ಏತ ನೀರಾವರಿ ಅವೈಜ್ಞಾನಿಕವಾಗಿದ್ದರೆ ಕ್ಷೇತ್ರ ಬಿಟ್ಟು ಹೋಗುತ್ತೀರಾ..? ಮಾಜಿ ಶಾಸಕ ಸುರೇಶ್‌ಗೌಡರಿಗೆ ಹಾಲಿ ಶಾಸಕ ಗೌರಿಶಂಕರ್ ಸವಾಲು
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ.ಸುರೇಶ್‌ಗೌಡರ ನಡುವಿನ ಕದನ ಮುಂದು ವರೆದಿದೆ, ಬಹಳ ಹಿಂದಿನಿಂದಲೂ ಇಬ್ಬರು ನಾ ಯಕರು ಪರಸ್ಪರ ಮಾತಿನ ಸಮರ ನಡೆಸುತ್ತಾ ಸದಾ ಸುದ್ದಿಯಲ್ಲಿರುತ್ತಿದ್ದರು, ಇದೀಗ ಶಾಸಕ ಗೌರಿಶಂಕರ್ ಅವರು ಸುರೇಶ್‌ಗೌಡರ ಮೇಲೆ ಹರಿಹಾಯ್ದಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿನ ಗೂಳೂರು, ಹೇಬ್ಬೂರು ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಈ ಕ್ಷೇತ್ರದ ಶಾಸಕ ಗೌರಿಶಂಕರ್ ಸಚಿವರ ಮಾತು ನೂರಕ್ಕೆ ನೂರರಷ್ಟು ಸತ್ಯ, ನಾನು ಎರಡು ವರ್ಷದ ಹಿಂದೆಯೇ ಏತ ನೀರಾವರಿ ಯೋಜನೆ ಅವೈಜ್ಞಾನಿಕ ಎಂದು ಹೇಳಿದ್ದೆ ಎನ್ನುವ ಮೂಲಕ ಸುರೇಶ್‌ಗೌಡರತ್ತ ವಾಗ್ಬಾಣ ಬಿಟ್ಟರು.
ಸುರೇಶ್ ಗೌಡ ಶಾಸಕರಾಗಿದ್ದ ಸಮಯದಲ್ಲೇ ಯೋಜನೆ ಜಾರಿಯಾಗಿದೆ. ಇದರ ವ್ಯಾಪ್ತಿಯಲ್ಲಿ ಬರುವ 49 ಕೆರೆಗಳನ್ನು ಭರ್ತಿ ಮಾಡಲು 972 ಎಂಸಿಎಫ್ಟಿ ನೀರು ಬೇಕಾಗಿದೆ, ಆದರೆ ಕೇವಲ 243.37 ಎಂಸಿಎಫ್‌ಟಿ ನೀರು ಮಾತ್ರ ಹಂಚಿಕೆ ಮಾಡಿಸಿದ್ದಾರೆ. ಇಷ್ಟು ನೀರಿನಲ್ಲಿ ಕೆರೆಗಳಿಗೆ ಹರಿಸಲು ಸಾಧ್ಯವೆ ಎಂಬುದು ಗೊತ್ತಿರಲಿಲ್ಲವೆ? ಯೋಜನೆ ಜಾರಿಯಾದ ನಂತರ ಹಿಂದಿನ ಶಾಸಕರ ಅವಧಿಯಲ್ಲಿ (2014-2018) 581 ಎಂಸಿಎಫ್‌ಟಿ ನೀರು ಹರಿಸಲಾಗಿದೆ. ನಾನು ಶಾಸಕನಾದ ನಂತರ ಈವರೆಗೆ 639 ಎಂಸಿಎಫ್‌ಟಿ ನೀರು ಹರಿದಿದೆ. ಯಾರ ಅವಧಿಯಲ್ಲಿ ಹೆಚ್ಚು ನೀರು ತುಂಬಿಸಲಾಗಿದೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಕ್ಷೇತ್ರದ ಜನರೇ ನಿರ್ಧರಿಸಬೇಕು ಎಂದರು.
ಅಗತ್ಯ ಪ್ರಮಾಣದಲ್ಲಿ ನೀರು ಹಂಚಿಕೆಯಾಗದೆ 22 ಕೆರೆಗಳಿಗೆ ಮಾತ್ರ ಹರಿಸಲಾಗುತ್ತಿದೆ, ಉಳಿದ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಮಾಡಿದ್ದರೂ ನೀರು ಕೊಟ್ಟಿಲ್ಲ, ಹೆಬ್ಬೂರು ಕೆರೆಗೆ ನೀರು ಬಿಡಲು ಸಾಧ್ಯವೇ ಆಗಿಲ್ಲ, ಈ ಕಾರಣಕ್ಕೆ 52 ಕೋಟಿ ರೂ. ನಲ್ಲಿ ಅನುಷ್ಠಾನಕ್ಕೆ ತಂದ ಯೋಜನೆ ಅವೈಜ್ಞಾನಿಕ ನಿಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿರುವುದು. ಸಚಿವರು- ಮಾಜಿ ಶಾಸಕರ ನಡುವಿನ ತಿಕ್ಕಾಟ, ಆಂತರಿಕ ಸಮಸ್ಯೆ ಮುಂದಿಟ್ಟುಕೊಂಡು ಕ್ಷೇತ್ರದ ಜನತೆಗೆ ಅನ್ಯಾಯ ಮಾಡಬೇಡಿ ಎಂದರು.
ಏತ ನೀರಾವರಿ ಯೋಜನೆಗೆ ಒಳಪಟ್ಟಿರುವ 49 ಕೆರೆಗಳನ್ನು ತುಂಬಿಸಲು 972 ಎಂಸಿಎಫ್‌ಟಿ ನೀರನ್ನು ಹೇಮಾವತಿ ಯೋಜನೆಯಲ್ಲಿ ಹಂಚಿಕೆ ಮಾಡಿಸಿಕೊಟ್ಟರೆ ಸುರೇಶ್‌ಗೌಡರ ವಿರುದ್ಧ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಇದು ಸಾಧ್ಯವಾಗದಿದ್ದರೆ ತಾವು ಕ್ಷೇತ್ರ ಬಿಟ್ಟು ಹೋಗುತ್ತೀರಾ ಎಂದು ಸುರೇಶ್‌ಗೌಡರಿಗೆ ಗೌರಿಶಂಕರ್ ಸವಾಲು ಹಾಕಿದರು.
ಗೂಳೂರು ಏತ ನೀರಾವರಿ ಯೋಜನೆ ಜಾರಿ ಯಾದ ನಂತರ ಈವರೆಗೆ ನೀರು ಪಂಪ್ ಮಾಡಿದ ವಿದ್ಯುತ್ ಬಿಲ್ 2.67 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ವಿದ್ಯುತ್ ಬಿಲ್ ಪಾವ ತಿಸಲು ನೀರಾವರಿ ಇಲಾಖೆಗೆ ಸಾಧ್ಯವಾಗಿಲ್ಲ, ಹೀಗಿರುವಾಗ ಈ ಯೋಜನೆ ಜನರಿಗೆ ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಯೋಚಿಸಿ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಮಚಂದ್ರಯ್ಯ, ಹಾಲನೂರು ಅನಂತಕುಮಾರ್, ಬೆಳಗುಂಬ ವೆಂಕಟೇಶ್, ಹಿರೇಹಳ್ಳಿ ಮಹೇಶ್, ವಿಜಯಕುಮಾರ್ ಸೇರಿದಂತೆ ಇತರರಿದ್ದರು.