ಹೇಮಾವತಿ ನೀರನ್ನು ಕಸಿಯುವ ಕುತಂತ್ರಕ್ಕೆ ಆಸ್ಪದ ಕೊಡಲ್ಲ : ಬಿ.ಸುರೇಶ್‌ಗೌಡ
ತುಮಕೂರು : ಕಳೆದ ಒಂದು ವಾರದಿಂದ ಕ್ಷೇತ್ರದ ಹೇಮಾವತಿ ನೀರಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಾದ-ವಿವಾದಗಳನ್ನು ನೀವು ಗಮನಿಸಿದ್ದೀರಿ ಎಂದು ಭಾವಿಸಿರುವೆ. ತುಮಕೂರು ಗ್ರಾಮಾಂತರ ಕ್ಷೇತ್ರ ನನ್ನ ಉಸಿರು. ಇಲ್ಲಿಗೆ ನಾನು ಕಷ್ಟಬಿದ್ದು ಹಂಚಿಕೆ ಮಾಡಿಸಿಕೊಂಡು ಬಂದಿರುವ ಹೇಮಾ ವತಿ ನೀರನ್ನು ಕಸಿಯುವ ಕುತಂತ್ರಕ್ಕೆ ನಾನು ಆಸ್ಪದ ಕೊಡಲಾರೆನು ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನನ್ನ ಜನರು ನನಗೆ ತೋರಿದ ಪ್ರೀತಿಯಿಂದ, ಕಂಗೆಟ್ಟಿರುವ ಶಾಸಕರಾದ ಡಿ.ಸಿ.ಗೌರಿ ಶಂಕರ್ ಅವರು ನನ್ನದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಹೇಳಿಸಿರುವ ತುಮಕೂರು- ಗೂಳೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂಬ ಮಾತುಗಳ ಹಿಂದಿನ ರಾಜಕೀಯ ಕುತಂತ್ರ ವನ್ನು ಅರಿಯದಷ್ಟು ನಾನು ದಡ್ಡನಲ್ಲ. ನನ್ನ ಕ್ಷೇತ್ರದ ಜನರು ಸಹ ದಡ್ಡರಲ್ಲ ಎಂದಿದ್ದಾರೆ.
ಈ ಯೋಜನೆಗಾಗಿ ಜಿಲ್ಲೆಯೇ ಮೆಚ್ಚಿದ್ದ ಜನ ನಾಯಕ ವೈ.ಕೆ.ರಾಮಯ್ಯ ಅವರ ಕನಸಿನ ಕೂಸು. ಐದು ದಶಕಗಳ ಕಾಲ ವೈಕೆಆರ್ ಸೇರಿದಂತೆ ಅನೇಕರು ಹೋರಾಟ ನಡೆಸಿದ್ದಾರೆ. ನಾನು ರಾಜ ಕಾರಣಕ್ಕೆ ಬಂದ ಬಳಿಕ ಈ ಹೋರಾಟಕ್ಕೆ ಬಲ ತಂದುಕೊಟ್ಟೆನ್ನಲ್ಲದೇ ಜನರಿಗೆ ಕೊಟ್ಟ ಮಾತಿನಂತೆ ಶಾಸಕನಾದ ಬಳಿಕ ಎಲ್ಲ ಕಷ್ಟಗ ಳನ್ನು ನೂಕಾಚೆ ದೂರ ಎಂಬಂತೆ ಎಲ್ಲ ಕಷ್ಟಗಳನ್ನು ಸಹಿಸಿ ಹಗಲು ರಾತ್ರಿ ಮುಖ್ಯಮಂತ್ರಿ, ನೀರಾವರಿ ಸಚಿವರ ಮನೆಗಳನ್ನು ಕಾದು ಯೋಜನೆಗೆ ಅನುಮತಿ ಪಡೆ ದನು. ಆ ಬಳಿಕ ಕೆರೆ ಗಳನ್ನು ಹೇ ಮಾವತಿ ನೀರಿನಿಂದಲೇ ತುಂಬಿಸಿದ್ದೇನೆ.ಗೂಳೂರು, ಹೊನ್ನುಡಿಕೆ, ಹೆಬ್ಬೂರು, ನಾಗವಲ್ಲಿ, ಬಳ್ಳಗೆರೆ, ವನಸಗೆರೆ ಸೇರಿದಂತೆ ಅನೇಕ ಕೆರೆಕಟ್ಟೆಗಳು ಹೇಮಾವತಿ ನೀರಿನಿಂದ ಕಂಗೊಳಿಸಿದವು. ಇದೇ ಕಾರಣಕ್ಕಾಗಿ ಹನ್ನೆರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೂ ಮಂಜೂರಾದವು ಎಂದು ತಿಳಿಸಿದ್ದಾರೆ.
