಎಂದು ಮಾಜಿ ಶಾಸಕರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರು ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತ ಶಾಸಕರು ಇಂತಹ ಘಟನೆಗಳನ್ನು ನಿಯಂತ್ರಿಸುವ ಬದಲು ಪ್ರೋತ್ಸಾಹಿಸಿರುವುದು ಶಾಸಕ ಸ್ಥಾನಕ್ಕೆ ಮಾಡಿದ ಅವಮಾನವಾಗಿದೆ. ಹಾಲಿ ಶಾಸಕರು ಅವರದೇ ಸಮುದಾಯದ ಜನರು ಇವರಿಂದ ದೂರವಾಗುತ್ತಿರುವ ಸಂಗತಿ ತಿಳಿದು ಇಂತಹ ಪ್ರತಿಭಟನನೆ, ಬಂದ್ ಗಳಿಗೆ ಪ್ರೇರೇಪಿಸಿ ಕೇವಲ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದಕ್ಕೆ ಕ್ಷಮೆ ಯಾಚಿಸಬೇಕು ಎಂದು ತಿಳಿಸಿದ್ದಾರೆ.
ಗುಬ್ಬಿಗೇಟ್ ನಲ್ಲಿ ನಡೆದಂತಹ ಘಟನೆಗಳು ನಡೆದಾಗ ಎರಡೂ ಸಮುದಾಯದವರೊಂದಿಗೆ ಶಾಂತಿ ಸಭೆ ನಡೆಸಿ ಎಲ್ಲಾ ಸಮುದಾಯಗಳನ್ನು ಮತ್ತು ಜಾತಿಗಳನ್ನು ಅನ್ಯೋನ್ಯವಾಗಿ ಕಾಣುವುದು ಶಾಸಕರ ಜವಾಬ್ದಾರಿ. ಅದನ್ನು ಬಿಟ್ಟು ಹಾಲಿ ಶಾಸಕರು ಸೋಲಿನ ಭೀತಿಯಿಂದ ಮುಂದಿನ ಚುನಾವಣೆಗಾಗಿ ಮತಗಳ ಕ್ರೂಢೀಕರಣಕ್ಕಾಗಿ ಕೇವಲ ಒಂದು ಸಮುದಾಯದ ಓಲೈಕೆಗೆ ಮುಂದಾಗಿ ಇಂತಕ ಕೃತ್ಯಗಳನ್ನು ಮಾಡಲು ಹೊರಟಿರುವುದು ಜನಸಾಮಾನ್ಯರಿಗೆ ಮಾಡಿದ ಅಪಮಾನವಾಗಿದೆ ಎಂದು ಶಾಸಕರ ವಿರುದ್ದ ಡಾ. ರಫೀಕ್ ಅಹ್ಮದ್ ಕಿಡಿಕಾರಿದ್ದಾರೆ.

Related Articles

Back to top button
Disclaimer: WebOnline.in is not responsible for any news or content. We are only developers for this client And any type of content posted here belong's to site's owner/editor, not WebOnline.in Company

Adblock Detected

Please consider supporting us by disabling your ad blocker