ವಿಜ್ಞಾನ ಮುಂದುವರೆದರು ಜ್ಞಾನ ಮಸುಕಾಗಿದೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ
ತಿಪಟೂರು : ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತಾಲ್ಲೂಕಿನ ದಸರೀಘಟ್ಟದ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯ ಇಂದು ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.
ತಾಲ್ಲೂಕಿನ ದಸರಿಘಟ್ಟ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯವರ 29ನೇ ವರ್ಷದ ಮುಳ್ಳುಗದ್ದಿಗೆ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಮನುಷ್ಯನಲ್ಲಿ ಕಷ್ಟಕಾರ್ಪಣ್ಯಗಳು ದೂರವಾಗಲು ಭಗವಂತನ ನಾಮಸ್ಮರಣೆ ಅತಿಮುಖ್ಯವಾಗಿದೆ. ಜಗತ್ತಿನ ಸೃಷ್ಠಿಗೆ ಭಗವಂತನೇ ನೇರ ಕಾರಣ. ಮುಳ್ಳುಗಳು ಕಷ್ಟಕದ ಪ್ರತೀಕ. ಅದನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನೀಡುವವಳೇ ಚೌಡೇಶ್ವರಿದೇವಿ. ದೇವಿ ಪವಾಡದಿಂದ ಮುಳ್ಳುಗಳಂತ ಕಷ್ಟಗಳ ಮೇಲೆ ನಡೆಯುವಾಗ ಆಕೆಯ ಸ್ಮರಣೆ ಮಾಡಿದರೆ ಕಷ್ಟಗಳು ಮಂಜಿನಂತೆ ಕರಗುತ್ತವೆ. ಸಂಸಾರದ ಸಾಗರದಲ್ಲಿ ಸಹ ಕಷ್ಟಗಳು ನಿವಾರಣೆಯಾಗಲು ದೈವೀಭಕ್ತಿ ಅಗತ್ಯ. ಸುಖ ಹಾಗೂ ದುಃಖಗಳು ಬಂದಾಗ ದೇವರ ಸ್ಮರಣೆ ಮಾಡಬೇಕು. ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರೆದರೂ ಜ್ಞಾನವೆಂಬುದು ಮಸುಕಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ. ದ್ವೇಷ, ಅಸೂಹೆ, ಸ್ವಾರ್ಥತೆಯನ್ನು ಬಿಟ್ಟು ನಡೆದಾಗ ದೇವಿಯ ಆಶೀರ್ವಾದದಿಂದ ಜಯ ಸಾಧ್ಯವಾಗುತ್ತದೆ. ನಮ್ಮ ಕ್ಷೇತ್ರದ ಚೌಡೇಶ್ವರಿ ದೇವಿಗೆ ಅನೇಕರು ಭಕ್ತರಾಗಿದ್ದು ಶ್ರೀಕ್ಷೇತ್ರ ದಸರೀಘಟ್ಟ ಪುಣ್ಯಕ್ಷೇತ್ರದ ಅಭಿವೃದ್ದಿಗೆ ಚಂದ್ರಶೇಖರನಾಥ ಸ್ವಾಮೀಜಿ, ಟ್ರಸ್ಟಿಗಳು, ಗ್ರಾಮಸ್ಥರು ಇಲ್ಲಿನ ರಾಜಕಾರಣಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ ನವರಾತ್ರಿಯ ಸಂದರ್ಭದಲ್ಲಿ ಮನುಷ್ಯನಲ್ಲಿರುವ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಉತ್ತಮ ಜೀವನವನ್ನು ನಡೆಸಲು ದೇವಿಯ ಆಶೀರ್ವಾದ ಅತ್ಯವಶ್ಯವಾಗಿದೆ. ಪ್ರತಿಯೊಬ್ಬರಲ್ಲಿಯೂ ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗಿದ್ದು, ಶ್ರದ್ಧಾ ಭಕ್ತಿಯಿಂದ ನಡೆದಾಗ ದೇವಿಯೂ ಎಂದಿಗೂ ಯಾರನ್ನು ಕೈಬಿಡುವುದಿಲ್ಲ. ತಾಲ್ಲೂಕಿಗೆ ಸುಭಿಕ್ಷವಾಗಿ ಮಳೆಯಾಗಿದ್ದು ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಶ್ರೀಗಳ, ದೇವಿಯ ಆಶೀರ್ವಾದದಿಂದ ಶಾಲೆಯನ್ನು ಪ್ರಾರಂಭಿಸುತ್ತಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ದಸರೀಘಟ್ಟ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ, ಮಂಗಳೂರು ಶಾಖಾಮಠದ ಧರ್ಮಪಾಲನಾಥ ಸ್ವಾಮೀಜಿ, ಹಾಸನದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರದ ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಮಠದ ಟ್ರಸ್ಟಿ ಡಾ. ಜಿತೇಂದ್ರ, ಆಧ್ಯಾತ್ಮಿಕ ಚಿಂತಕ ರಾಮಚಂದ್ರಮೇತ್ರೆ, ಸಮಾಜ ಸೇವಕ ಕೆ.ಟಿ.ಶಾಂತಕುಮಾರ್ ಸೇರಿದಂತೆ ಗ್ರಾಮಸ್ಥರು ಭಕ್ತಾಧಿಗಳು ಇದ್ದರು.