ಕ್ಷೇತ್ರಕ್ಕೆ ಹೇಮಾವತಿ ನೀರು ಹರಿದ ಬಳಿಕ ನೀರಾವರಿ ವಿಚಾರದಲ್ಲಿ ಆದ ಬದಲಾವಣೆಗಳೆಲ್ಲ ನಿಮಗೆ ಗೊತ್ತೇ ಇದೆ. ನಾನು ಜಿಲ್ಲಾಧ್ಯಕ್ಷನಾಗಿದ್ದುಕೊಂಡು ನನ್ನ ಕ್ಷೇತ್ರದ ಕೆರೆಗಳಿಗೆ ನೀರು ಬಿಡಿಸಲು ಆಗದ ಕಾರಣ ಪಕ್ಷದ ಹುದ್ದೆ ತೊರೆದು ಮುನಿಸು ತೋರಿದ್ದೇನೆ.ಇದಾದ ಕೆಲವೇ ದಿನಗಳಲ್ಲಿ ಉಸ್ತುವಾರಿ ಸಚಿವರ ಬಾಯಲ್ಲಿ ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಮಾತುಗಳನ್ನು ಅದು ಅವರು ನಗಾಡಿಕೊಂಡು (ವಿಡಿಯೊ ಗಮನಿಸಿ) ಹೇಳಿಸಿರುವುದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಯೋಜನೆಯೊಂದು ಅವೈಜ್ಞಾನಿಕ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ನೀರಿನ ಹಂಚಿಕೆಯನ್ನು ತಡೆದು ಅದನ್ನು ಬೇರೆಡೆ ತೆಗೆದುಕೊಂಡು ಹೋಗುವುದು.ಅವೈಜ್ಞಾನಿಕದ ಹೆಸರಿನಲ್ಲಿ ನೀರು ನಿಂತರೆ ಇದನ್ನೇ ಮುಂದು ಮಾಡಿಕೊಂಡು ಸುರೇಶಗೌಡರ ರಾಜಕೀಯವನ್ನು ಶಾಶ್ವತವಾಗಿ ಮುಗಿಸಬೇಕೆಂಬ ಇಂತಹ ಕುತಂತ್ರ ಗಳಿಗೆ ಹೆದರುವ ಮನುಷ್ಯ ನಾನಲ್ಲ. ನನ್ನ ಕ್ಷೇತ್ರದ ಜನರು ಸೊಪ್ಪು ಹಾಕಬಾರದೆಂದು ಮನವಿ ಮಾಡಿದ್ದಾರೆ.
ಕ್ಷೇತ್ರದ ಸನ್ಮಾನ್ಯ ಶಾಸಕರು ಪದೇ ಪದೇ ನನ್ನ ಪಕ್ಷದ ಸಚಿವರನ್ನು ಹೊಗಳಿಕೆ ಮಾಡಿರುವುದು ನನ್ನ ಮನಸ್ಸಿನಲ್ಲಿದ್ದು, ಸಚಿವರನ್ನು ಹೊಗಳುವ ಮೂಲಕ ಕ್ಷೇತ್ರಕ್ಕೆ ಹೆಚ್ಚಿನ ನೀರನ್ನು ಬಿಡಿಸಿಕೊಳ್ಳುವ ಜಾಣ್ಮೆ ಯ ನಡಿಗೆ ಎಂದು ಒಳಗೊಳಗೆ ಖುಷಿಪಟ್ಟಿದೆ. ಆದರೆ ಕುತಂತ್ರದ ರಾಜಕಾರಣದ ಮೂಲಕ ಕ್ಷೇತ್ರದ ನೀರಾವರಿ ಯೋಜನೆಯೊಂದರ ಮೇಲೆ ತಪ್ಪು ಗೂಬೆ ಕೂರಿಸಿ ಇಡೀ ಕ್ಷೇತ್ರದ ಜನರಿಗೆ ಅನ್ಯಾಯ ಮಾಡುವ ಸಣ್ಣತನದ ಒಳತಂತ್ರ ಎಂಬುದು ಗೊತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ನನ್ನ ಕ್ಷೇತ್ರದಿಂದ ಹೇಮಾವತಿ ನೀರನ್ನು ಕಸಿಯುವ ಯಾವ ಶಕ್ತಿಗಳಿಗೂ ನಾನು ಆಸ್ಪದ ಕೊಡಲಾರೆನು ಎಂದು ನಾನು ನನ್ನ ಜನಗಳಿಗೆ ಈ ಮೂಲಕ ಹೇಳುತ್ತಿದ್ದೇನೆ. ಈ ಯೋಜನೆಗೆ ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪ, ಈಗಿನ ಮುಖ್ಯಮಂತ್ರಿಗಳಾದ, ಆಗಿನ ಬೃಹತ್ ನೀರಾವರಿ ಸಚಿವರಾಗಿದ್ದ ಬಸವರಾಜ ಎಸ್ ಬೊಮ್ಮಾಯಿ ಸಾಹೇಬರು ಅನುಮತಿ ನೀಡಿದ್ದರು. ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವ ಬೊಮ್ಮಾಯಿ ಅವರು ಯೋಜನೆಗೆ ಅನುಮತಿ ಕೊಡುವ ಕ್ಷೇತ್ರದ ನೀರಿನ ಕಷ್ಟದ ಬಗ್ಗೆ ವರದಿಯನ್ನು ಸಹ ತರಿಸಿಕೊಂಡಿದ್ದರು. ಜನರಿಗೆಒಳ್ಳೆಯದು ಮಾಡಿದ ಯೋಜನೆ ಎಂಬ ಕಾರಣಕ್ಕಾಗಿ ಈ ಯೋಜನೆ ಬಗ್ಗೆ ಅವರಿಗೆ ಇನ್ನಿಲ್ಲದ ಪ್ರೀತಿ ಇತ್ತು. ಈಗಲೂ ಈ ಯೋಜನೆಯ ಸಣ್ಣ ಸಣ್ಣ ತಾಂತ್ರಿಕ ವಿವರವೂ ಅವರಿಗೆ ಗೊತ್ತಿದೆ. ಯೋಜನೆಗೆ ಅನುಮೋದನೆಗೆ ಮುನ್ನ ತಾಂತ್ರಿಕ ಸಮಿತಿಯಿಂದ ವರದಿ ಪಡೆಯಲಾಗುತ್ತದೆ. ಯಾವುದೇ ಯೋಜನೆ ಸಾಧ್ಯತೆ ಇದ್ದಾಗ ಮಾತ್ರವೇ ಸಮಿತಿ ಅನುಮೋದನೆ ನೀಡಲಿದೆ. ಇಷ್ಟನ್ನು ಅರಿಯದಷ್ಟು ನನ್ನ ಕ್ಷೇತ್ರದ ಜನರು ದಡ್ಡರಲ್ಲ.
ನಡೆದಾಡುವ ದೇವರೇ ಆಗಿದ್ದ ಸಿದ್ದಗಂಗಾ ಮಠಾಧೀಶರಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಡಾ.ಶಿವಕುಮಾರಸ್ವಾಮೀಜಿ ಅಮೃತ ಹಸ್ತದಿಂದ ಯೋಜನೆ ಆರಂಭಗೊಂಡಿದೆ.ಈ ಯೋಜನೆಯಿಂದ ಎಲ್ಲ ಕೆರೆಗಳೂ ತುಂಬಿರುವುದನ್ನು ನನ್ನ ಕ್ಷೇತ್ರದ ನಾವು, ನೀವೆಲ್ಲ ಕಣ್ಣಾರೆ ನೋಡಿದ್ದೇವೆ. ಹೀಗಿದ್ದು ನನ್ನ ಕ್ಷೇತ್ರದಿಂದ ನೀರನ್ನು ಕಸಿಯಲು, ನನ್ನ ಕ್ಷೇತ್ರಕ್ಕೆ ಶಾಶ್ವತವಾಗಿ ಹೇಮಾವತಿ ನೀರು ಇಲ್ಲದಂತೆ ಮಾಡುವ ಇಂತ ಕುತಂತ್ರಗಳಿಗೆ ನನ್ನ ಪ್ರಾಣ ಇರೂವರೆಗೂ ಆಸ್ಪದ ಕೊಡಲಾರೆ ಎಂದು ನಾನು ನಿಮ್ಮಗಳಿಗೆ ವಾಗ್ದಾನ ಮಾಡುತ್ತಿದ್ದೇನೆ.
ಯೋಜನೆಗೆ ಅನುಮತಿ ನೀಡಿದ ಅಂದಿನ ನೀರಾವರಿ ಸಚಿವರಾ ಗಿದ್ದ,ಈಗಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರಿಗೂ ಈ ಮೂಲಕ ಅವಮಾನ ಮಾಡಲಾಗಿದೆ. ಮುಖ್ಯಮಂತ್ರಿ ಅವರಿಗೂ ಈ ಬಗ್ಗೆ ಪತ್ರ ಬರೆಯುವೆ. ಯೋಜನೆ ಅವೈಜ್ಞಾನಿಕದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಕೋರುತ್ತಿದ್ದೇನೆ. ಎಂಬುದನ್ನು ನಿಮ್ಮಗಳ ಗಮನಕ್ಕೆ ತರುತ್ತಿದ್ದೇನೆ.
ಹೇಮಾವತಿ ನೀರು ಗ್ರಾಮಾಂತರ ಕ್ಷೇತ್ರದ ಜನ್ಮಸಿದ್ಧ ಹಕ್ಕು, ಅದನೆಂದೂ ಯಾರೊಬ್ಬರು ಕಸಿಯಲು ನಾನು ಬಿಡಲಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.